ಅಥಣಿ ಗ್ರಾಮೀಣ: ದೇಶದ ಸನಾತನ ಸಂಸ್ಕೃತಿಯಲ್ಲಿ ಅದ್ಭುತವಾದ ಶಕ್ತಿ ಅಡಗಿದೆ. ಈ ಮಣ್ಣಿನ ಕಣ-ಕಣದಲ್ಲಿಯೂ ದಾನ-ಧರ್ಮ, ಪರೋಪಕಾರದ ಸುವಾಸನೆ ತುಂಬಿ ತುಳುಕುತ್ತಿದೆ ಎಂದು ಭರತನೂರ ವಿರಕ್ತಮಠದ ಚಿಕ್ಕಗುರುನಂಜೇಶ್ವರ ಸ್ವಾಮೀಜಿ ಹೇಳಿದರು.
ಅಥಣಿ ತಾಲೂಕಿನ ಕೊಕಟನೂರ ಗ್ರಾಮದ ರಬಕವಿ ತೋಟದ ವಸತಿಪ್ರದೇಶದ ಶ್ರೀ ಅಪ್ಪಯ್ಯಸ್ವಾಮೀಜಿ ಜಾತ್ರಾ ಮಹೋತ್ಸವ ಅಂಗವಾಗಿ ಶನಿವಾರ ಹಮ್ಮಿಕೊಂಡಿದ್ದ ರಥದ ಕಳಸಾರೋಹಣ ಕಾರ್ಯಕ್ರಮದಲ್ಲಿ ಸಾನ್ನಿಧ್ಯ ವಹಿಸಿ ಮಾತನಾಡಿದರು. ನಮ್ಮ ಸಂಸ್ಕೃತಿ ಪರಂಪರೆ ನಾಶ ಮಾಡಲು ಸಾವಿರಾರು ವರ್ಷಗಳಿಂದ ಪ್ರಯತ್ನ ನಡೆಯುತ್ತಿದೆ. ವಿದೇಶಿಗರು ಕೂಡ ಈಗ ಭಾರತೀಯ ಜಾತ್ರೆ, ಹಬ್ಬ, ರಥೋತ್ಸವಗಳನ್ನು ನೆಚ್ಚಿ ಖುಷಿ ಪಡುತ್ತಿದ್ದಾರೆ. ಹಣ ಗಳಿಸುವ ಧಾವಂತದಲ್ಲಿ ವರ್ಷಕ್ಕೊಮ್ಮೆ ನಡೆಯುವ ಜಾತ್ರೆಗಳಲ್ಲಿ ಭಾಗವಹಿಸದಿದ್ದರೆ ಜೀವನ ವ್ಯರ್ಥ. ಸಾವಿರಾರು ವರ್ಷಗಳಿಂದ ಬಂದ ಈ ಪರಂಪರೆ ಉಳಿಸಿ ಬೆಳೆಸಲು ಶ್ರಮಿಸೋಣ ಎಂದರು.
ಬೀಳಗಿ, ಹಲಗಲಿಯ ಗುರುಪಾದ ಶಿವಾಚಾರ್ಯ ಸ್ವಾಮೀಜಿ ಆಶೀರ್ವಚನ ನೀಡಿದರು. ಶ್ರೀಗಳು ಅಪ್ಪಯ್ಯ ಸ್ವಾಮೀಜಿ ಗದ್ದುಗೆಗೆ ರುದ್ರಾಭಿಷೇಕ, ವಿಶೇಷ ಪೂಜೆ ಹಾಗೂ ನೂತನವಾಗಿ ನಿರ್ಮಿಸಲಾದ ರಥಕ್ಕೆ ಕಳಸಾರೋಹಣ ನೆರವೇರಿಸಿದರು. ಅರ್ಚಕ ಗಣಪತಿ ರಬಕವಿ, ಡಾ. ಮಲ್ಲಿಕಾರ್ಜುನ ಹಿರೇಮಠ, ಸುರೇಶ ಮುದಕಣ್ಣವರ, ಸುಭಾಷ ಸೋನಕರ, ರಾಜು ತೋಟಗಿ, ಸದಾಶಿವ ರಬಕವಿ, ಹಣಮಂತ ಬಡಿಗೇರ, ಸುರೇಶ ಕುಮಟಗಿ, ರಾಚಯ್ಯ ಮಠಪತಿ, ಬಾಳು ಧಡಕೆ, ತುಕಾರಾಮ ಭೋಸಲೆ ಇತರರಿದ್ದರು.