ಜಿ.ನಾಗರಾಜ್, ಬೂದಿಕೋಟೆ
ಬಂಗಾರಪೇಟೆ ತಾಲೂಕಿನ ಪಶು ಆಸ್ಪತ್ರೆಗಳಲ್ಲಿ ವೈದ್ಯರು ಹಾಗೂ ಸಿಬ್ಬಂದಿ ಕೊರತೆ ಇದ್ದು, ಜಾನುವಾರುಗಳಿಗೆ ಸಮಯಕ್ಕೆ ಸರಿಯಾಗಿ ಚಿಕಿತ್ಸೆ ದೊರಕದ ಕಾರಣ ದಿನದಿಂದ ದಿನಕ್ಕೆ ರಾಸುಗಳಲ್ಲಿ ರೋಗಗಳು ಉಲ್ಬಣಗೊಳ್ಳುತ್ತಿವೆ. ಚಿಕಿತ್ಸೆಗೆ ರೈತರು ಪರದಾಡುವ ಪರಿಸ್ಥಿತಿ ನಿಮಾರ್ಣವಾಗಿದೆ.
ತಾಲೂಕಿನ ಜನ ಹೆಚ್ಚಿನ ಪ್ರಮಾಣದಲ್ಲಿ ಹೈನುಗಾರಿಕೆಯನ್ನೇ ನಂಬಿದ್ದು, ಜಾನುವಾರುಗಳಿಗೆ ತಗುಲುವ ಸಾಮಾನ್ಯ ಕಾಯಿಲೆಗಳಿಂದ ಪಾರು ಮಾಡಲು ರೈತರಿಗೆ ದೊಡ್ಡ ಸವಾಲಾಗಿದೆ. ತಾಲೂಕಿನಲ್ಲಿ 1 ಪಶು ಆಸ್ಪತ್ರೆ ಸೇರಿ 9 ಪಶು ಚಿಕಿತ್ಸಾ ಕೇಂದ್ರಗಳಿದ್ದು, ಒಟ್ಟು 46 ವಿವಿಧ ಹುದ್ದೆಗಳ ಪೈಕಿ 12 ಹುದ್ದೆಗಳು ಮಾತ್ರ ಭರ್ತಿಯಾಗಿವೆ. ಉಳಿದ 34 ಹುದ್ದೆಗಳು ಖಾಲಿ ಇವೆ.
ತಾಲೂಕಿನ ಬೂದಿಕೋಟೆ, ಬಲಮಂದೆ, ಕಾಮಸಮುದ್ರ ಮತ್ತು ಚಿನ್ನಕೋಟೆ ಪಶು ಚಿಕಿತ್ಸಾ ಕೇಂದ್ರಗಳಲ್ಲಿ ವೈದ್ಯರ ನೇಮಕವಿಲ್ಲ. ಇದರಿಂದ ಒಬ್ಬ ವೈದ್ಯರಿಗೆ ಎರಡರಿಂದ ಮೂರು ಪಶು ಚಿಕಿತ್ಸಾ ಕೇಂದ್ರಗಳ ಹೊಣೆ ನೀಡಲಾಗಿದೆ. ದನಕರುಗಳ ಸಂಖ್ಯೆ ಹೆಚ್ಚಾಗಿರುವುದರಿಂದ ಇರುವ ವೈದ್ಯರು ಪಶುಗಳ ಆರೋಗ್ಯ ತಪಾಸಣೆ ಮಾಡಿ ಚಿಕಿತ್ಸೆ ನೀಡುವುದು ಅಸಾಧ್ಯ. ಇದರಿಂದ ರಾಸುಗಳಿಗೆ ಅನಾರೋಗ್ಯ ಕಾಣಿಸಿಕೊಂಡರೆ ಸಕಾಲಕ್ಕೆ ಚಿಕಿತ್ಸೆ ದೊರಕದೆ ರೈತರ ಜೀವನಕ್ಕೆ ಆಧಾರವಾಗಿರುವ ಜಾನುವಾರುಗಳು ಮರಣ ಹೊಂದುತ್ತಿರುವ ದಾರುಣ ಟನೆಗಳು ನಡೆಯುತ್ತಿವೆ. ಸಿಬ್ಬಂದಿ ಕೊರತೆ ಇರುವುದರಿಂದ ಸುತ್ತಮುತ್ತಲಿನ ಗ್ರಾಮಗಳ ರೈತರಿಗೆ, ಕೃಷಿ ಕಾರ್ಮಿಕರಿಗೆ, ಹೈನುಗಾರಿಕೆಯಲ್ಲಿ ತೊಡಗಿರುವವರಿಗೆ ಸಮರ್ಪಕ ಸೇವೆ ಸಿಗುತ್ತಿಲ್ಲ ಎಂಬ ಆರೋಪ ಕೇಳಿ ಬರುತ್ತಿದೆ.
ಐದು ವರ್ಷಗಳ ಹಿಂದಿನ ಜಾನುವಾರುಗಳ ಗಣತಿಯಂತೆ ತಾಲೂಕಿನಲ್ಲಿ 14 ಸಾವಿರ ಜಾನುವಾರುಗಳಿವೆ. ಇದರಲ್ಲಿ 26 ಸಾವಿರ ಹಸುಗಳು, 1,413 ಎಮ್ಮೆ 55,784 ಕುರಿಗಳು, 9,524 ಮೇಕೆಗಳು 700 ಹಂದಿಗಳು ಮತ್ತು 50 ಸಾವಿರ ಕೋಳಿಗಳಿವೆ ಎಂಬುದು ಪಶು ಇಲಾಖೆ ತಿಳಿಸಿದೆ.
ಖಾಲಿ ಇರುವ ಹುದ್ದೆಗಳು: ನಾಲ್ಕು ಹುದ್ದೆ ಪಶು ವೈದ್ಯರು, 3 ಹುದ್ದೆ ಪಶು ವೈದ್ಯಕಿಯ ಪರೀಕ್ಷಕರು, 3 ಹುದ್ದೆ ಪಶು ವೈದ್ಯಕಿಯ ಸಹಾಯಕರು, 3 ಹುದ್ದೆ ಜಾನುವಾರು ಅಭಿವೃದ್ಧಿ ಅಧಿಕಾರಿ, 3 ಹುದ್ದೆ ಹಿರಿಯ ಪಶು ವೈದ್ಯಕಿಯ ಪರೀಕ್ಷಕರು, 1 ಹುದ್ದೆ ಧ್ವೀತಿಯ ದರ್ಜೆ ಸಹಾಯಕರು, 16 ಹುದ್ದೆ ಡಿ ದರ್ಜೆ ನೌಕರರ ಮತ್ತು 1 ಜಾನುವಾರು ಅಧಿಕಾರಿ ಹುದ್ದೆಗಳು ಖಾಲಿ ಇವೆ.
ಹಾಲಿನ ಇಳುವರಿ ಕುಂಠಿತ: ಖಾಲಿ ಇರುವ ಪಶು ವೈದ್ಯರು ಹಾಗೂ ಇತರೆ ಹುದ್ದೆಗಳನ್ನು ಸರ್ಕಾರ ಭರ್ತಿ ಮಾಡಿಲ್ಲ. ಇದರಿಂದ ಪಶು ಇಲಾಖೆಯ ಸೌಲಭ್ಯಗಳನ್ನು ಜನರಿಗೆ ತಲುಪಿಸಲು ಮತ್ತು ಅನಾರೋಗ್ಯಕ್ಕೆ ತುತ್ತಾದ ರಾಸುಗಳಿಗೆ ಸರಿಯಾದ ಸಮಯಕ್ಕೆ ಚಿಕಿತ್ಸೆ ನೀಡಲು ಸಮಸ್ಯೆ ಬಿಗಡಾಯಿಸಿದೆ. ತಾಲೂಕಿನಲ್ಲಿ ಸಿಬ್ಬಂದಿ ಹಾಗೂ ವೈದ್ಯರ ಇಲ್ಲದ ಕಾರಣ ಪಶು ಚಿಕಿತ್ಸಾಲಯಗಳಿಗೆ ಬೀಗ ಜಡಿಯಲಾಗಿದೆ. ವೈದ್ಯರು ಇರಬೇಕಾದ ಜಾಗದಲ್ಲಿ ಡಿ ದರ್ಜೆಯ ನೌಕರ ಕಾರ್ಯನಿರ್ವಹಿಸಬೇಕಾದ ಸ್ಥಿತಿ ಇಲಾಖೆಗೆ ಬಂದೊದಗಿದೆ.
ನಕಲಿ ವೈದ್ಯರಿಂದ ಸಾವಿರಾರು ರೂ. ವಸೂಲಿ: ರಾಸುಗಳಿಗೆ ಸರಿಯಾದ ಚಿಕಿತ್ಸೆ ನೀಡಲು ವೈದ್ಯರ ಕೊರತೆ ಇರುವುದರಿಂದ ತಮಿಳುನಾಡು ಮತ್ತು ಆಂಧ್ರ ಪ್ರದೇಶಗಳಿಂದ ನಕಲಿ ವೈದ್ಯರು ರಾಜ್ಯಕ್ಕೆ ಬರುತ್ತಿದ್ದು, ಚಿಕಿತ್ಸೆ ಹೆಸರಲ್ಲಿ ರೈತರಿಂದ ಸಾವಿರಾರು ರೂ. ವಸೂಲಿ ಮಾಡುತ್ತಿದ್ದಾರೆ. ಆದ್ದರಿಂದ ಎಲ್ಲ ಪಶು ಆಸ್ಪತ್ರೆಗಳಿಗೆ ವೈದ್ಯರನ್ನು ಮತ್ತು ಇತರೆ ಸಿಬ್ಬಂದಿ ನೇಮಿಸಬೇಕು ಎಂದು ಸಾರ್ವಜನಿಕರು ಒತ್ತಾಯಿಸಿದ್ದಾರೆ.
ತಾಲೂಕಿನಲ್ಲಿ ಹೆಚ್ಚಿನ ಪ್ರಮಾಣದಲ್ಲಿ ರೈತರು ಹೈನುಗಾರಿಕೆಯನ್ನೇ ನಂಬಿಕೊಂಡು ಜೀವನ ಸಾಗಿಸುತ್ತಿದ್ದಾರೆ. ರಾಸುಗಳು ರೋಗಕ್ಕೆ ತುತ್ತಾದರೆ ಅವುಗಳಿಗೆ ಚಿಕಿತ್ಸೆ ಕೊಡಿಸಲು ವೈದ್ಯರ ಕೊರತೆ ಇದ್ದು, ಚಿಕಿತ್ಸೆಗಾಗಿ ನಕಲಿ ವೈದ್ಯರ ಮೊರೆ ಹೋಗಬೇಕಾದ ಅನಿವಾರ್ಯ ಎದುರಾಗಿದೆ. ಸರ್ಕಾರ ಹೈನೋದ್ಯಮಕ್ಕೆ ಉತ್ತೇಜನ ನೀಡಲಾಗುತ್ತಿದೆ ಎಂದು ಹೇಳುತ್ತಿದೆಯಾದರೂ ನುರಿತ ವೈದ್ಯರು ಮತ್ತು ಸಿಬ್ಬಂದಿ ನಿಯೋಜನೆ ಮಾಡದೇ ಇರುವುದು ದುರ್ದೈವದ ಸಂಗತಿ. - ಸುರೇಶ್ ಬೂದಿಕೋಟೆ ನಿವಾಸಿ ಕೋಟ್))) ತಾಲೂಕಿನಲ್ಲಿ ಪಶು ವೈದ್ಯರು ಸೇರಿ ಇತರೆ ಸಿಬ್ಬಂದಿ ಕೊರತೆ ಇದೆ. ಶೀಘ್ರ ಖಾಲಿ ಹುದ್ದೆಗಳನ್ನು ಭರ್ತಿ ಮಾಡುವುದಾಗಿ ಸರ್ಕಾರ ಹೇಳುತ್ತಿದೆ. ಖಾಲಿ ಹುದ್ದೆಗಳು ಭರ್ತಿ ಆಗುವವರೆಗೂ ಯಾವುದೇ ಸಮಸ್ಯೆ ಆಗದಂತೆ ಹೊರಗುತ್ತಿಗೆ ಆಧಾರದ ಮೇಲೆ 6ಜನ ಡಿ ದರ್ಜೆ ನೌಕರರನ್ನು ನೇಮಕ ಮಾಡಲಾಗಿದೆ. ಜತೆಗೆ ಇರುವ ಸಿಬ್ಬಂದಿಯನ್ನು ಬಳಸಿಕೊಂಡು ರಾಸುಗಳಿಗೆ ಚಿಕಿತ್ಸೆ ನೀಡಲಾಗುತ್ತಿದೆ. ಮತ್ತು ಕಾಲಕಾಲಕ್ಕೆ ಅನುಗುಣವಾಗಿ ಲಸಿಕೆಗಳನ್ನು ವಿತರಣೆ ಮಾಡಲಾಗುತ್ತಿದೆ. - ಡಾ.ರಾಮು ಸಹಾಯಕ ನಿರ್ದೆಶಕ, ಪಶು ಆಸ್ಪತ್ರೆ ಬಂಗಾರಪೇಟೆ