ಜಿಲ್ಲೆ

ಕಟ್ಟಡವಿದ್ದರೂ ಸಲಕರಣೆಗಳಿಲ್ಲ

ಕೋಲಾರ ಡೆಸ್ಕ್

ಬಂಗಾರಪೇಟೆ ಆಸ್ಪತ್ರೆಯಲ್ಲಿ ಸಿಬ್ಬಂದಿ ಕೊರತೆ

ಬೂದಿಕೋಟೆ: ಬಂಗಾರಪೇಟೆ ಸಾರ್ವಜನಿಕ ಆಸ್ಪತ್ರೆಯು ಜಿಲ್ಲೆಯ ಇತರ ತಾಲೂಕು ಆಸ್ಪತ್ರೆಗಳಿಗಿಂತ ದೊಡ್ಡ ಆಸ್ಪತ್ರೆ ಎಂಬ ಹೆಗ್ಗಳಿಕೆ ಪಡೆದಿದ್ದರೂ ಹಲವು ಸಮಸ್ಯೆಗಳನ್ನು ಎದುರಿಸುತ್ತಿದ್ದು, ಸ್ಕ್ಯಾನಿಂಗ್​ ತಂತ್ರಜ್ಞರು, ಸಿಬ್ಬಂದಿ, ಆಂಬುಲೆನ್ಸ್​, ಹಲ್ಲಿನ ಚಿಕಿತ್ಸೆಗೆ ಬೇಕಾಗುವ ಯಂತ್ರಗಳು ಸೇರಿ ಸೌಲಭ್ಯಗಳಿಲ್ಲದೆ ಆಸ್ಪತ್ರೆಗೆ ಬರುವ ಬಡವರನ್ನು ಖಾಸಗಿ ಪರೀಕ್ಷಾ ಕೇಂದ್ರಗಳಿಗೆ ದೂಡುತ್ತಿದೆ.

ಬಂಗಾರಪೇಟೆ ತಾಲೂಕು ಕೇಂದ್ರವು 3 ರಾಜ್ಯಗಳ ಸಂಗಮವಾಗಿದ್ದು, ತಾಲೂಕು ಸೇರಿ ಗಡಿಭಾಗದ ಜನರು ಅನಾರೋಗ್ಯಕ್ಕೆ ತುತ್ತಾದರೆ ಬಂಗಾರಪೇಟೆ ಸಾರ್ವಜನಿಕ ಆಸ್ಪತ್ರೆಯನ್ನೇ ಅವಲಂಬಿಸಬೇಕು. ಈ ಹಿಂದೆ ಚಿಕ್ಕದಾಗಿದ್ದ ಆಸ್ಪತ್ರೆಯ ಕಟ್ಟಡವನ್ನು 8 ವರ್ಷದ ಹಿಂದೆ 7.5 ಕೋಟಿ ರೂ. ವೆಚ್ಚದಲ್ಲಿ 120 ಬೆಡ್​ನ ನೂತನ ಕಟ್ಟಡವಾಗಿ ಪರಿ ವರ್ತಿಸಲಾಗಿದೆ. ಜಿಲ್ಲೆಯಲ್ಲಿ ಎಲ್ಲೂ ಇರದಂತಹ ಸುಸಜ್ಜಿತ ವ್ಯವಸ್ಥೆ ಹೊಂದಿದ್ದರೂ ಇನ್ನೂ ಹಲವು ನ್ಯೂನತೆಗಳು ಹಾಗೆಯೇ ಉಳಿದಿವೆ.

ನಿತ್ಯ ಆಸ್ಪತ್ರೆಯಲ್ಲಿ 500 ರಿಂದ 650 ಹೊರ ರೋಗಿಗಳು ಚಿಕಿತ್ಸೆ ಪಡೆಯುತ್ತಿದ್ದು, 90 ರಿಂದ 95 ಮಂದಿ ಒಳ ರೋಗಿಗಳಾಗಿ ದಾಖಲಾಗಿ ಚಿಕಿತ್ಸೆಗೆ ಒಳಪಡುತ್ತಿದ್ದಾರೆ. 11 ವೈದ್ಯರನ್ನು ಸರ್ಕಾರ ರೋಗಿಗಳ ಆರೈಕೆಗೆ ನೇಮಕ ಮಾಡಿದ್ದು, 45 ಮಂದಿ ಇತರ ಸಿಬ್ಬಂದಿ ಕಾರ್ಯ ನಿರ್ವಹಿಸುತ್ತಿದ್ದಾರೆ. ಆದರೂ ನಿರ್ವಹಣೆಗೆ ಸಿಬ್ಬಂದಿ ಕೊರತೆ ಎದುರಾಗಿರುವ ಕಾರಣ 54 ಸಿಬ್ಬಂದಿ ಹೊರಗುತ್ತಿಗೆ ಆಧಾರದಲ್ಲಿ ಕಾರ್ಯನಿರ್ವಹಿಸುತ್ತಿದ್ದಾರೆ.

ಕಳೆದ ವರ್ಷ ಡಯಾಲಿಸೀಸ್​ ಕೇಂದ್ರ ಆರಂಭಿಸಲಾಗಿದ್ದು, ಸದ್ಯ 3 ಬೆಡ್​ಗಳನ್ನು ಅಳವಡಿಸಿ ಚಿಕಿತ್ಸೆ ನೀಡಲಾಗುತ್ತಿದೆ. ತಾಲೂಕಿನಲ್ಲಿ ಡಯಾಲೀಸಿಸ್​ಗೆ ಒಳಗಾಗಿರುವ ರೋಗಿಗಳ ಸಂಖ್ಯೆ ಹೆಚ್ಚಾಗಿದ್ದು, ರೋಗಿಗಳಿಗೆ ಸುಮಾರು 4 ಗಂಟೆಗಳ ಕಾಲ ಡಯಾಲಿಸಿಸ್​ ಮಾಡಬೇಕಿದ್ದ ಕಾರಣ ಮೂರು ಬೆಡ್​ಗಳು ಸಾಕಾಗುತ್ತಿಲ್ಲ. ಈಗ ಇರುವ ಯಂತ್ರೋಪಕರಣಗಳ ಜತೆಗೆ ಮತ್ತೆ 3 ಬೆಡ್​ಗಳನ್ನು ಅಳವಡಿಸಬೇಕು ಎಂದು ಸಾರ್ವಜನಿಕರು ಒತ್ತಾಯಿಸಿದ್ದಾರೆ.

ತಾಲೂಕು ಆಸ್ಪತ್ರೆಯಲ್ಲಿ ಹತ್ತು ಹಲವು ಸಮಸ್ಯೆಗಳಿದ್ದು, ಸರ್ಕಾರ ಅವುಗಳನ್ನು ಬಗೆಹರಿಸಿದ್ದೇ ಆದಲ್ಲಿ ತಾಲೂಕಿನ ಜನತೆ ಖಾಸಗಿ ಆಸ್ಪತ್ರೆಗಳ ಮೊರೆ ಹೋಗುವುದನ್ನು ತಡೆಯಬಹುದು ಎಂಬುದು ಸಾರ್ವಜನಿಕರ ಅಭಿಪ್ರಾಯವಾಗಿದೆ.

ಆಂಬುಲೆನ್ಸ್​ ಸೇವೆಗೆ ಪರದಾಟ

ಪ್ರತಿ ತಾಲೂಕು ಆಸ್ಪತ್ರೆಗಳಲ್ಲಿ ತುರ್ತು ಸೇವೆಗಾಗಿ 108ರ ಆಂಬುಲೆನ್ಸ್​ ವ್ಯವಸ್ಥೆ ಕಲ್ಪಿಸಲಾಗಿದೆ. ಆದರೆ ಬಂಗಾರಪೇಟೆ ಸಾರ್ವಜನಿಕ ಆಸ್ಪತ್ರೆಗೆ 108ರ ಆಂಬುಲೆನ್ಸ್​ ಸೇವೆ ಒದಗಿಸದೇ ನಿರ್ಲಕ್ಷ್ಯ ವಹಿಸಲಾಗಿದೆ. ಇದರಿಂದಾಗಿ ಅಪಘಾತ ಸೇರಿ ಇತರ ತುರ್ತು ಸಮಯದಲ್ಲಿ ಆಂಬುಲೆನ್ಸ್​ ಸೇವೆಗೆ ತಾಲೂಕಿನ ಜನತೆ ಪರದಾಡುವಂತಾಗಿದೆ. ಆಸ್ಪತ್ರೆಗೆ ಇತರ ಎರಡು ಆಂಬುಲೆನ್ಸ್​ ಗಳನ್ನು ಕೊಡುಗೆಯಾಗಿ ನೀಡಲಾಗಿದೆ. ಆದರೆ ವಾಹನದಲ್ಲಿ ನರ್ಸ್​ಗಳು ಇಲ್ಲದ ಕಾರಣ ತುರ್ತು ಪರಿಸ್ಥಿತಿಯಲ್ಲಿ ರೋಗಿಗಳಿಗೆ ಪ್ರಾಥಮಿಕ ಚಿಕಿತ್ಸೆ ನೀಡಲು ಸಮಸ್ಯೆ ಕಾಡುತ್ತಿದೆ.

ಹಲ್ಲಿನ ವೈದ್ಯರಿದ್ದಾರೆ ಆದ್ರೆ...?

ಪ್ಲೋರೈಡ್​ ಅಂಶ ಹೆಚ್ಚಿದ್ದು, ಹಲ್ಲಿನ ಸಮಸ್ಯೆ ಹೆಚ್ಚಿದೆ. ಜತೆಗೆ ಹುಖು ಹಲ್ಲಿನ ಪ್ರಮಾಣ ಸಹ ಹೆಚ್ಚಾಗಿದ್ದು, ಆಸ್ಪತ್ರೆಯಲ್ಲಿ ಹಲ್ಲಿನ ವೈದ್ಯರಿದ್ದರೂ ರೂಟ್​ ಕೆನಾನ್​ ಮಾಡಿಸಲು ಯಂತ್ರೋಪಕರಣಗಳನ್ನು ಸರ್ಕಾರ ಪೂರೈಸಿಲ್ಲ. ಇದರಿಂದಾಗಿ ವೈದ್ಯರಿದ್ದರೂ ಸಾರ್ವಜನಿಕರಿಗೆ ಸರಿಯಾದ ಚಿಕಿತ್ಸೆ ಲಭ್ಯವಾಗುತ್ತಿಲ್ಲ ಎಂಬ ಆರೋಪವೂ ಕೇಳಿ ಬಂದಿದ್ದು, ಹಲ್ಲಿನ ಚಿಕಿತ್ಸೆಗಾಗಿ ಖಾಸಗಿ ವೈದ್ಯರ ಮೊರೆ ಹೋಗಬೇಕಿದೆ. ಆದ್ದರಿಂದ ಹಲ್ಲಿನ ಸಮಸ್ಯೆಗೆ ಪರಿಹಾರ ಸೂಚಿಸಲು ರೂಟ್​ ಕೆನಾಲ್​ ಯಂತ್ರಗಳನ್ನು ಅಳವಡಿಸಬೇಕು ಎಂದು ನಾಗರಿಕರು ಒತ್ತಾಯಿಸಿದ್ದಾರೆ.

ವಾರಕ್ಕೊಮ್ಮೆ ಸ್ಕ್ಯಾನಿಂಗ್​ ​ ಭಾಗ್ಯ

ಆಸ್ಪತ್ರೆಯಲ್ಲಿ ಸ್ಕ್ಯಾನಿಂಗ್​ ವ್ಯವಸ್ಥೆ ಇದೆಯಾದರೂ ಜಿಲ್ಲೆಯಲ್ಲಿ ತಂತ್ರಜ್ಞರು ಇಲ್ಲದ ಕಾರಣ ವಾರಕ್ಕೆ ಒಮ್ಮೆ ಮಾತ್ರ ಸ್ಕಾನಿಂಗ್​ ಮಾಡುತ್ತಿರುವ ಪರಿಣಾಮ ಉಳಿದ ದಿನ ರೋಗಿಗಳು ಪರೀಕ್ಷೆಗಾಗಿ ಖಾಸಗಿ ಸ್ಕಾನಿಂಗ್​ ಸೆಂಟರ್​ಗಳಲ್ಲಿ ಸಾವಿರಾರು ರೂ. ಖರ್ಚು ಮಾಡಬೇಕಾದ ಪರಿಸ್ಥಿತಿ ನಿಮಾರ್ಣವಾಗಿದೆ. ಕನಿಷ್ಠ ವಾರಕ್ಕೆ 3 ದಿನವಾದರೂ ಸ್ಕ್ಯಾನಿಂಗ್​ ಮಾಡಲು ಸಿಬ್ಬಂದಿ ನೇಮಕ ಮಾಡಬೇಕು. ಜತೆಗೆ ಕಣ್ಣಿನ ಪರೀಕ್ಷೆಗೆ ನುರಿತ ವೈದ್ಯರಿದ್ದರೂ ಸಿಬ್ಬಂದಿ ಕೊರತೆ ಇದ್ದು, ಕೇವಲ ವಾರಕ್ಕೆ 2 ದಿನ ಮಾತ್ರ ಕಣ್ಣಿನ ಪರೀಕ್ಷೆ ಮಾಡಲಾಗುತ್ತಿದೆ.

ಪಾರ್ಕಿಂಗ್​ ಸಮಸ್ಯೆ

ಆಸ್ಪತ್ರೆ ಕಟ್ಟಡ ನೋಡಲು ದೊಡ್ಡದಾಗಿ ಇದ್ದರೂ ವಾಹನಗಳ ನಿಲುಗಡೆಗೆ ಪಾರ್ಕಿಂಗ್​ ವ್ಯವಸ್ಥೆ ಇಲ್ಲ. ಇದರಿಂದಾಗಿ ರೋಗಿಗಳು ಮತ್ತು ಸಾರ್ವಜನಿಕರು ಎಲ್ಲೆಂದರಲ್ಲಿ ತಮ್ಮ ದ್ವಿಚಕ್ರ ವಾಹನಗಳನ್ನು ನಿಲ್ಲಿಸುವುದರಿಂದ ರೋಗಿಗಳ ಸಂಚಾರಕ್ಕೆ ಅನನುಕೂಲವಾಗುತ್ತಿದೆ. ಕೆಲವೊಮ್ಮೆ ಆಂಬುಲೆನ್ಸ್​ ಸುತ್ತಲೂ ವಾಹನಗಳನ್ನು ನಿಲ್ಲಿಸುವುದರಿಂದ ತುರ್ತು ಸಂದರ್ಭದಲ್ಲಿ ಆಂಬುಲೆನ್ಸ್​ ತೆಗೆಯಲೂ ಪರದಾಡಬೇಕಾದ ಪರಿಸ್ಥಿತಿ ನಿಮಾರ್ಣವಾಗಿದೆ.

ರೋಗಿಗಳೊಂದಿಗೆ ಸರಿಯಾಗಿ ವರ್ತಿಸಿ ಗುಣಮಟ್ಟದ ಚಿಕಿತ್ಸೆ ನೀಡುವಂತೆ ಈಗಾಗಲೇ ಸಿಬ್ಬಂದಿಗೆ ಸೂಚಿಸಿ ಸೂಕ್ತ ಕ್ರಮ ಕೈಗೊಳ್ಳಲಾಗಿದೆ. ರೂಟ್​ ಕೆನಾಲ್​ ಯಂತ್ರ ಬಂದಿದ್ದು, ಶ್ರೀ ಅಳವಡಿಸಲಾಗುತ್ತದೆ. ಪಾರ್ಕಿಂಗ್​ ಸಮಸ್ಯೆ ಬಗೆಹರಿಸಲು ವ್ಯವಸ್ಥೆ ಮಾಡಲಾಗುತ್ತಿದ್ದು, ಸಮಸ್ಯೆ ಬಗೆಹರಿಯಲಿದೆ. ಎಲ್ಲಾ ಔಷಧಗಳನ್ನೂ ಆಸ್ಪತ್ರೆಯಲ್ಲಿಯೇ ವಿತರಣೆ ಮಾಡಲಾಗುತ್ತಿದೆ. - ಡಾ.ಭಾರತಿ ಎಎಂಒ, ಬಂಗಾರಪೇಟೆ ಸಾರ್ವಜನಿಕ ಆಸ್ಪತ್ರೆಯಲ್ಲಿ ಚಿಕಿತ್ಸೆಗೆಂದು ದಾಖಲಾಗುವ ರೋಗಿಗಳೊಂದಿಗೆ ಸಿಬ್ಬಂದಿ ಮತ್ತು ವೈದ್ಯರ ನಡವಳಿಕೆ ಸರಿಯಾಗಿಲ್ಲ. ಶೌಚಗೃಹಗಳು ಗಬ್ಬುನಾರುತ್ತಿದ್ದು, ಅದನ್ನು ಬಳಸಿದರೆ ಮತ್ತೊಂದು ರೋಗಕ್ಕೆ ತುತ್ತಾಗುವುದು ಗ್ಯಾರಂಟಿ. ವೈದ್ಯರು 10 ಮಾತ್ರೆ ಬರೆದುಕೊಟ್ಟರೆ, ಔಷಧಾಲಯದಲ್ಲಿ ಕೇವಲ ನಾಲ್ಕು ರಿಂದ ಆರು ಮಾತ್ರೆ ಕೊಟ್ಟು ಕಳುಹಿಸುತ್ತಾರೆ. ಕೆಲವು ಔಷಧಗಳು ಲಭ್ಯವಿಲ್ಲ ಎಂದು ಹೊರಗಡೆಗೆ ಕಳುಹಿಸ್ತಾರೆ. - ನಾರಾಯಣಪ್ಪ ನಾಗರಿಕ