ಜಿಲ್ಲೆ

ಕಲೆಯನ್ನು ಉಳಿಸಿಕೊಳ್ಳುವ ಅನಿವಾರ್ಯತೆಯಿದೆ

ಆದರ್ಶ್. ಎಂ.ಕೆ.

ಕುಶಾಲನಗರ: ಕೇಂದ್ರ ಕನ್ನಡ ಸಾಹಿತ್ಯ ವೇದಿಕೆ ಇವರ ವತಿಯಿಂದ ೭೯ನೇ ಸ್ವಾತಂತ್ರ್ಯೋತ್ಸವದ ಅಂಗವಾಗಿ ಜಿಲ್ಲಾ ಮಟ್ಟದ ಕವಿಗೋಷ್ಠಿ ಕಾರ್ಯಕ್ರಮ ಕುಶಾಲನಗರದ ಮಹಿಳಾ ಸಮಾಜ ಸಭಾಂಗಣದಲ್ಲಿ ಹಮ್ಮಿಕೊಳ್ಳಲಾಯಿತು.

ಕರ್ನಾಟಕ ರಾಜ್ಯ ಒಳಚರಂಡಿ ಅಭಿವೃದ್ಧಿ ನಿಗಮ ಹಾಗೂ ಕೊಡಗು ಜಿಲ್ಲಾ ಪಂಚಾಯಿತಿಯ ಮಾಜಿ ಅಧ್ಯಕ್ಷ ಕೆ.ಪಿ.ಚಂದ್ರಕಲಾ ಅವರು ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿ, ಇಂತಹ ಕಾರ್ಯಕ್ರಮ ಎಲ್ಲಾ ಕವಿಗಳಿಗೆ ಸ್ಪೂರ್ತಿದಾಯಕ. ಸ್ಪರ್ಧಾತ್ಮಕ ಪ್ರಪಂಚದಲ್ಲಿ ದಿನನಿತ್ಯ ಹಲವರು ಪ್ರತಿಭೆಗಳು ಹೊರ ಹೊಮ್ಮುತ್ತಿದ್ದಾರೆ. ಈ ಕಲೆಯನ್ನು ಉಳಿಸಿಕೊಳ್ಳಬೇಕಾಗಿದೆ ಎಂದು ಕಿವಿ ಮಾತು ಹೇಳಿದರು.

ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದ ಕೇಂದ್ರ ಕನ್ನಡ ಸಾಹಿತ್ಯ ವೇದಿಕೆ ಜಿಲ್ಲಾಧ್ಯಕ್ಷ ಡಾ.ಎಚ್.ಎಂ.ರಘು ಕೋಟಿ ಮಾತನಾಡಿ, ತಮ್ಮ ಪ್ರತಿಭೆ ಹೊರಹೊಮ್ಮಲು ಯಾವುದೇ ಪದವಿಗಳ ಅವಶ್ಯಕತೆ ಇಲ್ಲ. ಅದು ಸ್ತುಪ್ತ ಮನಸಿನಿಂದ ಹೊರ ಹೊಮ್ಮಿ ಜಗತ್ತಿಗೆ ಅನಾವರಣಗೊಳ್ಳುತ್ತದೆ. ತಮಗೊಲಿದ ಕಲೆಯನ್ನು ನಿಷ್ಠೆಯಿಂದ ಸದುಪಯೋಗ ಪಡಿಸಿಕೊಳ್ಳಬೇಕೆಂದರು.

ಹಿರಿಯ ಸಾಹಿತಿಗಳಾದ ಭಾರದ್ವಾಜ್.ಕೆ.ಅನಂತ ತೀರ್ಥ ಮಾತನಾಡಿ, ಕಾವ್ಯ, ಕವಿತೆಯಲ್ಲಿ ಆಸಕ್ತಿ ಇರುವವರು ಪ್ರಾಸ ಬದ್ಧವಾಗಿ ಕಲಿಕಾ ಮಾರ್ಗವನ್ನು ಅನುಸರಿಸಬೇಕು ಎಂದು ನೆರೆದಿದ್ದ ಕವಿಗಳಿಗೆ ಮತ್ತು ಸಾಹಿತ್ಯ ಪ್ರಿಯರಿಗೆ ಕಿವಿ ಮಾತನ್ನು ಹೇಳಿದರು.

ಕಾರ್ಯಕ್ರಮದಲ್ಲಿ ಕೇಂದ್ರ ಕನ್ನಡ ಸಾಹಿತ್ಯ ವೇದಿಕೆಯ ಜಿಲ್ಲಾ ಉಪಾಧ್ಯಕ್ಷೆ ರಾಣಿ ರವೀಂದ್ರ, ಸಂಚಾಲಕರಾದ ಮಹೇಂದ್ರರವರು ಉಪಸ್ಥಿತರಿದ್ದರು. ಕವಿಗೋಷ್ಠಿಯಲ್ಲಿ ೨೦ಕ್ಕೂ ಹೆಚ್ಚು ಕವಿಗಳು, ಪಾಲ್ಗೊಂಡಿದ್ದರು.