ಮದ್ದೂರು: ರೈತರಿಗೆ ನೆರವಾಗುವ ಉದ್ದೇಶದಿಂದ ರಾಜ್ಯ ಸರ್ಕಾರ ಅನೇಕ ಯೋಜನೆಗಳನ್ನು ರೂಪಿಸಿದ್ದು, ಇವುಗಳನ್ನು ಸದುಪಯೋಗಪಡಿಸಿಕೊಂಡು ಆರ್ಥಿಕವಾಗಿ ಸದೃಢರಾಗಬೇಕು ಎಂದು ಶಾಸಕ ಕೆ.ಎಂ.ಉದಯ್ ತಿಳಿಸಿದರು.
ತಾಲೂಕಿನ ಹಳ್ಳಿಕೆರೆ ಗ್ರಾಮದಲ್ಲಿ ತಾಲೂಕು ಕೃಷಿ ಇಲಾಖೆ ಹಾಗೂ ಕೃಷಿಕ ಸಮಾಜದ ವತಿಯಿಂದ ಸೋಮವಾರ ಶ್ರೀ ಚೌಧರಿ ಚರಣ್ ಸಿಂಗ್ ಅವರ ಸ್ಮರಣಾರ್ಥ ಹಮ್ಮಿಕೊಂಡಿದ್ದ ರಾಷ್ಟ್ರೀಯ ರೈತ ದಿನಾಚರಣೆ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿ ಮಾತನಾಡಿದರು.
ಆಧುನಿಕ ತಂತ್ರಜ್ಞಾನವನ್ನು ಬಳಸಿಕೊಂಡು ಹಾಗೂ ಕೃಷಿ ಅಧಿಕಾರಿಗಳಿಂದ ಮಾಹಿತಿ ಪಡೆದು ಉತ್ತಮವಾಗಿ ವ್ಯವಸಾಯ ಮಾಡುವುದರಿಂದ ಉತ್ತಮ ಫಸಲು ಪಡೆಯಲು ಸಾಧ್ಯ. ಸರ್ಕಾರ ಕೃಷಿಗೆ ಹೆಚ್ಚಿನ ಸವಲತ್ತು ನೀಡುತ್ತಿದ್ದು, ಈ ಬಗ್ಗೆ ರೈತರಿಗೆ ಸಮರ್ಪಕವಾಗಿ ಮಾಹಿತಿ ಸಿಗುತ್ತಿಲ್ಲ. ಮುಂದಿನ ದಿನಗಳಲ್ಲಿ ಹೋಬಳಿ ಮಟ್ಟದಲ್ಲಿ ಸಭೆ ಮಾಡಿ ಸರ್ಕಾರದಿಂದ ರೈತರಿಗೆ ಸಿಗುವ ಸವಲತ್ತುಗಳ ಬಗ್ಗೆ ಮಾಹಿತಿ ನೀಡಲಾಗುವುದು. ಅಧಿಕಾರಿಗಳು ಕೂಡ ಸರ್ಕಾರದ ಸವಲತ್ತುಗಳಬಗ್ಗೆ ರೈತರಿಗೆ ಮಾಹಿತಿ ನೀಡಬೇಕು ಎಂದು ಸೂಚನೆ ನೀಡಿದರಲ್ಲದೆ, ಮುಂದಿನ ದಿನಗಳಲ್ಲಿ ರೈತರ ಸಮಸ್ಯೆಗಳನ್ನು ಬಗೆಹರಿಸಲು ಪ್ರಾಮಾಣಿಕವಾಗಿ ಪ್ರಯತ್ನ ಮಾಡಲಾಗುವುದು. ಕೃಷಿಯಲ್ಲಿ ಹನಿ ನೀರಾವರಿ ಯೋಜನೆ ಬಳಸಿಕೊಂಡು ಮಿತ ನೀರಾವರಿಯಿಂದ ಹೆಚ್ಚು ಭೂಮಿಯಲ್ಲಿ ಬೇಸಾಯ ಮಾಡಬಹುದು ಎಂದು ತಿಳಿಸಿದರು.
ತಾಲೂಕು ಕೃಷಿ ಸಹಾಯಕ ನಿರ್ದೇಶಕರ ಡಾ.ಪರಮೇಶ್ವರ್ ಮಾತನಾಡಿದರು. ರೈತ ದಿನಾಚರಣೆ ಅಂಗವಾಗಿ ಬೊಪ್ಪ ಸಮುದ್ರದ ಬಿ.ಎಂ.ನಂಜೇಗೌಡ, ಕುದರಗುಂಡಿ ಕೆ.ಬಿ.ಶಿವಣ್ಣ, ಮದ್ದೂರಿನ ಎಸ್.ಸುಂದರ್, ನಾಗನಹಳ್ಳಿಯ ಎಚ್.ಕೆಂಪೇಗೌಡ, ತೊರೆಬೊಮ್ಮನಹಳ್ಳಿಯ ಎಚ್.ಕೆ.ಪುಟ್ಟಮ್ಮ ಅವರಿಗೆ 2022-23ರ ಸಾಲಿನ ಆತ್ಮ ಯೋಜನೆಯಡಿ ಕೊಡಮಾಡುವ ಆತ್ಮ ಶ್ರೇಷ್ಠ ಕೃಷಿಕ ಪ್ರಶಸ್ತಿ ನೀಡಿ ಶಾಸಕ ಕೆ.ಎಂ.ಉದಯ್ ಗೌರವಿಸಿದರು. 2022 - 2023 ನೇ ಸಾಲಿನ ರಾಷ್ಟ್ರೀಯ ಸುಸ್ಥಿರ ಕೃಷಿ ಅಭಿಯಾನ-ಮಳೆ ಆಶ್ರಿತ ಪ್ರದೇಶ ಯೋಜನೆಯಡಿ ಆಯ್ಕೆಯಾದ ಫಲಾನುಭವಿಗಳಿಗೆ ಮೇವು ಕಟಾವಿನ ಯಂತ್ರ ಸೇರಿದಂತೆ ವಿವಿಧ ಸವಲತ್ತುಗಳನ್ನು ವಿತರಿಸಿದರು.
ಗ್ರಾ.ಪಂ. ಅಧ್ಯಕ್ಷ ಕೆಂಪರಾಜು, ಸದಸ್ಯರಾದ ಮಾದೇಶ್, ಸಿದ್ದಪ್ಪಾಜಿ, ಕೃಷಿಕ ಸಮಾಜದ ಶಿವರಾಮು, ಪುಟ್ಟಸ್ವಾಮಿ, ಕೃಷ್ಣಪ್ಪ, ರಾಘವೇಂದ್ರ, ರಮೇಶ್, ಸಹಾಯಕ ಕೃಷಿ ಅಧಿಕಾರಿ ಡಾ.ಪರಮೇಶ್, ಅಧಿಕಾರಿಗಳಾದ ಗವಾಸ್ಕರ್, ರೂಪಾ, ಕರುಣಾ ಇತರರು ಇದ್ದರು.