ಚಿಕ್ಕಮಗಳೂರು: ವೈದ್ಯಕೀಯ ಕ್ಷೇತ್ರ ಅತ್ಯಂತ ಸವಾಲನ್ನು ಹೊಂದಿದೆ. ಆ ನಿಟ್ಟಿನಲ್ಲಿ ವೈದ್ಯರು ಪರಸ್ಪರ ಹೊಂದಾಣಿಕೆಯಿಂದ ಮುನ್ನೆಡೆದರೆ ಮಾತ್ರ ಸಮಸ್ಯೆಗಳಿಂದ ಹೊರಬರಬಹುದು ಎಂದು ಭಾರತೀಯ ವೈದ್ಯಕೀಯ ಸಂಸ್ಥೆ ರಾಜ್ಯಾಧ್ಯಕ್ಷ ಡಾ.ಎಸ್.ಶ್ರೀನಿವಾಸ್ ತಿಳಿಸಿದರು.
ನಗರದ ಬೈಪಾಸ್ ಸಮೀಪದ ಭಾರತೀಯ ವೈದ್ಯಕೀಯ ಸಂಸ್ಥೆ ಜಿಲ್ಲಾ ಘಟಕದಿಂದ ಏರ್ಪಡಿಸಿದ್ದ ಸಭೆಯಲ್ಲಿ ಮಾತನಾಡಿದ ಅವರು, ರೋಗಿ ಸಾವು-ಬದುಕಿನ ಹೋರಾಟದಲ್ಲಿ ವೈದ್ಯರ ಚಿಕಿತ್ಸೆ ಪ್ರಮುಖ ಪಾತ್ರವಹಿಸುತ್ತದೆ. ಒಂದೊಮ್ಮೆ ಆಕಸ್ಮಿಕವಾಗಿ ಸಂಭವಿಸುವ ಅನಾಹುತಕ್ಕೆ ವೈದ್ಯರನ್ನೇ ನೇರ ಹೊಣೆ ಮಾಡುವ ಸನ್ನಿವೇಶಗಳಿರುವ ಕಾರಣ ವೈದ್ಯರು ಒಬ್ಬರಿಗೊಬ್ಬರು ಸಹಕರಿಸುವ ಗುಣ ಬೆಳೆಸಿಕೊಳ್ಳಬೇಕು ಎಂದರು.
ವೈದ್ಯಕೀಯ ಲೋಕದಲ್ಲಿ ಭಿನ್ನಾಭಿಪ್ರಾಯಗಳಿಗೆ ಎಡೆಮಾಡಿಕೊಡ ಬಾರದು. ಐಎಂಎ ಜತೆಗೂಡಿ ಒಗ್ಗಟ್ಟಿನಿಂದ ಮುಂದುವರಿಯಬೇಕು. ಸ್ಥಳೀಯವಾಗಿ ವೈದ್ಯರು ಐಎಂಎ ಸದಸ್ಯರನ್ನಾಗಿ ಸೇರ್ಪಡೆಗೊಂಡರೆ ಮಾತ್ರ ಕಠಿಣ ಪರಿಸ್ಥಿತಿಯಲ್ಲಿ ವೈದ್ಯರ ನೆರವಿಗೆ ಧಾವಿಸಬಹುದು. ಪ್ರಸ್ತುತ ರಾಜ್ಯಾದ್ಯಂತ ಪ್ರವಾಸ ಕೈಗೊಂಡು ಐಎಂಎ ಸದಸ್ಯರನ್ನು ಭೇಟಿ ಮಾಡಲಾಗುತ್ತಿದೆ. ಜಿಲ್ಲೆಗಳಲ್ಲಿ ವೈದ್ಯರಿಗೆ ಸಮರ್ಪಕ ಕಟ್ಟಡವಿಲ್ಲ. ಚಿಕ್ಕಮಗಳೂರು ಘಟಕದಲ್ಲಿ ವೈದ್ಯರ ಸಹಕಾರದಿಂದ ದೊಡ್ಡಮಟ್ಟಿನ ಕಟ್ಟಡ ನಿರ್ಮಿಸಿ ಪರಸ್ಪರ ಒಡನಾಟನಡೆಸಲು ಮುಂದಾಗಿರುವುದು ಶ್ಲಾಘನೀಯ.
ಕರೊನಾ ಸಮಯದಲ್ಲಿ ಪ್ರಾಣದ ಹಂಗು ತೊರೆದು ಕೆಲಸ ಕಾರ್ಯ ನಿರ್ವಹಿಸಿರುವುದು ಹೆಮ್ಮೆಯ ಸಂಗತಿ. ಜತೆಗೆ ಐಎಂಎನ ಕೆಎಸ್‌ಎಸ್‌ಎಸ್ ಯೋಜನೆಯಲ್ಲಿ ವೈದ್ಯರು ನೊಂದಾವಣೆಯಾಗಿದ್ದಲ್ಲಿ ಆಕಸ್ಮಿಕದಿಂದ ವೈದ್ಯರಿಗೆ ಸಾವು ಸಂಭವಿಸಿದರೆ ಕುಟುಂಬಕ್ಕೆ ವಿಮೆ ಸೌಲಭ್ಯ ದೊರಕುತ್ತದೆ ಎಂದು ಮಾಹಿತಿ ನೀಡಿದರು.
ಖಾಸಗಿ ವೈದ್ಯಕೀಯ ಸಂಸ್ಥೆಗಳ ರಾಜ್ಯ ಘಟಕದ ಅಧ್ಯಕ್ಷ ಡಾ. ಡಿ.ಎಲ್.ವಿಜಯ್‌ಕುಮಾರ್ ಮಾತನಾಡಿ, ಹಿಂದಿನ ಕಾಂಗ್ರೆಸ್ ಸರ್ಕಾರದಲ್ಲಿ ಕಟ್ಟಡ ಸ್ಥಾಪನೆಗೆ ಅಡಿಪಾಯ ಹಾಕಿದ್ದರು. ಜತೆಗೆ ಸ್ಥಳೀಯ ಜನಪ್ರತಿನಿಧಿಗಳ ಸಹಕಾರವು ಸಂಸ್ಥೆಗೆ ಸಿಕ್ಕಿದೆ ಎಂದು ಹೇಳಿದರು.
ಭಾರತೀಯ ವೈದ್ಯಕೀಯ ಸಂಸ್ಥೆ ತಾಲೂಕು ಕಾರ್ಯದರ್ಶಿ ಕಾರ್ತೀಕ್ ವಿಜಯ್ ಮಾತನಾಡಿ, ನಮ್ಮ ಸಂಸ್ಥೆಯಲ್ಲಿ ಅತಿಹೆಚ್ಚು ಸಂಖ್ಯೆಯಲ್ಲಿ ವೈದ್ಯರನ್ನು ಸದಸ್ಯರಾಗಿಸುವ ನಿಟ್ಟಿನಲ್ಲಿ ಕಾರ್ಯನಿರ್ವಹಿಸಲಾಗುತ್ತಿದೆ. ಅಲ್ಲದೇ ಸಂಸ್ಥೆಯಿಂದ ಮಾಸಿಕ ಸಭೆ ಹಾಗೂ ಸಾಂಸ್ಕೃತಿಕ ಕಾರ್ಯಕ್ರಮ, ಕ್ರೀಡಾಚಟುವಟಿಕೆಗೆ ಆದ್ಯತೆ ನೀಡಲಾಗುತ್ತಿದೆ ಎಂದರು.
ಸಂಸ್ಥೆ ಜಿಲ್ಲಾಧ್ಯಕ್ಷ ಚೈತನ್ಯ ಸವೂರ್, ವೈದ್ಯರಾದ ಡಾ.ರಾಜು, ರವಿ ಪ್ರಕಾಶ್, ಡಿ.ಪಿ.ಮೋಹನ್, ಡಾ.ಬಸವರಾಜ್, ಡಾ.ಮಂಜುನಾಥ್ ಮತ್ತಿತರರಿದ್ದರು.