ಬಂಕಾಪುರ: ಪಟ್ಟಣದ ಬಹುತೇಕ ಓಣಿ, ಪಟ್ಟಣ ಪ್ರವೇಶಿಸುವ ನಾಲ್ಕು ದಿಕ್ಕುಗಳಲ್ಲಿ ರಸ್ತೆಗಳ ಅಕ್ಕಪಕ್ಕ ಎಲ್ಲೆಂದರಲ್ಲಿ ತ್ಯಾಜ್ಯ, ಕೊಳಚೆ ಹರಡಿಕೊಂಡಿದ್ದು, ಪಟ್ಟಣ ಕೊಳಚೆ ಪ್ರದೇಶವೇನೋ ಎಂಬಂತೆ ಭಾಸವಾಗುತ್ತದೆ.
ಪಟ್ಟಣದ ಬಹುತೇಕ ವಾರ್ಡ್ಗಳಲ್ಲಿ ಚರಂಡಿಗಳು ತ್ಯಾಜ್ಯದಿಂದ ತುಂಬಿಕೊಂಡು ದುರ್ವಾಸನೆ ಬೀರುತ್ತಿವೆ. ಮಳೆ ಬಂದರೆ ರಸ್ತೆ ತುಂಬ ಕಲ್ಮಶಯುಕ್ತ ನೀರು ಹರಿಯುತ್ತದೆ. ಒಳಚರಂಡಿಯಿಂದಲೂ ದುರ್ವಾಸನೆ ಹರಡುತ್ತಿದೆ. ಹಗಲಲ್ಲಿ ರಸ್ತೆಗಳಲ್ಲಿ ಮೂಗು ಮುಚ್ಚಿಕೊಂಡು ಓಡಾಡುವ ಸ್ಥಿತಿಯಿದ್ದರೆ, ಸಂಜೆಯಾದರೆ ಸಾಕು ಸೊಳ್ಳೆ ಹಾವಳಿ ವಿಪರೀತವಾಗುತ್ತದೆ.
ಪ್ರಮುಖವಾಗಿ ಚಿಕನ್ ಮತ್ತು ಮೀನು ಮಾರಾಟದ ಅಂಗಡಿಗಳ ತ್ಯಾಜ್ಯ ಪಟ್ಟಣವನ್ನು ಕಲುಷಿತಗೊಳಿಸಿದೆ. ಕೆಲವರು ಅಂಗಡಿ ಪಕ್ಕದಲ್ಲಿರುವ ಚರಂಡಿಗೆ ತ್ಯಾಜ್ಯ ಚೆಲ್ಲಿದರೆ, ಇನ್ನು ಕೆಲವರು ರಾತ್ರಿ ಹೊತ್ತು ಪಟ್ಟಣದ ಹೊರರಸ್ತೆಗಳ ಪಕ್ಕ ಎಸೆದು ಬರುತ್ತಿದ್ದಾರೆ. ಈ ಬಗ್ಗೆ ಪುರಸಭೆ ಅಧಿಕಾರಿಗಳ ಗಮನಕ್ಕೆ ತಂದರೆ, ವಿಲೇವಾರಿ ಮಾಡುತ್ತಿದ್ದೇವೆ ಎಂದು ಹೇಳುತ್ತಾರೆ. ಆದರೆ, ಕೆಲ ತಿಂಗಳಿನಿಂದ ಪುರಸಭೆ ವಾಹನವನ್ನು ಚಿಕನ್ ಅಂಗಡಿಗಳ ತ್ಯಾಜ್ಯ ವಿಲೇವಾರಿಗೆ ಬಳಕೆ ಮಾಡಿಲ್ಲ. ಯಾರೋ ಖಾಸಗಿಯವರು ತ್ಯಾಜ್ಯವನ್ನು ಎಲ್ಲಿಗೋ ಒಯ್ಯುತ್ತಿದ್ದಾರೆ ಎಂದು ಪೌರ ಕಾರ್ವಿುಕರು ಮಾಹಿತಿ ನೀಡುತ್ತಾರೆ. ಇದು ಸಂಶಯಕ್ಕೆ ಎಡೆಮಾಡಿಕೊಡುತ್ತಿದೆ.
ಹಳೇಬಂಕಾಪುರ ಗುಡ್ಡದಲ್ಲಿ ತ್ಯಾಜ್ಯ ವಿಲೇವಾರಿ ಘಟಕವಿದ್ದು, ಪಟ್ಟಣದ ಎಲ್ಲ ಕಸವನ್ನು ಅಲ್ಲಿಗೆ ಸಾಗಿಸಲು ಒಂಬತ್ತು ವಾಹನ ಮತ್ತು ಪೌರ ಕಾರ್ವಿುಕರನ್ನು ನೇಮಿಸಲಾಗಿದೆ. ನಿತ್ಯ ಎರಡರಿಂದ ಮೂರು ಲೋಡ್ ಕಸ ಮಾತ್ರ ವಿಲೇವಾರಿ ಘಟಕ ತಲುಪುತ್ತದೆ. ಉಳಿದ ಕಸವನ್ನು ಪಟ್ಟಣದ ಹೊರಗಡೆ ರಸ್ತೆ ಪಕ್ಕದಲ್ಲಿ ಎಲ್ಲೆಂದರಲ್ಲಿ ಬಿಸಾಕಲಾಗುತ್ತಿದೆ. ಪಟ್ಟಣದ ಬಾಡ ಸರ್ಕಲ್, ಹಳ್ಳದ ಪಕ್ಕದ ಶಿಗ್ಗಾಂವಿ ರಸ್ತೆ, ಮುಂಡಗೋಡ ರಸ್ತೆ, ಹಾವೇರಿ ರಸ್ತೆಯ ಎರಡೂ ಬದಿಗಳಲ್ಲಿ ನಿರುಪಯುಕ್ತ ವಸ್ತುಗಳು, ಕಸದ, ಸತ್ತ ನಾಯಿ, ಹಂದಿಗಳ ದುರ್ನಾತದಿಂದಾಗಿ ಪಟ್ಟಣ ಗಬ್ಬೆದ್ದು ನಾರುವಂತೆ ಆಗಿದೆ.
ಪಟ್ಟಣದಲ್ಲಿ ಖಾಲಿ ನಿವೇಶನಗಳಲ್ಲೂ ಗಿಡಗಂಟಿ ಬೆಳೆಯುವ ಜತೆಗೆ ತ್ಯಾಜ್ಯ ತುಂಬಿಕೊಂಡಿದೆ. ಇದರಿಂದ ಅಕ್ಕಪಕ್ಕದ ನಿವಾಸಿಗಳಿಗೆ ದೊಡ್ಡ ಸಮಸ್ಯೆಯಾಗಿದೆ. ಪಟ್ಟಣದ ಮಧ್ಯಭಾಗದಲ್ಲಿನ ಆಸಾರ ಸರ್ಕಲ್ನಲ್ಲಿನ ದರ್ಗಾಕ್ಕೆ ಸಂಬಂಧಿಸಿದ ಖಾಲಿ ಜಾಗದಲ್ಲಿ ಎಸೆಯುವ ಸತ್ತ ಪ್ರಾಣಿಗಳ ಮತ್ತು ಮೀನಿನ ತ್ಯಾಜ್ಯದ ಗಬ್ಬು ವಾಸನೆಯಿಂದ ಸ್ಥಳೀಯ ನಿವಾಸಿಗಳು ತೀವ್ರ ಸಮಸ್ಯೆ ಅನುಭವಿಸುವಂತಾಗಿದೆ.
ಪುರಸಭೆ ಅಧಿಕಾರಿಗಳು ಕೂಡಲೇ ಸೂಕ್ತ ಕ್ರಮ ಕೈಗೊಂಡು ತ್ಯಾಜ್ಯ ವಿಲೇವಾರಿಗೆ ಮುಂದಾಗಬೇಕು ಎಂದು ಸಾರ್ವಜನಿಕರು ಒತ್ತಾಯಿಸಿದ್ದಾರೆ.
ತ್ಯಾಜ್ಯ ವಿಲೇವಾರಿ ಮಾಡದಿರುವ ಕುರಿತು ಪುರಸಭೆ ಅಧಿಕಾರಿಗಳ ಗಮನಕ್ಕೆ ತಂದರೂ ಗಮನಹರಿಸುತ್ತಿಲ್ಲ. ಚರಂಡಿಗಳ ದುರ್ನಾತಕ್ಕೆ ಬೇಸತ್ತ ಜನರು ನಮಗೆ ಘೕರಾವ್ ಹಾಕುತ್ತಿದ್ದಾರೆ. ಮುಂದಿನ ದಿನಗಳಲ್ಲಿ ಸರಿಯಾಗಿ ಕಸ ವಿಲೇವಾರಿ ಮಾಡದಿದ್ದರೆ ವಾರ್ಡ್ ಜನರ ಜತೆ ಪುರಸಭೆ ಮುಂದೆ ಪ್ರತಿಭಟನೆ ಮಾಡಬೇಕಾಗುತ್ತದೆ. | ಮಂಜಪ್ಪ ತಳವಾರ, ಪುರಸಭೆ ಸದಸ್ಯ ಹಳೇಬಂಕಾಪುರ ಗುಡ್ಡದಲ್ಲಿ ನಾಯಿಗಳ ಹಾವಳಿ ಹೆಚ್ಚಾದ ಕಾರಣ ಅಲ್ಲಿನ ಸ್ಥಳೀಯರು ಚಿಕನ್ ತ್ಯಾಜ್ಯ ಹಾಕದಂತೆ ಮನವಿ ಮಾಡಿದ್ದರು. ಇದಲ್ಲದೇ ಖಾಸಗಿಯವರು ತಮ್ಮ ಸ್ವಂತ ವಾಹನದಲ್ಲಿ ಚಿಕನ್ ತ್ಯಾಜ್ಯವನ್ನು ಬೇರೆ ಉಪಯೋಗಕ್ಕೆ ಬಳಕೆ ಮಾಡುತ್ತಿದ್ದರಿಂದ ನಾವು ತ್ಯಾಜ್ಯ ವಿಲೇವಾರಿ ಮಾಡುತ್ತಿರಲಿಲ್ಲ. ಖಾಸಗಿಯವರು ಈಗ ಬರುತ್ತಿಲ್ಲ ಎಂದು ಗೊತ್ತಾಗಿದೆ. ನಾಳೆಯಿಂದಲೇ ಪಟ್ಟಣದ ಕಸ ಮತ್ತು ಚಿಕನ್ ತ್ಯಾಜ್ಯವನ್ನು ವಿಲೇವಾರಿ ಮಾಡಲಾಗುವುದು. | ರೂಪಾ ಬಿ. ನಾಯ್ಕ, ನೈರ್ಮಲ್ಯಾಧಿಕಾರಿ ಪುರಸಭೆ ಬಂಕಾಪುರ