ಸುಂಟಿಕೊಪ್ಪ: ದಶಕಗಳಿಂದ ದುಸ್ಥಿಯಲ್ಲಿದ್ದ್ದ ಕೊಡಗರಹಳ್ಳಿ ಕಂಬಿಬಾಣೆ-ಚಿಕ್ಲಿಹೊಳೆ ರಸ್ತೆ ಕಾಂಕ್ರೀಟ್ ರಸ್ತೆಯಾಗಿ ಪರಿವರ್ತನೆಯಾಗಿದೆಯಾದರೂ ಚರಂಡಿ ಮತ್ತು ಫುಟ್‌ಪಾತ್ ನಿರ್ಮಿಸದ ಪರಿಣಾಮ ಪಾದಚಾರಿಗಳು ಮತ್ತು ವಾಹನ ಸವಾರರಿಗೆ ತೊಂದರೆ ಎದುರಾಗಿದೆ.
ಸುಮಾರು 11 ಕಿಮೀ ಉದ್ದದ ಈ ರಸ್ತೆಯನ್ನು ಅಂದಾಜು 1.25 ಕೋಟಿ ರೂ. ವೆಚ್ಚದಲ್ಲಿ 2 ಹಂತದಲ್ಲಿ ಅಭಿವೃದ್ಧಿಪಡಿಸಲಾಗಿದೆ. ಈ ರಸ್ತೆಯನ್ನು ರಾಜ್ಯ ಹೆದ್ದಾರಿ ಸಂಪರ್ಕ ರಸ್ತೆಯಾಗಿದ್ದು, ಕಾವೇರಿ ನೀರಾವರಿ ನಿಗಮ ಇದರ ನಿರ್ವಹಣೆಯ ಜವಾಬ್ದಾರಿ ಹೊತ್ತಿದೆ.
ಈ ರಸ್ತೆ ಚಿಕ್ಲಿಹೊಳೆ ಜಲಾಶಯ ಮತ್ತು ದುಬಾರಿ ಆನೆ ಶಿಬಿರಕ್ಕೆ ಹತ್ತಿರದ ದಾರಿಯಾಗಿದ್ದು, ಪ್ರವಾಸಿಗಾರು ಈ ಎರಡೂ ಪ್ರವಾಸಿತಾಣಗಳಿಗೆ ಕಡ್ಡಾಯವಾಗಿ ಭೇಟಿ ನೀಡುತ್ತಾರೆ. ಹೀಗಾಗಿ ವಾರಾಂತ್ಯ ಮತ್ತು ಸರಣಿ ರಜೆಗಳು ಇದ್ದಾಗ ಈ ರಸ್ತೆಯಲ್ಲಿ ದಿನದ 24 ಗಂಟೆಯೂ ವಾಹನಗಳ ಸಂಚಾರ ಇರುತ್ತದೆ. ಕೊಡಗರಹಳ್ಳಿ, ಉಪ್ಪುತೋಡು ಕಂಬಿಬಾಣೆ ರಸ್ತೆಯಲ್ಲಿ ಕಾಡಾನೆ, ಕಾಡುಕೋಣ, ಕಾಡು ಹಂದಿಗಳು ರಸ್ತೆ ದಾಟುವುದು ಸಾಮಾನ್ಯ.
ಸ್ಥಳೀಯರು ಕೃಷಿ ಚಟುವಟಿಕೆಗೆ ಇದೇ ರಸ್ತೆಯನ್ನು ಅವಲಂಬಿಸಿದ್ದಾರೆ. ರಸ್ತೆ ವಿಸ್ತರಣೆ ವೇಳೆ ಫುಟ್‌ಪಾತ್ ಮತ್ತು ಚರಂಡಿ ನಿರ್ಮಾಣಕ್ಕೆ ಆದ್ಯತೆ ನೀಡದೆ ರಸ್ತೆಯ ಎರಡೂ ಬದಿಗಳಲ್ಲಿ ಅವೈಜ್ಞಾನಿಕವಾಗಿ ಮಣ್ಣು ತುಂಬಲಾಗಿದೆ. ಇದು ವಾಹನ ಸವಾರರಿಗೆ ತೊಡಕಾಗಿ ಪರಿಣಮಿಸಿದೆ.
ಮಾನವೀಯತೆ ನೆಪದಲ್ಲಾದರೂ ವೈಜ್ಞಾನಿಕವಾಗಿ ರಸ್ತೆ ವಿಸ್ತರಣೆ, ಫುಟ್‌ಬಾತ್, ಚರಂಡಿ ವ್ಯವಸ್ಥೆ ಆಗಬೇಕಿದೆ. ಸರ್ಕಾರ, ಜನಪ್ರತಿನಿಧಿಗಳು ಹಾಗೂ ಸಂಬಂಧಿಸಿದ ಇಲಾಖೆಗಳ ಮುಖ್ಯಸ್ಥರು ಇಲ್ಲಿನ ಜಾಗದ ಮಾಲೀಕರನ್ನು ವಿಶ್ವಾಸಕ್ಕೆ ತೆಗೆದುಕೊಂಡು ಕಾಲಮಿತಿಯಲ್ಲಿ ಪರಿಹಾರ ನೀಡಿ ಭೂಸ್ವಾಧೀನ ಪ್ರಕ್ರಿಯೆ ಮಾಡಿ ಸೂಕ್ತ ಕಾಮಗಾರಿ ನಿರ್ವಹಿಸಿದರೆ ಮಾತ್ರ ಮುಂದಾಗುವ ಅನಾಹುತ ತಪ್ಪಿಸಬಹುದು.
ಆರ್.ಆರ್.ಮೋಹನ್ ಸದಸ್ಯ, ಕಂಬಿಬಾಣೆ ಗ್ರಾಮ ಪಂಚಾಯಿತಿ
ರಸ್ತೆ ಬದಿಗೆ ಹಾಕಲಾಗಿರುವ ಮಣ್ಣು ಅವೈಜ್ಞಾನಿಕವಾಗಿದ್ದು, ಈಗಾಗಲೇ ಹಲವರು ಅವಘಡಗಳಿಗೆ ತುತ್ತಾಗುತ್ತಿರುವ ಬಗ್ಗೆ ಗಮನಕ್ಕೆ ಬಂದಿದೆ. ಮಣ್ಣು ತೆರವುಗೊಳಿಸಿ ವೈಜ್ಞಾನಿಕವಾಗಿ ಮಣ್ಣು ಹಾಕುವ ಮತ್ತು ವಾಹನ ಸವಾರರಿಗೆ ತೊಂದರೆಯಾಗದ ರೀತಿಯಲ್ಲಿ ಕಾಮಗಾರಿ ಕೈಗೆತ್ತಿಕೊಳ್ಳುವಂತೆ ಮೇಲಧಿಕಾರಿಗಳಿಗೆ ಪ್ರಸ್ತಾವನೆ ಕಳುಹಿಸಲಾಗುವುದು.
ಕಿರಣ್‌ಕುಮಾರ್ ಇಂಜಿನಿಯರ್, ಕಾವೇರಿ ನೀರಾವರಿ ನಿಗಮ