ಸೊರಬ: ಶ್ರಾವಣ ಮಾಸಕ್ಕೂ, ಸಾಹಿತ್ಯಕ್ಕೂ ಅವಿನಾಭಾವ ಸಂಬಂಧವಿದ್ದು ಎಲ್ಲ ಹಬ್ಬಗಳಿಗೆ ನಾಂದಿ ಹಾಡುವುದು ಶ್ರಾವಣ ಮಾಸವಾಗಿದೆ ಎಂದು ಕನ್ನಡ ಸಾಹಿತ್ಯ ಪರಿಷತ್ ಅಧ್ಯಕ್ಷ ಶಿವಾನಂದ ಪಾಣಿ ಹೇಳಿದರು.
ಪಟ್ಟಣದ ನಾಮದೇವ ಹರಿಮಂದಿರದಲ್ಲಿ ಶನಿವಾರ ಕನ್ನಡ ಸಾಹಿತ್ಯ ಪರಿಷತ್ ಹಮ್ಮಿಕೊಂಡಿದ್ದ ಶ್ರಾವಣ ಸಂಭ್ರಮ ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿ, ಕನ್ನಡ ಸಾಹಿತ್ಯ ಪರಿಷತ್ತು ಜಾತಿ, ಸೀಮೆಗಳನ್ನು ಮೀರಿ ತನ್ನದೆ ಆದ ವಾಸ್ತವಿಕತೆಯನ್ನು ಜನತೆಗೆ ಕಟ್ಟಿಕೊಡುವ ಮೂಲಕ ಜನಮನ್ನಣೆ ಗಳಿಸಿದೆ. ಹಬ್ಬಗಳ ಆಚರಣೆಗೆ ಪರಂಪರೆ ಇದ್ದು ಶ್ರಾವಣ ಮಾಸ ಹೆಚ್ಚಿನ ಮಹತ್ವವನ್ನು ಪಡೆದಿದೆ. ಭಕ್ತಿ, ಸಾಹಿತ್ಯ, ಸಂಗೀತ ಈ ಮಾಸದಲ್ಲಿ ಮನೆಮಾತಾಗಿದ್ದು ದೇವರನ್ನು ನೆನೆಯುವ ಈ ಸಂದರ್ಭದಲ್ಲಿ ಕನ್ನಡ ಸಾಹಿತ್ಯದ ನುಡಿ ಪರಿಚಯ ಮಾಡಿಕೊಡುವ ಉದ್ದೇಶದಿಂದ ಶ್ರಾವಣ ಸಂಭ್ರಮ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿದೆ ಎಂದು ಹೇಳಿದರು.
ಪತ್ರಕರ್ತ ಶ್ರೀಪಾದ ಬಿಚ್ಚುಗತ್ತಿ ಉಪನ್ಯಾಸ ನೀಡಿ, ಪ್ರಪಂಚವೇ ಅಂಗೈಲಿ ಇರುವ ಈ ಸಂದರ್ಭದಲ್ಲಿ ಹಿಂದಿನ ಸಂಪ್ರದಾಯಗಳನ್ನು ಆಚರಿಸಿಕೊಂಡು ಬರಲು ಅದರ ಹಿನ್ನೆಲೆಯನ್ನು ಒಳಗೊಂಡಿರುತ್ತದೆ. ಹಿನ್ನೆಲೆಯ ಬಗ್ಗೆ ವಾಸ್ತವವನ್ನು ಅರಿತು ಸಂಪ್ರದಾಯಗಳನ್ನು ಬೆಳೆಸಿಕೊಂಡು ಹೋಗಬೇಕು. ಋಣಾತ್ಮಕ ಚಿಂತನೆಗಳಿಂದ ಮುಕ್ತರಾಗಿ ಧನಾತ್ಮಕ ಚಿಂತನೆಯನ್ನು ಮೈಗೂಡಿಸಿಕೊಳ್ಳುವ ಮೂಲಕ ವಿಕತ ಮನಸ್ಸನ್ನು ದೂರ ಮಾಡಿ ಸದ್ಗುಣಗಳನ್ನು ಹೊಂದಲು ಹಬ್ಬ ಹರಿದಿನಗಳು ಸಹಕಾರಿಯಾಗಿವೆ ಎಂದರು.
ನಾಮದೇವ ಸಿಂಪಿ ಸಮಾಜದ ಅಧ್ಯಕ್ಷ ಬಿ.ಗಿರೀಶ್ ಅಧ್ಯಕ್ಷತೆ ವಹಿಸಿದ್ದರು. ಉಪಾಧ್ಯಕ್ಷ ಬಿ.ಜಿ.ರವಿಕುಮಾರ್, ಗಾಯತ್ರಿ ರಾಕುಂಡೆ, ಉದಯ್, ರಮೇಶ್ ಇದ್ದರು.