ಜಿಲ್ಲೆ

ರಾ.ಹೆ ಷಟ್ಪಥ ಕಾಮಗಾರಿಯಲ್ಲಿ ಭೂಕುಸಿತ ಸಾಧ್ಯತೆ: ಕಟ್ಟೆಚ್ಚರಕ್ಕೆ ಜಿಲ್ಲಾಧಿಕಾರಿ ಸೂಚನೆ

ವಿಜಯವಾಣಿ ಸುದ್ದಿಜಾಲ ಕಾಸರಗೋಡು: ಕಾಸರಗೋಡು ತಾಲೂಕಿನಲ್ಲಿ ಚೆರ್ಕಳದಿಂದ ಚಟ್ಟಂಚಾಲ್‌ವರೆಗಿನ ರಾ.ಹೆ ಷಟ್ಪಥ ಕಾಮಗಾರಿಯಲ್ಲಿ ಭಾರಿ ಭೂಕುಸಿತ ಸಾಧ್ಯತೆ ಹಿನ್ನೆಲೆಯಲ್ಲಿ ತೀವ್ರ ಕಟ್ಟೆಚ್ಚರ ವಹಿಸಬೇಕು ಎಂದು ಜಿಲ್ಲಾಧಿಕಾರಿ ಸಂಬಂಧಪಟ್ಟ ಅಧಿಕಾರಿಗಳಿಗೆ ಸೂಚಿಸಿದರು. ಮಳೆ ಹಿನ್ನೆಲೆಯಲ್ಲಿ ಪರಿಶೀಲನೆ ನಡೆಸುತ್ತಿರುವ ಜಿಲ್ಲಾಧಿಕಾರಿ ಅಧಿಕಾರಿಗಳಿಗೆ ವಿಪತ್ತು ನಿರ್ವಹಣೆ ಕುರಿತು ಸೂಚನೆ ನೀಡಿದರು.

ಪನತ್ತಡಿ ಗ್ರಾಮದ ಕಮ್ಮಾಡಿ ಹೊಳೆಯಲ್ಲಿ ನೀರಿನಮಟ್ಟ ಏರಿಕೆಯಾಗುತ್ತಿದ್ದು, ನೆರೆನೀರು ನುಗ್ಗುವ ಸಾಧ್ಯತೆ ಇರುವ ಹಿನ್ನೆಲೆಯಲ್ಲಿ ಈ ಪ್ರದೇಶದ ಕೆಲವು ಕುಟುಂಬಗಳನ್ನು ಸುರಕ್ಷಿತ ಜಾಗಕ್ಕೆ ಸ್ಥಳಾಂತರಿಸಲು ಕ್ರಮಕೈಗೊಳ್ಳಬೇಕು ಎಂದರು.

ಎಣ್ಣಪಾರದಲ್ಲಿ ಭೂಕುಸಿತ ಭೀತಿ ಎದುರಾಗಿದ್ದು, ಜಿಪಂ ರಸ್ತೆ ಕುಸಿತಕ್ಕೀಡಾಗಿರುವುದಾಗಿ ಪಂಚಾಯಿತಿ ಅಧ್ಯಕ್ಷ ಪಿ.ಬೇಬಿ ಬಾಲಕೃಷ್ಣನ್ ಮಾಹಿತಿ ನೀಡಿದರು. ಅತಿವೃಷ್ಟಿ ಸಂದರ್ಭ ಸಮಸ್ಯೆ ಪೀಡಿತ ಪ್ರದೇಶಗಳ ಜನರನ್ನು ಸ್ಥಳಾಂತರಿಸಲು ಕಾರ್ಯಾಚರಣೆ ನಡೆಸಬೇಕು ಎಂದು ಅಧ್ಯಕ್ಷರು ಮನವಿ ಮಾಡಿದರು.

ಕಳ್ಳಾರ್ ಕುಟ್ಟಿಕಾನ ಕಾಲನಿಯಲ್ಲಿ ಭೂಕುಸಿತ ಸಂಭವಿಸುವ ಸಾಧ್ಯತೆ ಹಿನ್ನೆಲೆಯಲ್ಲಿ ಈ ಪ್ರದೇಶದ 10 ಕುಟುಂಬಗಳನ್ನು ತುರ್ತು ಕಾರ್ಯಾಚರಣೆ ಹಿನ್ನೆಲೆಯಲ್ಲಿ ಚುಲ್ಲಿಕ್ಕರ ಜಿಎಲ್‌ಪಿಎಸ್‌ಗೆ ಸ್ಥಳಾಂತರಿಸುವ ಬಗ್ಗೆ ವೆಳ್ಳರಿಕುಂಡ್ ತಹಶೀಲ್ದಾರ್‌ಗೆ ಜಿಲ್ಲಾಧಿಕಾರಿ ಸೂಚನೆ ನೀಡಿದರು.

ಮಂಜೇಶ್ವರ ತಾಲೂಕಿನ ಆನಕಲ್ಲು ಎಂಬಲ್ಲಿ ಅಕೇಶಿಯಾ ಮರಗಳು ರಸ್ತೆಗೆ ಬಿದ್ದು ಕೆಎಸ್‌ಇಬಿ ಲೈನ್‌ಗಳ ಮೇಲೆ ಬಿದ್ದು ಹಾನಿಯಾಗಿದೆ. ಮಧೂರು ಮಧುವಾಹಿನಿಪುಳ ತುಂಬಿ ಹರಿಯುವ ಸಾಧ್ಯತೆ ಇದ್ದು, ತಗ್ಗುಪ್ರದೇಶದ ಜನತೆ ಜಾಗ್ರತೆ ಪಾಲಿಸುವಂತೆ ಸೂಚಿಸಲಾಗಿದೆ. ಜಿಲ್ಲೆಯ ವಿವಿಧ ತಾಲೂಕು ಕೇಂದ್ರಗಳಲ್ಲಿ ಪ್ರತ್ಯೇಕ ನಿಯಂತ್ರಣ ಕೊಠಡಿ ತೆರೆಯಲಾಗಿದೆ ಎಂದರು.

ಆರೋಗ್ಯ, ಮೀನುಗಾರಿಕೆ ಸೇರಿದಂತೆ ವಿವಿಧ ಇಲಾಖೆಗಳು ಜಾಗ್ರತಾ ಸ್ಥಿತಿಯಲ್ಲಿರುವಂತೆಯೂ ಸೂಚಿಸಲಾಗಿದೆ. ಜಿಪಂ ಅಧ್ಯಕ್ಷ ಪಿ. ಬೇಬಿ ಬಾಲಕೃಷ್ಣನ್, ಅಪರ ಜಿಲ್ಲಾಧಿಕಾರಿ ಸುಫಿಯಾನ್ ಅಹಮದ್, ಹೆಚ್ಚುವರಿ ಎಸ್.ಪಿ ಪಿ.ಬಾಲಕೃಷ್ಣನ್ ನಾಯರ್, ಕಾಸರಗೋಡು ಆರ್‌ಡಿಒ ಪಿ. ಬಿನುಮೋನ್, ಎನ್‌ಎಚ್‌ಎಐ ಅಧಿಕಾರಿ ಸೇತುಮಾಧವನ್ ಉಪಸ್ಥಿತರಿದ್ದರು.

ಇಂದು ರಜೆ

ಜಿಲ್ಲೆಯ ಶಾಲಾ ಕಾಲೇಜುಗಳಿಗೆ ಜು.31ರಂದು ರಜೆ ಘೋಷಿಸಿ ಜಿಲ್ಲಾಧಿಕಾರಿ ಕೆ.ಇನ್ಬಾಶೇಖರ್ ಆದೇಶ ಹೊರಡಿಸಿದ್ದಾರೆ. ಪೂರ್ವನಿಗದಿತ ಪರೀಕ್ಷೆಗಳು ಯಥಾಪ್ರಕಾರ ನಡೆಯಲಿರುವುದು ಎಂದು ಪ್ರಕಟಣೆ ತಿಳಿಸಿದೆ.