ಸುನಿಲ್ ಪೊನ್ನೇಟಿ ಮಡಿಕೇರಿ:
ಜಿಲ್ಲೆಯ ಸರ್ಕಾರಿ ಕಚೇರಿಗಳಲ್ಲಿ ಸಾರ್ವಜನಿಕ ಕೆಲಸಗಳು ನಿಗದಿತ ಸಮಯದಲ್ಲಿ ಆಗುತ್ತಿಲ್ಲ ಎನ್ನುವುದು ಸಾಮಾನ್ಯ ದೂರು. ಇದು ಒಂದೆರಡು ಇಲಾಖೆಗಳಿಗೆ ಸೀಮಿತವಾದ ಮಾತು ಅಲ್ಲ. ಸಿಬ್ಬಂದಿ ಕೊರತೆಯೇ ಈ ಸಮಸ್ಯೆಗೆ ಮೂಲ ಕಾರಣ ಎನ್ನುವುದು ಹಿರಿಯ ಅಧಿಕಾರಿಗಳ ಮಾತು. ಇಲ್ಲಿಯ ಯಾವುದೇ ಕಚೇರಿಗಳಿಗೆ ಹೋದರೂ ಖಾಲಿ ಕುರ್ಚಿಗಳೇ ಸಾರ್ವಜನಿಕರನ್ನು ಸ್ವಾಗತಿಸುತ್ತವೆ. ಕೊಡಗಿನಲ್ಲಿ ಸರ್ಕಾರದ ಎಲ್ಲಾ ಇಲಾಖೆಗಳು ಸೇರಿ ಶೇ. ೪೪ರಷ್ಟು ಪ್ರಮಾಣದಲ್ಲಿ ಹುದ್ದೆಗಳು ಖಾಲಿ ಉಳಿದುಕೊಂಡಿವೆ.
ಭಾರತದ ಸಿಡ್ಜರ್‌ಲ್ಯಾಂಡ್, ದಕ್ಷಿಣದ ಕಾಶ್ಮೀರ ಎಂದೆಲ್ಲಾ ಕರೆಯಿಸಿಕೊಳ್ಳುವ ಕೊಡಗು ಪ್ರವಾಸಿಗರ ಅಚ್ಚುಮೆಚ್ಚಿನ ತಾಣ. ದೊಡ್ಡ ಸಂಖ್ಯೆಯಲ್ಲಿ ಇಲ್ಲಿ ಆಗಮಿಸುವ ಪ್ರವಾಸಿಗರು ಒಂದೆರಡು ದಿನ ಸುತ್ತಾಡಿ ಪ್ರಕೃತಿ ಸೌಂದರ್ಯವನ್ನು ಆಸ್ವಾದಿಸಿ ಹಿಂತಿರುಗುತ್ತಾರೆ. ಖಾಸಗಿ ಸಂಸ್ಥೆಗಳ ಉದ್ಯೋಗಿಗಳು ಮಾತ್ರವಲ್ಲದೆ ಕೇಂದ್ರ ಮತ್ತು ರಾಜ್ಯ ಸರ್ಕಾರದ ಹಿರಿಯ, ಕಿರಿಯ ಅಧಿಕಾರಿಗಳು, ಸಿಬ್ಬಂದಿಯೂ ಪ್ರವಾಸಕ್ಕೆಂದು ಜಿಲ್ಲೆಗೆ ಆಗಮಿಸುವುದು ಸಾಮಾನ್ಯ ಸಂಗತಿ. ಆದರೆ ಪ್ರವಾಸಿ ತಾಣವಾಗಿ ಸರ್ಕಾರಿ ನೌರರಿಗೆ ಇಷ್ಟವಾಗುವ ಕೊಡಗು, ಕೆಲಸ ಮಾಡುವ ಸ್ಥಳವಾಗಿ ಹಿಡಿಸುವುದಿಲ್ಲ. ಕೊಡಗಿಗೆ ವರ್ಗಾ ಆಗಿದೆ ಎಂದರೆ ಅದು ಶಿಕ್ಷೆ ಎಂದೇ ಭಾವಿಸುವವರು ಹೆಚ್ಚು. ಜಿಲ್ಲೆಗೆ ವರ್ಗಾ ಆದರೆ ಅದನ್ನು ರದ್ದು ಮಾಡಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಇದರಲ್ಲಿ ವಿಫಲರಾಗಿ ಒಂದು ವೇಳೆ ಬಂದರೂ ಅಲ್ಪ ಸಮಯದಲ್ಲಿ ಮತ್ತೆ ವರ್ಗಾ ಮಾಡಿಸಿಕೊಂಡು ಇಲ್ಲಿಂದ ಜಾಗ ಖಾಲಿ ಮಾಡುತ್ತಾರೆ.
ನೇರವಾಗಿ ಕೊಡಗಿಗೆ ನೇಮಕವಾದ ಸರ್ಕಾರಿ ನೌಕರರ ಕತೆಯೂ ಇದೇ ರೀತಿ ಇರುತ್ತದೆ. ಸರ್ಕಾರದ ನಿಗದಿಪಡಿಸಿದ ಸೇವಾ ಅವಧಿ ಮುಗಿಯುತ್ತಿದ್ದಂತೆಯೇ ವರ್ಗಾ ಮಾಡಿಸಿಕೊಂಡು ಜಿಲ್ಲೆಯಿಂದ ಹೊರಗೆ ಹೋಗಿಬಿಡುತ್ತಾರೆ. ಕೊಡಗಿಗೆ ಹೊಂದಿಕೆಯಾಗಿ ಇಲ್ಲಿಯೇ ಸೇವೆ ಸಲ್ಲಿಸಿದವರು ನಿವೃತ್ತಿಯಾದವರ ಜಾಗಕ್ಕೆ ಬದಲಿ ನಿಯೋಜನೆಯೂ ಇದರಿಂದಾಗಿ ಕಷ್ಟವಾಗಿದೆ. ಹಾಗಾಗಿಯೇ ಇಲ್ಲಿಯ ಬಹುತೇಕ ಇಲಾಖೆಗಳಲ್ಲಿ ಅಧಿಕಾರಿಗಳು ಮತ್ತು ಸಿಬ್ಬಂದಿ ಮಂಜೂರಾದಷ್ಟು ಸಂಖ್ಯೆಯಲ್ಲಿ ಯಾವತ್ತು ಕೂಡ ಇರುವುದಿಲ್ಲ. ಜಿಲ್ಲೆಯಲ್ಲಿ ವಿವಿಧ ೫೮ ಇಲಾಖೆಗಳಿಗೆ ಒಟ್ಟು ೯,೦೪೪ ಮಂಜೂರಾದ ಹುದ್ದೆಗಳಿದ್ದು, ೫,೦೭೯ ಹುದ್ದೆಗಳು ಮಾತ್ರ ಭರ್ತಿ ಆಗಿದೆ. ಉಳಿದ ೩,೯೬೫ ಹುದ್ದೆಗಳು ಖಾಲಿ ಇದೆ.
ಅಧಿವೇಶನದ ಸಂದರ್ಭ ವಿಧಾನ ಪರಿಷತ್ತು ಸದಸ್ಯ ಸುಜಾ ಕುಶಾಲಪ್ಪ ಪರಿಷತ್ತಿನಲ್ಲಿ ಈ ಸಂಬಂಧ ಕೇಳಿದ್ದ ಪ್ರಶ್ನೆಗೆ ಸರ್ಕಾರದ ಅಧೀನ ಕಾರ್ಯದರ್ಶಿ ಭಾರತಿ ಶಿವಕುಮಾರ್ ಕೊಟ್ಟಿರುವ ಮಾಹಿತಿಯಲ್ಲಿ ಜಿಲ್ಲೆಗೆ ಮಂಜೂರಾಗಿರುವ ಹುದ್ದೆಗಳು, ಭರ್ತಿ ಆಗಿರುವ ಹುದ್ದೆಗಳು ಹಾಗೂ ಖಾಲಿ ಇರುವ ಹುದ್ದೆಗಳ ಬಗ್ಗೆ ಮಾಹಿತಿ ನೀಡಿದ್ದಾರೆ. ’ಪ್ರಸ್ತುತ ಕರ್ತವ್ಯ ನಿರ್ವಹಿಸುತ್ತಿರುವ ಸಿಬ್ಬಂದಿಯನ್ನು ಖಾಲಿ ಇರುವ ಹುದ್ದೆಗಳಲ್ಲಿ ಹೆಚ್ಚುವರಿ ಪ್ರಭಾರದಲ್ಲಿರಿಸಿ ದೈನಂದಿನ ಕೆಲಸ ಕಾರ್ಯಗಳನ್ನು ನಿರ್ವಹಿಸಲು ವ್ಯವಸ್ಥೆ ಮಾಡಲಾಗಿದೆ,’ ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಸದನದಲ್ಲಿ ಉತ್ತರ ಕೊಟ್ಟಿದ್ದಾರೆ.
ಸಾರ್ವಜನಿಕ ಕೆಲಸಕ್ಕೆ ವಿನಾ ಕಾರಣ ಅಲೆದಾಡಿಸಲಾಗುತ್ತದೆ. ಅಲ್ಲಿ ಹೋದರೆ ಬೇಗ ಕೆಲಸ ಆಗುವುದಿಲ್ಲ ಎನ್ನುವ ಸಾಮಾನ್ಯ ಆರೋಪ ಹೊತ್ತಿರುವ ಜಿಲ್ಲೆಯ ಕಂದಾಯ ಇಲಾಖೆಯಲ್ಲಿ ೩೬೫ ಮಂಜೂರಾದ ಹುದ್ದೆಗಳಿದ್ದು, ೨೫೮ ಹುದ್ದೆಗಳು ಭರ್ತಿಯಾಗಿವೆ. ೧೦೭ ಹುದ್ದೆಗಳು ಖಾಲಿ ಉಳಿದಿವೆ. ಇದ್ದುದರಲ್ಲಿ ಸ್ವಲ್ಪ ಸಮಧಾನ ಎಂದರೆ ಕಾನೂನು ಸುವ್ಯವಸ್ಥೆಯಲ್ಲಿ ಮಹತ್ವದ ಪಾತ್ರ ವಹಿಸುವ ಪೊಲಿಸ್ ಇಲಾಖೆಯಲ್ಲಿ ೯೩ ಹುದ್ದೆಗಳಷ್ಟೇ ಖಾಲಿ ಇದೆ. ಒಟ್ಟು ೧,೨೧೫ ಮಂಜೂರಾದ ಹುದ್ದೆಗಳ ಪೈಕಿ ೧,೧೨೨ ಹುದ್ದೆಗಳು ಭರ್ತಿಯಾಗಿವೆ.
ಜಿಲ್ಲಾ ಅಂಗವಿಕಲರ ಕಲ್ಯಾಣಾಧಿಕಾರಿ ಕಚೇರಿ, ವಿಕಲಚೇತನರ ಹಾಗೂ ಹಿರಿಯ ನಾಗರೀಕರ ಸಬಲೀರಣ ಇಲಾಖೆಯಲ್ಲಿ ೪ ಮಂಜೂರಾದ ಹುದ್ದೆಗಳೂ ಖಾಲಿ ಬಿದ್ದಿವೆ. ಜಿಲ್ಲಾ ಅಂತರ್ಜಲ ಕಚೇರಿಯದ್ದೂ ಇದೇ ಕತೆ. ಇಲ್ಲಿ ೧೧ ಮಂಜೂರಾದ ಹುದ್ದೆಗಳಲ್ಲಿ ಒಬ್ಬರು ಕೂಡ ಕರ್ತವ್ಯ ನಿರ್ವಹಿಸುತ್ತಿಲ್ಲ. ಜಿಲ್ಲಾ ನಗರಾಭಿವೃದ್ಧಿ ಕೋಶದಲ್ಲಿ ೪ ಮಂಜೂರಾದ ಹುದ್ದೆಗಳಿದ್ದು, ಒಬ್ಬರು ಮಾತ್ರ ಇಲ್ಲಿ ಏಕಪಾತ್ರಾಭಿನಯ ಮಾಡುತ್ತಿದ್ದಾರೆ. ಜಿಲ್ಲೆಯ ಪಾಲಿಗೆ ಮಹತ್ವದ್ದಾಗಿರುವ ಪ್ರವಾಸೋದ್ಯಮ ಇಲಾಖೆಯ ಸ್ಥಿತಿ ಇದಕ್ಕಿಂತ ಭಿನ್ನವಾಗಿಯೇನೂ ಇಲ್ಲ. ೫ ಮಂಜೂರಾದ ಹುದ್ದೆಗಳ ಪೈಕಿ ಒಂದರಲ್ಲಿ ಮಾತ್ರ ಕರ್ತವ್ಯ ನಿರ್ವಹಿಸಲಾಗುತ್ತಿದೆ. ಕೈ ಮಗ್ಗ ಮತ್ತು ಜವಳಿ ಇಲಾಖೆಯಲ್ಲೂ ೫ ಮಂಜೂರಾದ ಹುದ್ದೆಗಳಲ್ಲಿ ನಾಲ್ಕು ಖಾಲಿ ಇದೆ. ಜಿಲ್ಲಾ ಔಷಧ ನಿಯಂತ್ರಣ ಕಚೇರಿಯಲ್ಲಿ ೩ ಹುದ್ದೆಗಳು ಮಂಜೂರಾಗಿದ್ದು ಒಬ್ಬರು ಕರ್ತವ್ಯದಲ್ಲಿದ್ದಾರೆ.
ನಗರ ಮತ್ತು ಗ್ರಾಮಾಂತರ ಯೋಜನಾ ಇಲಾಖೆಯಲ್ಲಿ ೨ ಮಂಜೂರಾದ ಹುದ್ದೆಗಳ ಪೈಕಿ ೧ ಹುದ್ದೆ ಖಾಲಿ ಇದೆ. ವಾರ್ತಾ ಮತ್ತು ಸಾರ್ವಜನಿಕ ಸಂಪರ್ಕ ಇಲಾಖೆಯಲ್ಲಿ ೯ ಮಂಜೂರಾದ ಹುದ್ದೆಗಳಿದ್ದು, ೧ ಹುದ್ದೆ ಮಾತ್ರ ಭರ್ತಿ ಆಗಿದೆ. ಯುವ ಸಬಲೀಕರಣ ಮತ್ತು ಕ್ರೀಡಾ ಇಲಾಖೆಯಲ್ಲಿ ೪ ಮಂಜೂರಾದ ಹುದ್ದೆಗಳಿದ್ದು, ೩ ಖಾಲಿ ಉಳಿದಿದೆ. ಖಾದಿ ಮತ್ತು ಗ್ರಾಮೋದ್ಯೋಗ, ಗ್ರಾಮೀಣ ಕೈಗಾರಿಕೆಗಳು ಇಲಾಖೆಯಲ್ಲಿ ೮ ಮಂಜೂರಾದ ಹುದ್ದೆಗಳ ಪೈಕಿ ೧ ಹುದ್ದೆ ಮಾತ್ರ ಭರ್ತಿ ಆಗಿದೆ. ಜಿಲ್ಲಾ ತರಬೇತಿ ಸಂಸ್ಥೆಯಲ್ಲಿ ಮಂಜೂರಾದ ೮ ಹುದ್ದೆಗಳ ಪೈಕಿ ೭ ಖಾಲಿ ಇದೆ. ಮಡಿಕೇರಿ ಉಪವಿಭಾಗದ ರಾಷ್ಟ್ರೀಯ ಹೆದ್ದಾರಿ ಪ್ರಾಧಿಕಾರದಲ್ಲಿ ಮಂಜೂರಾದ ೭ ಹುದ್ದೆಗಳಲ್ಲಿ ೬ ಹುದ್ದೆ ಖಾಲಿ ಇದೆ.
ಪ್ರಸ್ತುತ ಕರ್ತವ್ಯ ನಿರ್ವಹಿಸುತ್ತಿರುವ ಸಿಬ್ಬಂದಿಯನ್ನು ಖಾಲಿ ಇರುವ ಹುದ್ದೆಗಳಲ್ಲಿ ಹೆಚ್ಚುವರಿ ಪ್ರಭಾರದಲ್ಲಿರಿಸಿ ದೈನಂದಿನ ಕೆಲಸ ಕಾರ್ಯಗಳನ್ನು ನಿರ್ವಹಿಸಲು ವ್ಯವಸ್ಥೆ ಮಾಡಲಾಗಿದೆ. ನೇರ ನೇಮಕಾತಿ ಮೂಲಕ ಹುದ್ದೆಗಳನ್ನು ಭರ್ತಿ ಮಾಡಲು ಕ್ರಮ ಕೈಗೊಂಡಿದೆ ಹಾಗೂ ಖಾಲಿ ಇರುವ ಮುಂಬಡ್ತಿ ಹುದ್ದೆಗಳನ್ನು ಅರ್ಹ ಅಭ್ಯರ್ಥಿಗಳು ಲಭ್ಯವಾದಂತೆ ಕಾಲಕಾಲಕ್ಕೆ ಮುಂಬಡ್ತಿ ನೀಡುವ ಮೂಲಕ ಭರ್ತಿ ಮಾಡಲಾಗಿದೆ.
ಗ್ರೂಪ್-ಸಿ ವೃಂದದ ಶೀಘ್ರ ಲಿಪಿಗಾರರು, ಬೆರಳಚ್ಚುಗಾರರು, ವಾಹನ ಚಾಲಕರು ಮತ್ತು ಗ್ರೂಪ್-ಡಿ ವೃಂದದ ಹುದ್ದೆಗಳನ್ನು ಹೊರಗುತ್ತಿಗೆ ಆಧಾರದ ಮೇಲೆ ಭರ್ತಿ ಮಾಡಿಕೊಳ್ಳಲು ಕ್ರಮ ವಹಿಸಿದೆ.
ಸಿದ್ದರಾಮಯ್ಯ, ಮುಖ್ಯಮಂತ್ರಿ