ಹಾಸನ: ಅರಿವು ಜ್ಞಾನದ ಸಂಕೇತವಾಗಿದೆ. ಪ್ರತಿಯೊಂದು ಹೆಣ್ಣು ಮಕ್ಕಳು ಜಾಗೃತಿ ಹೊಂದಿದರೆ ಶೇ.70 ರಷ್ಟು ಅಪರಾಧಗಳು ಕಡಿಮೆಯಾಗುತ್ತವೆ ಎಂದು ರಾಜ್ಯ ಮಹಿಳಾ ಆಯೋಗದ ಅಧ್ಯಕ್ಷೆ ಡಾ. ನಾಗಲಕ್ಷ್ಮೀ ಚೌಧರಿ ಹೇಳಿದರು.
ಜಿಲ್ಲಾಡಳಿತ, ಜಿಲ್ಲಾ ಪಂಚಾಯಿತಿ, ಕರ್ನಾಟಕ ರಾಜ್ಯ ಮಹಿಳಾ ಆಯೋಗ, ಪೊಲೀಸ್ ಇಲಾಖೆ ಹಾಗೂ ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆಯ ಆಶ್ರಯದಲ್ಲಿ ಮಂಗಳವಾರ ಹಾಸನಾಂಬ ಕಲಾಕ್ಷೇತ್ರದಲ್ಲಿ ಆಯೋಜಿಸಿದ್ದ ಸ್ಥಳೀಯ ಮತ್ತು ಆತಂರಿಕ ದೂರು ನಿವಾರಣಾ ಸಮಿತಿ ಸದಸ್ಯರಿಗೆ ಕೆಲಸದ ಸ್ಥಳಗಳಲ್ಲಿ ಮಹಿಳೆಯರ ಮೇಲಿನ ಲೈಂಗಿಕ ದೌರ್ಜನ್ಯ ತಡೆ ಕಾಯ್ದೆಯ ಕುರಿತ ತರಬೇತಿ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದರು.
ಲೈಂಗಿಕ ದೌರ್ಜನ್ಯ ತಡೆ ಕಾಯ್ದೆ ಎಂದರೆ ಹೆಣ್ಣು ಮಕ್ಕಳು ಕೆಲಸ ಮಾಡುವ ಸ್ಥಳಗಳಲ್ಲಿ ಲೈಂಗಿಕ ದೌರ್ಜನ್ಯ ತಡೆಗಟ್ಟುವುದಾಗಿದೆ. ಹೆಣ್ಣು ಮಕ್ಕಳು ತಮಗೆ ಇರುವ ಹಕ್ಕುಗಳ ಬಗೆಗೆ ತಿಳಿದುಕೊಳ್ಳುವುದಕ್ಕಾಗಿಯೇ ಈ ಕಾರ್ಯಗಾರವನ್ನು ಆಯೋಜಿಸಲಾಗಿದೆ. ಎಲ್ಲರೂ ಇದರ ಸದುಪಯೋಗ ಪಡೆದುಕೊಳ್ಳಬೇಕು. ಲೈಂಗಿಕ ದೌರ್ಜನ್ಯ ತಡೆ ಕಾಯ್ದೆ ಕುರಿತು 2013ರಲ್ಲಿಯೇ ಸುಪ್ರಿಂ ಕೋರ್ಟ್ ಗೆಜೆಟ್ ನೋಟಿಫಿಕೇಶನ್ ಮಾಡಿದೆ. ಹೆಣ್ಣು ಮಕ್ಕಳ ಸುರಕ್ಷತೆಯ ದೃಷ್ಠಿಯಿಂದಲೇ ಬಹಳಷ್ಟು ಕಾನೂನುಗಳು ಇವೆ. ಅವುಗಳ ಕುರಿತು ತಿಳಿದುಕೊಂಡ ಹೆಣ್ಣು ಹೆಚ್ಚು ಶಕ್ತಿಯುತವಾಗಿ ಸಮಾಜದಲ್ಲಿ ಹೋರಾಟ ಮಾಡುತ್ತಾಳೆ. ಆದ್ದರಿಂದ ಪ್ರತಿಯೊಂದು ಹೆಣ್ಣು ಮಕ್ಕಳು ಕಾನೂನು ತಿಳಿದುಕೊಳ್ಳಬೇಕು ಎಂದರು.
ಸರ್ಕಾರ ಪ್ರತಿ ಇಲಾಖೆಗಳಿಗೆ ಜಾಗೃತಿ ಮೂಡಿಸುವುದಕ್ಕಾಗಿಯೇ ಕೋಟ್ಯಂತರ ರೂಪಾಯಿಗಳನ್ನು ಕೊಡುತ್ತದೆ. ಇವುಗಳ ಬಗ್ಗೆ ಪ್ರತಿಯೊಬ್ಬರೂ ತಿಳಿದುಕೊಳ್ಳಬೇಕು ಎಂದು ತಿಳಿಸಿದರು.
ಪೋಲಿಸ್ ಇಲಾಖೆಯಲ್ಲಿ ನಿಮಗೆ ಸರಿಯಾಗಿ ಸ್ಪಂದಿಸದೆ ಇದ್ದಾಗ ಅಲ್ಲಿ ಒಂದು ಕ್ಯೂ ಆರ್ ಕೋಡ್‌ಅನ್ನು ಇಟ್ಟಿರುತ್ತಾರೆ. ಅದನ್ನು ಸ್ಕಾೃನ್ ಮಾಡಿದಾಗ ನಿಮಗೆ ಕೆಲವೊಂದು ಪ್ರಶ್ನೆಗಳನ್ನು ಕೇಳಲಾಗುತ್ತದೆ. ನೀವು ನಿಮ್ಮ ಸಮಸ್ಯೆಗಳನ್ನು ವಿವರಿಸಬಹುದು. ಇದರ ಕುರಿತು ಅರಿವಿದ್ದಾಗ ಮಾತ್ರ ಈ ರೀತಿಯಾಗಿ ಸಮಸ್ಯೆಗಳನ್ನು ಬಗೆಹರಿಸಿಕೊಳ್ಳಬಹುದು ಎಂಬುದು ತಿಳಿಯುತ್ತದೆ. ಹಾಗಾಗಿ ಎಲ್ಲರೂ ಅರಿವು ಮುಖ್ಯ ಎಂದು ಹೇಳಿದರು.
ಕೆಲಸದ ಸ್ಥಳದಲ್ಲಿ ಅಧಿಕಾರಿಗಳು ನಿಮ್ಮನ್ನು ನೋಡುವ ದೃಷ್ಟಿ ವಿಚಾರಧಾರೆಗಳು ಸರಿ ಇಲ್ಲದೆ ಇದ್ದರೂ ದೂರು ಸಲ್ಲಿಸಬಹುದು. ಹತ್ತು ಅಥವಾ ಹತ್ತಕ್ಕಿಂತ ಹೆಚ್ಚು ಮಹಿಳೆಯರು ಸರ್ಕಾರಿ ಅಥವಾ ಖಾಸಗಿ ಯಾವುದೇ ಸ್ಥಳದಲ್ಲಿ ಆಗಲಿ ಕೆಲಸ ನಿರ್ವಹಿಸುತ್ತಿದ್ದರೆ ಅಲ್ಲಿ ಲೈಂಗಿಕ ದೌರ್ಜನ್ಯ ತಡೆ ಕಾಯ್ದೆಯ ಸಮಿತಿ ಇರಬೇಕು ಎಂದು ಹೇಳಿದರು.
ತಾಯಿ ತನ್ನ ಮನೆಯನ್ನು ನಿಭಾಯಿಸಿ ಕೆಲಸಕ್ಕೆ ಬರುತ್ತಾಳೆ. ಆಗ ಅವಳು ಮಾನಸಿಕ ಆರೋಗ್ಯವಾಗಿದ್ದಾಗ ಮಾತ್ರ ಕೆಲಸವನ್ನು ಮಾಡಲು ಸಾಧ್ಯ. ಅವಳ ಒಂದು ಮಾನಸಿಕ ಮತ್ತು ದೈಹಿಕವಾಗಿ ಪ್ರತಿಯೊಂದು ಹೆಣ್ಣು ಮಕ್ಕಳು ಕೆಲಸದ ಸ್ಥಳಗಳಲ್ಲಿ ಸುರಕ್ಷಿತವಾಗಿರಬೇಕು. ಲೈಂಗಿಕವಾಗಿ ಯಾವುದೇ ರೀತಿ ದೌರ್ಜನ್ಯ ಆಗಬಾರದು ಎನ್ನುವ ಉದ್ದೇಶದಿಂದ ಲೈಂಗಿಕ ದೌರ್ಜನ್ಯ ತಡೆ ಕಾಯ್ದೆಯನ್ನು ಸ್ಥಾಪಿಸಲಾಗಿದೆ ಎಂದರು.
ಕರ್ನಾಟಕ ರಾಜ್ಯ ಮಹಿಳಾ ಆಯೋಗದ ಕಾರ್ಯದರ್ಶಿ ಆರ್.ರೂಪಾ ಮಾತನಾಡಿ, ಲೈಂಗಿಕ ದೌರ್ಜನ್ಯ ತಡೆ ಕಾಯ್ದೆಯ ಸಮಿತಿಯಲ್ಲಿರುವ ಸದಸ್ಯರು ಬಹಳ ಸಮಸ್ಯೆಗಳನ್ನು ಎದುರಿಸಿ ಬಂದವರಾಗಿದ್ದೀರಿ. ನಿಮ್ಮ ರೀತಿಯಾಗಿ ಅನೇಕ ಮಹಿಳೆಯರು ಸಮಸ್ಯೆಗಳನ್ನು ಅನುಭವಿಸುತ್ತಿರುವವರಿದ್ದಾರೆ. ಇವರಿಗೆ ನೀವು ಸಹಾಯಕರಾಗಿ ಇರಬೇಕು. ಅದಕ್ಕಾಗಿ ಮೊದಲು ನೀವು ಮಾಹಿತಿಗಳನ್ನು ತಿಳಿದುಕೊಂಡಿರಬೇಕು. ಹಾಗಾಗಿ ಈ ಕಾರ್ಯಗಾರದಲ್ಲಿ ತಿಳಿಸುವಂತಹ ಮಾಹಿತಿಗಳು ನಿಮಗೆ ಉಪಯೋಗಕರವಾಗಲಿವೆ. ಎಲ್ಲರೂ ಕಾರ್ಯಕ್ರಮದ ಸದಪಯೋಗ ಪಡೆದುಕೊಳ್ಳಿ ಎಂದರು.
ಹಿರಿಯ ಸಾಹಿತಿ ರೂಪ ಹಾಸನ್ ಮಾತನಾಡಿ, ನಮ್ಮ ಜಿಲ್ಲೆಯ ಜಿಲ್ಲಾಧಿಕಾರಿ ಕಚೇರಿಯಲ್ಲಿ ಈ ಹಿಂದೆ ಇದ್ದ ಜಿಲ್ಲಾಧಿಕಾರಿ ಸತ್ಯಭಾಮ ಅವರ ಅಧ್ಯಕ್ಷತೆಯಲ್ಲಿ ಕಾರ್ಯಗಾರವನ್ನು ಮಾಡಲಾಗಿತ್ತು. ಸರ್ಕಾರಿ ಅಧಿಕಾರಿಗಳಿಗೆ ಸರ್ಕಾರಿ ನೌಕರರಿಗೆ ಈ ಕಾಯ್ದೆಯ ಕುರಿತಾಗಿ ಮಾಹಿತಿ ಗೊತ್ತಿಲ್ಲದೆ ಇರುವ ಸ್ಥಿತಿ ನಿರ್ಮಾಣವಾಗಿದೆ. ಖಾಸಗಿ ಸಂಸ್ಥೆಗಳಲ್ಲಿ ಇಂದಿಗೂ ಕೂಡ ಆ ಕಾರ್ಯಗಾರಗಳನ್ನು ಮಾಡುತ್ತಿದ್ದಾರೆ. ಎಲ್ಲರೂ ಈ ಕಾಯ್ದೆಯ ಕುರಿತು ತಿಳಿದುಕೊಳ್ಳುವುದರ ಮೂಲಕ ದಿಟ್ಟತನದಿಂದ ದೌರ್ಜನಗಳನ್ನು ಎದುರಿಸುವಂತಹ ಸಾಧ್ಯತೆಗಳಾಗಲಿ ಎಂದು ಹೇಳಿದರು.
ದೌರ್ಜನ್ಯವಾದಾಗ ಅವರ ಬೆಂಬಲವಾಗಿ ನಿಲ್ಲುವ ಒಂದು ಭಾಗವಾದರೆ ದೌರ್ಜನ್ಯ ಆಗದಂತೆ ತಡೆಗಟ್ಟುವುದು ಹೇಗೆ ಎಂಬುದರ ಕುರಿತಾಗಿ ಈ ಕಾರ್ಯಗಾರಗಳು ಹೆಣ್ಣು ಮಕ್ಕಳನ್ನು ಸಶಕ್ತರನ್ನಾಗಿ ಮಾಡುತ್ತಿವೆ ಎಂದರು.
ಅಪರ ಜಿಲ್ಲಾಧಿಕಾರಿ ಮಂಜುನಾಥ, ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆಯ ಉಪ ನಿರ್ದೇಶಕ ಧರಣಿ ಕುಮಾರ್ ಇತರ ಅಧಿಕಾರಿಗಳು ಇದ್ದರು.