ಜಿಲ್ಲೆ

ಶಕ್ತಿ ಯೋಜನೆಯಿಂದ ಆರ್ಥಿಕ ವಹಿವಾಟು ವೃದ್ಧಿ: ವಿಧಾನ ಪರಿಷತ್ ಸದಸ್ಯ ದಿನೇಶ್ ಗೂಳಿಗೌಡ ಅಭಿಮತ

ಮಂಡ್ಯ: ರಾಜ್ಯಸರ್ಕಾರದ ಉಚಿತ ಬಸ್ ಪ್ರಯಾಣದ ಶಕ್ತಿಯೋಜನೆ ಬಗ್ಗೆ ಹಲವಾರು ಟೀಕೆ, ಟಿಪ್ಪಣಿಗಳು ಬಂದವಾದರೂ ಆರ್ಥಿಕ ವಹಿವಾಟು ವೃದ್ಧಿಯಾಗಿದೆ ಎಂದು ವಿಧಾನ ಪರಿಷತ್ ಸದಸ್ಯ ದಿನೇಶ್ ಗೂಳಿಗೌಡ ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ.

ಈ ಕುರಿತು ಪತ್ರಿಕಾ ಹೇಳಿಕೆ ನೀಡಿರುವ ಅವರು, ಮನೆಯ ನಾಲ್ಕು ಗೋಡೆಗಳ ಮಧ್ಯೆಯೇ ತಮ್ಮ ಜೀವಿತಾವಧಿ ಸವೆಸಿರುವ ಅದೆಷ್ಟೋ ಮಹಿಳೆಯರು ಇಂದು ವಿವಿಧ ಸ್ಥಳಗಳಿಗೆ ಪ್ರಯಾಣಿಸಿ ಅದರ ಮೂಲಕ ಅವರ ಮಾನಸಿಕ ಸ್ಥೈರ್ಯ, ಮನೋಬಲವೂ ಹೆಚ್ಚಿದೆ. ಇನ್ನು ಉದ್ಯೋಗಸ್ಥ ಮಹಿಳೆಯರಿಗೆ ಉದ್ಯೋಗಾವಕಾಶಗಳು ಇದರಿಂದ ವಿಸ್ತಾರವಾಗಿದೆ. ಒಂದು ಊರಿನಿಂದ ಇನ್ನೊಂದು ಊರಿಗೆ ಉಚಿತವಾಗಿಯೇ ಬಸ್ ಪ್ರಯಾಣ ಮಾಡುವುದರಿಂದ ಅವರಿಗೆ ದುಡಿಮೆಯ ಉಳಿತಾಯವಾಗುತ್ತದೆ. ಈ ಉಳಿತಾಯವು ಮತ್ತೊಂದು ಹೂಡಿಕೆಗೆ ಕಾರಣವಾಗಬಹುದು. ಜತೆಗೆ ಅಗತ್ಯತೆಗಳ ಖರ್ಚಿಗೂ ಕಾರಣವಾಗುತ್ತದೆ. ಹೀಗಾಗಿ ಪರೋಕ್ಷವಾಗಿ ಆರ್ಥಿಕ ವಹಿವಾಟಿಗೆ ಯೋಜನೆಯು ಶಕ್ತಿ ತುಂಬಿದಂತಾಗಿದೆ. ಮಂಡ್ಯ ಜಿಲ್ಲೆಯಲ್ಲಿ ಸರ್ಕಾರದ ಮಹತ್ವಾಕಾಂಕ್ಷೆಯ ಶಕ್ತಿ ಯೋಜನೆಗೆ ಮಹಿಳೆಯರಿಂದ ಅಭೂತಪೂರ್ವ ಸ್ಪಂದನೆ ದೊರೆತಿದ್ದು, ಈವರೆಗಿನ ಟಿಕೆಟ್ ಮೌಲ್ಯ ಪ್ರಮಾಣ 16.27 ಕೋಟಿ ರೂ ಆಗಿದೆ ಎಂದಿದ್ದಾರೆ.

ಜಿಲ್ಲೆಯಲ್ಲಿ ಅನ್ನಭಾಗ್ಯದಡಿ 3,99,965 ಕುಟುಂಬಗಳಿಗೆ 22.8 ಕೋಟಿ ರೂಪಾಯಿ ನೇರ ನಗದು ವರ್ಗಾವಣೆಯಾಗಿದ್ದು, ಬಡ ಮತ್ತು ಮಧ್ಯಮ ವರ್ಗದ ಜನ ಇದರ ನೇರ ಫಲಾನುಭವಿಗಳಗಿದೆ. ಬೆಲೆ ಏರಿಕೆಯಿಂದ ಬಸವಳಿದಿದ್ದ ಜನರ ಪಾಲಿಗೆ ಜನಪರ ಯೋಜನೆಯ ಮೂಲಕ ಬದುಕಿಗೆ ಆಸರೆ ಕಲ್ಪಿಸಿದೆ. ಇನ್ನಿತರ ಯೋಜನೆಗಳಿಗೂ ಸಹ ಮಂಡ್ಯದಲ್ಲಿ ಸ್ಪಂದನೆ ದೊರೆತಿದ್ದು ಗೃಹಜ್ಯೋತಿ ಯೋಜನೆಗೆ 3,26,810 ಕುಟುಂಬದಿಂದ ನೋಂದಣಿಯಾಗಿದೆ ಎಂದು ವಿವರಿಸಿದ್ದಾರೆ.

ಜನರ ಹಿತವನ್ನು ಕಾಪಾಡುವುದೇ ನಮ್ಮ ಕಾಂಗ್ರೆಸ್ ಸರ್ಕಾರದ ಗುರಿಯಾಗಿದ್ದು, ಆ ನಿಟ್ಟಿನಲ್ಲಿ ಸಿಎಂ ಸಿದ್ದರಾಮಯ್ಯ ಹಾಗೂ ಡಿಸಿಎಂ ಡಿ.ಕೆ.ಶಿವಕುಮಾರ್ ಅವರು ಅವಿರತವಾಗಿ ಶ್ರಮವಹಿಸುತ್ತಿದ್ದಾರೆ. ಜನರ ಸಂಕಷ್ಟಗಳಿಗೆ ಸ್ಪಂದಿಸಿದ ನಮ್ಮ ನಾಯಕರಿಗೆ ಅಭಿನಂದನೆ ಸಲ್ಲಿಸುತ್ತೇನೆ. ಜಿಲ್ಲೆಯ ಜನರು ಯಾವುದೇ ಗೊಂದಲಕ್ಕೆ ಒಳಗಾಗದೇ ನಿರಾತಂಕವಾಗಿ ಗೃಹಜ್ಯೋತಿ ಮತ್ತು ಗೃಹಲಕ್ಷ್ಮೀ ಯೋಜನೆಗೆ ಹೆಸರು ನೋಂದಾಯಿಸಿಕೊಳ್ಳುವಂತೆ ಮನವಿ ಮಾಡಿದ್ದಾರೆ.