ಮುಂಡಗೋಡ: ತಾಲೂಕಿನ ಪಾಳಾ ಗ್ರಾಮದ ದೊಡ್ಡ ಕೆರೆ ಭರ್ತಿಯಾಗಿ ಕೋಡಿಗಳಲ್ಲಿ ಸರಿಯಾಗಿ ನೀರು ಹರಿದು ಹೋಗದ ಪರಿಣಾಮ ಕೆರೆ ಒಡೆಯುವ ಹಂತದಲ್ಲಿದೆ ಎಂದು ಗ್ರಾಮಸ್ಥರು ಸಣ್ಣ ನೀರಾವರಿ ಇಲಾಖೆ ಅಧಿಕಾರಿಗಳಿಗೆ ಮುತ್ತಿಗೆ ಹಾಕಿದ ಘಟನೆ ಸೋಮವಾರ ನಡೆದಿದೆ.
ತಾಲೂಕಿನ ಪಾಳಾ ಗ್ರಾಮದ ಪಕ್ಕ 33 ಎಕರೆ ಪ್ರದೇಶದಲ್ಲಿ ದೊಡ್ಡ ಪ್ರಮಾಣದ ಕೆರೆಯಿದೆ. ಕೆರೆಯಿಂದ ನೂರಾರು ಎಕರೆ ಭೂಮಿಗೆ ನೀರು ಹಾಯುತ್ತದೆ. ಆದರೆ, ಕೆರೆಯ ಕೋಡಿಗಳಲ್ಲಿ ಸರಿಯಾಗಿ ನೀರು ಹರಿದು ಹೋಗದ ಕಾರಣ ಇದೀಗ ಕೆರೆಯಲ್ಲಿ ಹೆಚ್ಚಿನ ಪ್ರಮಾಣದ ನೀರು ಸಂಗ್ರಹವಾಗಿ ಕೆರೆ ಒಡೆಯವ ಆತಂಕ ಗ್ರಾಮಸ್ಥರು ಹಾಗೂ ರೈತರನ್ನು ಕಾಡುತ್ತಿದೆ.
ಕೆಲ ದಿನಗಳಿಂದ ಧಾರಾಕಾರ ಮಳೆ ಸುರಿಯುತ್ತಿರುವ ಕಾರಣ ಈ ಕೆರೆಗೆ ಹೆಚ್ಚಿನ ಪ್ರಮಾಣದ ನೀರು ಹರಿದು ಬರುತ್ತಿದೆ. ಆದರೆ, ಹೆಚ್ಚುವರಿ ನೀರು ಹರಿದು ಹೋಗಲು ಸರಿಯಾದ ಕಾಲುವೆಗಳಿಲ್ಲದೆ ಕೆರೆಯಲ್ಲಿ ಅಪಾರ ಪ್ರಮಾಣದ ನೀರು ಸಂಗ್ರಹವಾಗಿದ್ದು, ಇದರಿಂದ ಕೆರೆಯ ಒಡ್ಡು ಒಡೆಯುವ ಭಯ ಕಾಡುತ್ತಿದೆ.
ಅಧಿಕಾರಿಗೆ ಮುತ್ತಿಗೆ: ಸಣ್ಣ ನೀರಾವರಿ ಇಲಾಖೆಯ ಸಹಾಯಕ ಇಂಜಿನಿಯರ್ ಥಾಕು ಸುಕ್ರು ಗೌಡ ಹಾಗೂ ಆರ್.ಎನ್. ನಾಯ್ಕ ಸೋಮವಾರ ಬೆಳಗ್ಗೆ ಕೆರೆ ವೀಕ್ಷಣೆ ಮಾಡಲು ತೆರಳಿದ್ದರು. ಈ ವೇಳೆ ಗ್ರಾಮಸ್ಥರು ಅಧಿಕಾರಿಗಳನ್ನು ತರಾಟೆ ತೆಗೆದುಕೊಂಡು ಮುತ್ತಿಗೆ ಹಾಕಿದರು. ಕೆರೆಗಳನ್ನು ಯಾವ ರೀತಿ ನಿರ್ವಹಣೆ ಮಾಡುತ್ತೀರಿ, ಕೆರೆಯಿಂದ ಹೊರಗಡೆ ನೀರು ಸರಿಯಾಗಿ ಹರಿದು ಹೋಗುತ್ತಿಲ್ಲ. ಕೆರೆ ಒಡೆದರೆ ನೂರಾರು ಎಕರೆ ಪ್ರದೇಶದ ಬೆಳೆಗಳು ಜಲಾವೃತವಾಗುತ್ತವೆ. ತಹಸೀಲ್ದಾರ್ ಸ್ಥಳಕ್ಕೆ ಬರುವವರೆಗೂ ನೀವು ಇಲ್ಲಿಂದ ಹೋಗುವಂತಿಲ್ಲ ಎಂದು ಪಟ್ಟು ಹಿಡಿದರು.
ಕಾಲುವೆ ಅತಿಕ್ರಮಣ: ಕೆರೆಯ ನೀರು ಹರಿದು ಹೋಗುವ ಕಾಲುವೆಯ ಬಳಿ ಕೆಲವರು ಮನೆ ನಿರ್ವಿುಸಿದ್ದಾರೆ. ಇನ್ನು ಸಿಮೆಂಟ್ ರಸ್ತೆಯನ್ನು ಸಹ ಮಾಡಲಾಗಿದೆ. ಇದರಿಂದ ಕೆರೆಯ ನೀರು ಸಣ್ಣದಾಗಿ ಹರಿದು ಹೋಗಲು ಪೈಪ್ ಅಳವಡಿಸಿದ್ದರಿಂದ ಕೆರೆಯ ಕೋಡಿಯಲ್ಲಿ ಸಣ್ಣದಾಗಿ ನೀರು ಹೋಗುತ್ತಿದೆ. ಕೆರೆಗೆ ಒಳಹರಿವು ಹೆಚ್ಚಾಗಿದ್ದು, ಹೊರ ಹರಿವು ಅಲ್ಪ ಪ್ರಮಾಣದ್ದಾಗಿದೆ. ಇದರಿಂದ ಕೆರೆಯ ಹಿನ್ನೀರಿನಲ್ಲಿ ಐವತ್ತು ಎಕರೆಯಷ್ಟು ಭತ್ತದ ಬೆಳೆ ಮುಳುಗಡೆಯಾಗಿದೆ.
ತಹಸೀಲ್ದಾರ್ ಭೇಟಿ: ತಹಸೀಲ್ದಾರ್ ಶಂಕರ ಗೌಡಿ ಸಂಜೆ ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿದರು. ಈ ವೇಳೆ ಸಾರ್ವಜನಿಕರು ಹಾಗೂ ಅಧಿಕಾರಿಗಳಿಂದ ಮಾಹಿತಿ ಪಡೆದರು. ಕಾಲುವೆಯನ್ನು ಅಗಲ ಮಾಡಿ ನೀರು ಹರಿದು ಹೋಗಲು ಕ್ರಮ ಜರುಗಿಸಲಾಗುವುದು. ಕಾಲುವೆ ಅತಿಕ್ರಮಣವನ್ನು ಶೀಘ್ರ ತೆರವುಗೊಳಿಸಲಾಗುವುದು ಎಂದು ಭರವಸೆ ನೀಡಿದರು.