ಮಡಿಕೇರಿ: ಬದಲಾದ ಇಂದಿನ ಕಾಲಘಟ್ಟದಲ್ಲಿ ಕೊಡವ ಭೂಮಿ ಮತ್ತು ಅತ್ಯಂತ ಸೂಕ್ಷ್ಮ ಕೊಡವ ಬುಡಕಟ್ಟು ಜನಾಂಗದ ಸಂರಕ್ಷಣೆಯ ಅನಿವಾರ್ಯತೆ ಎದುರಾಗಿದೆ ಎಂದು ಹೈ ಕೋರ್ಟ್ ನ್ಯಾಯವಾದಿ ಕೀರನ್ ನಾರಾಯಣ್ ಪ್ರತಿಪಾದಿಸಿದರು.
ಕೊಡವ ನ್ಯಾಷನಲ್ ಕೌನ್ಸಿಲ್ ಸಂಘಟನೆ ವತಿಯಿಂದ ಮಡಿಕೇರಿ ನಗರದ ಹೊರ ವಲಯದ ಕ್ಯಾಪಿಟಲ್ ವಿಲೇಜ್ ಮಂದ್‌ನಲ್ಲಿ ನಡೆದ ೨೯ನೇ ವರ್ಷದ ಸಾರ್ವತ್ರಿಕ ಕೈಲ್ ಪೊಳ್ದ್ ಹಬ್ಬದ ಸಮಾರಂಭದಲ್ಲಿ ಪಾಲ್ಗೊಂಡು ಮಾತನಾಡಿದರು.
ಕೊಡವರ ಅನನ್ಯ ಭೂಮಿ ಮತ್ತು ಸುಂದರವಾದ ಕೊಡವ ರೇಸ್ ಅನ್ನು ಒಟ್ಟಿಗೆ ಸಂರಕ್ಷಿಸಬೇಕಾಗಿದೆ. ಶಿಕ್ಷಣ, ಆರ್ಥಿಕ ಪ್ರಗತಿ ಮತ್ತು ಭವಿಷ್ಯವನ್ನು ಹುಡುಕಿಕೊಂಡು ಇಂದು ಯುವ ಜನಾಂಗ ಕೊಡಗಿನಿಂದ ಹೊರ ಹೋಗುತ್ತಿದ್ದಾರೆ. ಆದ್ದರಿಂದ ಭೂಮಿ ಮತ್ತು ಕೊಡವ ಜನಾಂಗವನ್ನು ಒಟ್ಟಿಗೆ ಸಂರಕ್ಷಿಸುವುದು ಬಹಳ ಮುಖ್ಯ. ಕೊಡವಲ್ಯಾಂಡ್ ಭೂ-ರಾಜಕೀಯ ಸ್ವಾಯತ್ತತೆಯನ್ನು ಸಾಧಿಸುವ ಮೂಲಕ ಆ ಎಲ್ಲಾ ಉತ್ತಮ ಅವಕಾಶಗಳನ್ನು ಸೃಷ್ಟಿಸಲಾಗುತ್ತದೆ ಮತ್ತು ಕೊಡವ ಜನಾಂಗದ ಸರ್ವಾಂಗೀಣ ಸಬಲೀಕರಣ ಸಶಕ್ತಗೊಳಿಸಲು ಹಾದಿ ಸುಗಮವಾಗುತ್ತದೆ ಎಂದು ಅಭಿಪ್ರಾಯಪಟ್ಟರು.
ಸಿಎನ್‌ಸಿ ಸಂಘಟನೆಯ ನ್ಯಾಯಸಮ್ಮತ ಬೇಡಿಕೆಗಳನ್ನು ಬೆಂಬಲಿಸಿ ಖ್ಯಾತ ಅರ್ಥಶಾಸ್ತ್ರಜ್ಞ ಡಾ.ಸುಬ್ರಮಣಿಯನ್ ಸ್ವಾಮಿರವರು ಕರ್ನಾಟಕದ ಹೈಕೋರ್ಟ್‌ನಲ್ಲಿ ರಿಟ್ ಅರ್ಜಿಯನ್ನು ಸಲ್ಲಿಸಿದ್ದಾರೆ. ನಾವು ಕಾನೂನು ಪ್ರಕ್ರಿಯೆಗಳಲ್ಲಿ ಅವರಿಗೆ ಸಹಾಯ ಮಾಡುತ್ತಿದ್ದೇವೆ ಎಂದು ಕೀರನ್ ನಾರಾಯಣ್ ಹೇಳೀದರು.
ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿ ಮಾತನಾಡಿದ ಸಿಎನ್‌ಸಿ ಅಧ್ಯಕ್ಷ ಎನ್.ಯು.ನಾಚಪ್ಪ, ಕೊಡವ ಜನಾಂಗದ ಹಬ್ಬಗಳು ಪ್ರಕೃತಿ ಪೂಜೆಗೆ ಪೂರಕವಾಗಿವೆ. ಇವುಗಳನ್ನು ಎಲ್ಲಾ ಕೊಡವರು ಸಾರ್ವತ್ರಿಕವಾಗಿ ಆಚರಿಸುವ ಮೂಲಕ ಕೊಡವ ಬುಡಕಟ್ಟು ಜನಾಂಗದ ಶ್ರೀಮಂತ ಮತ್ತು ವಿಶಿಷ್ಟ ಸಂಸ್ಕೃತಿಯನ್ನು ಇಡೀ ವಿಶ್ವಕ್ಕೆ ಸಾಕ್ಷೀಕರಿಸಬೇಕೆಂದು ಕರೆ ನೀಡಿದರು.
ಕೊಡವಲ್ಯಾಂಡ್ ಭೂ-ರಾಜಕೀಯ ಸ್ವಾಯತ್ತತೆ ಸೇರಿದಂತೆ ವಿವಿಧ ಬೇಡಿಕೆಗಳ ಹಕ್ಕೊತ್ತಾಯಗಳನ್ನು ಇದೇ ಸಂದರ್ಭ ಅವರು ಮಂಡಿಸಿದರು. ಸಾಂಪ್ರದಾಯಿಕ ಆಚರಣೆಯ ನಂತರ, ಸಾಂಸ್ಕೃತಿಕ ಕಾರ್ಯಕ್ರಮಗಳಾದ ತೆಂಗೆ ಬೋಡಿ, ಪರೆಯ ಕಳಿ, ಶಕ್ತಿಕೋಲ್ ಬಲಿ, ಮುಕ್ಕೋಡ್ಲು ವ್ಯಾಲಿ ಡ್ಯೂ ಸಾಂಸ್ಕೃತಿಕ ಸಂಘದಿಂದ ಕತ್ತಿಯಾಟ್, ಕೋಲಾಟ್ ಮತ್ತು ಕೊಡವ, ಕೊಡವತಿಯರ ಜಾನಪದ ಕುಣಿತ, ಕೊಡವ ಜಾನಪದ ಆಟಗಳೊಂದಿಗೆ ಸಂಭ್ರಮಿಸಲಾಯಿತು. ಯುವಕರಿಗೆ ಮತ್ತು ಮುಖ್ಯ ಅತಿಥಿಗಳಿಗೆ ಬಾಳೆ ಮರ‌್ಯಾದೆ ನೀಡಲಾಯಿತು. ಕೈಲ್ ಪೊಳ್ದ್ ಹಬ್ಬದ ಪ್ರಯುಕ್ತ ಕೊಡವ ಸಾಂಪ್ರದಾಯಿಕ ಖಾದ್ಯಗಳ ಭೋಜನವನ್ನು ನೆರೆದಿದ್ದವರು ಸವಿದರು.
ಕಾರ್ಯಕ್ರಮದಲ್ಲಿ ಪ್ರಮುಖರಾದ ಶ್ರುತಿ ಕಿರಣ್, ಸಿಎನ್‌ಸಿ ಪ್ರಮುಖರಾದ ಬೊಪ್ಪಂಡ ಬೊಳ್ಳಮ್ಮ, ಕಲಿಯಂಡ ಮೀನಾ, ಲೆಫ್ಟಿನೆಂಟ್ ಕರ್ನಲ್ ಬಿ.ಎಂ.ಪಾರ್ವತಿ, ನಂದಿನೆರವಂಡ ನಿಶಾ, ಪುಲ್ಲೇರ ಸ್ವಾತಿ ಕಾಳಪ್ಪ, ಪಟ್ಟಮಾಡ ಲಲಿತಾ, ಚೋಳಪಂಡ ಜ್ಯೋತಿ, ಬಾಚಮಂಡ ಕಸ್ತೂರಿ, ನಂದೇಟಿರ ಕವಿತ ರವಿ, ಕರವಂಡ ಸರಸು, ಬಾಚರಣಿಯಂಡ ಪ್ರಮೀಳಾ ಚಿಪ್ಪಣ್ಣ, ಮತ್ತಿತರರು ಉಪಸ್ಥಿತರಿದ್ದರು.