ಕಡೂರು: ತಾಲೂಕಿನ ಜೀವನಾಡಿ ಮದಗದಕೆರೆ ಕೋಡಿ ಹರಿದ ಬೆನ್ನಲ್ಲೇ ಸಖರಾಯಪಟ್ಟಣದ ಅಯ್ಯನಕೆರೆ ಶುಕ್ರವಾರ ತಡರಾತ್ರಿ ಕೋಡಿ ಬಿದ್ದಿದ್ದು, ಮದಗದಕೆರೆ ಭಾಗದ ಸುತ್ತಮುತ್ತಲಿನ ಗ್ರಾಮದಲ್ಲಿ ಪ್ರವಾಹದ ಭೀತಿ ಎದುರಾಗಿದೆ.
ಮದಗದಕೆರೆ ಕೋಡಿ ಮೇಲೆ ಸುಮಾರು ನಾಲ್ಕು ಅಡಿಯಷ್ಟು ನೀರು ಅಪಾಯದ ಮಟ್ಟದಲ್ಲಿ ಹರಿಯುತ್ತಿರುವುದರಿಂದ ಕೆರೆಯ ಕೆಳಭಾಗದ ರಸ್ತೆಗಳು ಸಂಪೂರ್ಣ ಜಲಾವೃತಗೊಂಡಿವೆ. ಕೆರೆ ಮೇಲ್ಭಾಲ್ಬಾಗದಲ್ಲಿರುವ ಹಲಸಿನಮರದಟ್ಟಿ, ಬಿಳಚೇನಹಳ್ಳಿ, ಹಳೆ ಸಿದ್ದರಹಳ್ಳಿ, ಹೊಸ ಸಿದ್ದರಹಳ್ಳಿ ಸೇರಿದಂತೆ ಏಳು ಗ್ರಾಮಗಳ ಸಂಪರ್ಕ ಕಡಿತಗೊಂಡಿದೆ. ಕಳೆದೊಂದು ವಾರದಿಂದ ಗಿರಿ ಶ್ರೇಣಿಗಳಲ್ಲಿ ಸುರಿದ ಮಳೆಯಿಂದಾಗಿ ಕೆರೆಯ ಬಹುಪಾಲು ರಾಜಕಾಲುವೆ ಮಾರ್ಗದ ರಸ್ತೆಗಳು ಪ್ರವಾಹದಂತೆ ಉಕ್ಕಿ ತಗ್ಗು ಪ್ರದೇಶದ ಜಮೀನು ತೋಟಗಳಿಗೆ ಹರಿದು ಹೋಗುತ್ತಿದೆ.
ಕೆರೆ ನೀರು ಅಪಾಯದ ಮಟ್ಟದಲ್ಲಿ ಹರಿಯುತ್ತಿರುವ ಹಿನ್ನಲೆಯಲ್ಲಿ ಬಹುತೇಕ ಸಣ ್ಣಪುಟ್ಟ ಸೇತುವೆಗಳು ಮುಳುಗಡೆಗೊಂಡಿದೆ. ಎಮ್ಮೆದೊಡ್ಡಿ ಗ್ರಾಮದ ಮುಂದಿನ ರಸ್ತೆಗಳ ಮಾರ್ಗ ಸಂಪರ್ಕ ಕಡಿತಗೊಂಡಿದೆ. ಮಳೆ ಆರ್ಭಟದಿಂದ ಎಮ್ಮೆದೊಡ್ಡಿ ಗ್ರಾಪಂ ವ್ಯಾಪ್ತಿಯ ಬಹುತೇಕ ಗ್ರಾಮಗಳಲ್ಲಿ ವಿದ್ಯುತ್ ಸಂಪರ್ಕ ಕಡಿತಗೊಂಡು ಗ್ರಾಮಸ್ಥರು ಕತ್ತಲೆಯಲ್ಲಿಯೇ ಕಾಲ ಕಳೆಯುವಂತಾಗಿದೆ. ಪರದೇಶಿಹಾಳ್, ಮುಸ್ಲಾಪುರದಹಟ್ಟಿ ಭಾಗದ ಕೆಲ ಮನೆಗಳಿಗೆ ಕೆರೆಯ ನೀರು ನುಗ್ಗಿದೆ.
ಮುಸ್ಲಾಪುರದ ಹಟ್ಟಿ ಭಾಗದ ಕಡೆಗೆ ಕಾಲುವೆ ಮೂಲಕ ನುಗ್ಗುತ್ತಿದ್ದ ನೀರಿನ ಪ್ರಮಾಣ ತಗ್ಗಿಸಲು ಎಮ್ಮೆದೊಡ್ಡಿ ಬಳಿಯ ಕಾಲುವೆ ಮಾರ್ಗದಲ್ಲಿ ಸಂಪರ್ಕ ಕಡಿತಗೊಳಿಸಿದ್ದ ಜಾಗವನ್ನು ದುರಸ್ತಿಪಡಿಸಿ ಬದಲಿ ವ್ಯವಸ್ಥೆ ಮಾಡಲಾಯಿತು. ಗ್ರಾಮಸ್ಥರು ನೀರಿನ ಪ್ರವಾಹದ ಪ್ರಮಾಣ ಕಡಿಮೆಗೊಳಿಸಿ ಮುಂದಿನ ಅನಾಹುತ ತಪ್ಪಿಸಲು ಸಣ್ಣನೀರಾವರಿ ಇಲಾಖೆ ಅಧಿಕಾರಿಗಳಿಗೆ ಒತ್ತಾಯಿಸಿದರು. ಸ್ಥಳಕ್ಕೆ ಪ್ರಭಾರ ತಹಸೀಲ್ದಾರ್ ಮಂಜುನಾಥ ಸ್ವಾಮಿ ಭೇಟಿ ನೀಡಿ ಪರಿಶೀಲಿಸಿದರು.