ಬೆಂಗಳೂರು: ಬೆಂಗಳೂರು ಮಹಾನಗರಕ್ಕೆ ಸಕಲ ಮೂಲಸೌಕರ್ಯ ಕಲ್ಪಿಸುವುದಾಗಿ ವರ್ಷದ ಆರಂಭದಲ್ಲೇ ಸರ್ಕಾರ ಹಾಗೂ ನಗರ ಅಭಿವೃಧ್ಧಿಯ ಪಾಲುದಾರ ಸಂಸ್ಥೆಗಳು ವಾಗ್ದಾನ ನೀಡಿದ್ದವು. ಆದರೆ, ವರ್ಷಾಂತ್ಯ ಮುಗಿಯುತ್ತಿದ್ದರೂ ಬಹುತೇಕ ಆಶ್ವಾಸನೆಗಳು ಈಡೇರದೆ ಜನತೆ ಸಮಸ್ಯೆಯಲ್ಲೇ ಮುಳುಗೇಳುವಂತಾಗಿದೆ. ಕೆಲವು ಸೌಲಭ್ಯಗಳಷ್ಟೇ ನಾಗರಿಕರಿಗೆ ದೊರೆಯಿತಾದರೂ, ಹೆಚ್ಚಿನವು ಕಾಗದದಲ್ಲೇ ಉಳಿದ ಕಾರಣ 2024ರಲ್ಲಿ ನಗರ ಅಭಿವೃದ್ಧಿ ಹಿಂದೆ ಬಿದ್ದಿದ್ದಂತೂ ನಿಜ.
ಬಿಬಿಎಂಪಿಯಿಂದ ಹಲವು ಕಾರ್ಯಕ್ರಮಗಳು ಇನ್ನೂ ಟೆಂಡರ್ ಹಂತದಲ್ಲೇ ಇವೆ. ಬಿಡಿಎಯಿಂದ ವಿಲ್ಲಾಗಳ ಮಾರಾಟಕ್ಕೆ ಚಾಲನೆ ನೀಡಿದ್ದರೂ, ಶಿವರಾಮ ಕಾರಂತ ಲೇಔಟ್‌ನಲ್ಲಿ ನಿವೇಶನ ಹಂಚಿಕೆಗೆ ಹೈಕೋರ್ಟ್ ತಡೆಯಾಜ್ಞೆ ನೀಡಿದೆ. ಜಲಮಂಡಳಿಯಿಂದ 110 ಹಳ್ಳಿಗಳಿಗೆ ಕುಡಿಯುವ ನೀರು ಪೂರೈಸುವ ಕಾವೇರಿ 5ನೇ ಹಂತದ ಯೋಜನೆ ಲೋಕಾರ್ಪಣೆಯಾಗಿ ಜನರ ನೀರಿನ ಪರದಾಟಕ್ಕೆ ತೆರೆ ಎಳೆದಿದೆ. ಬಿಎಂಟಿಸಿಯಿಂದ ಹೊಸ ಇಲೆಕ್ಟ್ರಿಕ್ ಬಸ್‌ಗಳನ್ನು ರಸ್ತೆಗೆ ಇಳಿಸಿದ್ದರೂ, ಪ್ರಯಾಣಿಕರ ಸಂಖ್ಯೆಗೆ ಅನುಗುಣವಾಗಿ ಸೇವೆ ನೀಡಲು ಹರಸಾಹಸ ಮಾಡಬೇಕಾಯಿತು. ಸೆಪ್ಟೆಂಬರ್-ಅಕ್ಟೋಬರ್‌ನಲ್ಲಿ ಅಧಿಕ ಮಳೆಯಿಂದ ಯಲಹಂಕ ಸೇರಿ ಹಲವು ಪ್ರದೇಶಗಳಲ್ಲಿ ಪ್ರವಾಹದ ಪರಿಸ್ಥಿತಿ ಎದುರಾಯಿತು. ತಗ್ಗುಪ್ರದೇಶಗಳಿಗೆ ನೀರು ನುಗ್ಗಿ ಅನಾಹುತ ಸಂಭವಿಸಿತು. ಸಿಎಂ, ಡಿಸಿಎಂ ನಗರ ಪ್ರದಕ್ಷಿಣೆ ಮಾಡಿದ ಬಳಿಕ ಹಲವು ಕಾಮಗಾರಿಗಳು ವೇಗ ಪಡೆಯದಿದ್ದಕ್ಕೆ ಜನಾಕ್ರೋಶ ವ್ಯಕ್ತವಾಯಿತು.
ವೈಟ್ ಟಾಪಿಂಗ್ ಕಾಮಗಾರಿಗೆ ಚಾಲನೆ
ನಗರದಲ್ಲಿ ದೀರ್ಘ ಬಾಲಿಕೆ ಬರುವ ರಸ್ತೆಗಳನ್ನು ನಿರ್ಮಿಸುವ ಸಲುವಾಗಿ 157 ಕಿ.ಮೀ. ಉದ್ದ ವೈಟ್ ಟಾಪಿಂಗ್ ಯೋಜನೆಗೆ ಹಾಲಿ ವರ್ಷದ ಮಧ್ಯಭಾಗದಲ್ಲಿ ಚಾಲನೆ ನೀಡಲಾಯಿತು. ವರ್ಷಾಂತ್ಯದ ವೇಳೆಗೆ ಕೆಲ ರಸ್ತೆಗಳಲ್ಲಿ ಕಾಮಗಾರಿ ಆರಂಭವಾಗಿದ್ದು, ಮುಂದಿನ ಆರು ತಿಂಗಳಿನಲ್ಲಿ ಮೊದಲ ಹಂತ ಪೂರ್ಣಗೊಳಿಸಲು ಗುರಿ ಹೊಂದಲಾಗಿದೆ. ಇದರ ಜತೆಗೆ ವಿಧಾನಸಭಾ ಕ್ಷೇತ್ರವಾರು ತಲಾ 5-10 ಕಿ.ಮೀ. ರಸ್ತೆ ಅಭಿವೃದ್ಧಿಗೂ ಚಾಲನೆ ದೊರೆತಿದೆ.
ಆಸ್ತಿಗಳಿಗೆ ಇ-ಖಾತಾ ವಿತರಣೆ
ಬಿಬಿಎಂಪಿ ವ್ಯಾಪ್ತಿಯಲ್ಲಿನ 22 ಲಕ್ಷ ಆಸ್ತಿಗಳಿಗೆ ಡಿಜಿಟಲ್ ದಾಖಲೆ ಇ-ಖಾತಾ ನೀಡುವ ಕಾರ್ಯಕ್ರಮಕ್ಕೆ ಅ.1ರಂದು ಚಾಲನೆ ದೊರೆಯಿತು. ಆರಂಭದಲ್ಲಿ ತಾಂತ್ರಿಕ ತೊಂದರೆ ಎದುರಾಗಿ ಆಸ್ತಿ ನೋಂದಣಿಗೆ ಅಡ್ಡಿಯಾಯಿತು. ಇದರಿಂದ ಸರ್ಕಾರಕ್ಕೆ ರಾಜಸ್ವ ಕೊರತೆ ಎದುರಾದ ಕಾರಣ ಹೆಚ್ಚುವರಿ ಎಆರ್‌ಒಗಳನ್ನು ನಿಯೋಜಿಸಿ ಸೌಲಭ್ಯ ಒದಗಿಸಲು ಅವಕಾಶ ಮಾಡಿಕೊಡಲಾಯಿತು. ಎರಡು ತಿಂಗಳ ಬಳಿಕ ತಂತ್ರಾಂಶದಲ್ಲಿನ ದೋಷ ಸರಿಪಡಿಸಿ ವರ್ಷಾಂತ್ಯಕ್ಕೆ 65 ಸಾವಿರ ಸ್ವತ್ತುಗಳಿಗೆ ಇ-ಖಾತಾ ವಿತರಿಸಲಾಗಿದೆ.
ರಸ್ತೆಗುಂಡಿ ಸಮಸ್ಯೆಗಿಲ್ಲ ಪರಿಹಾರ
ನಗರದ ರಸ್ತೆ ಅಭಿವೃದ್ಧಿಗೆ ಹೆಚ್ಚಿನ ಅನುದಾನ ಸಿಗದ ಕಾರಣ ಹಲವು ಪ್ರದೇಶಗಳಲ್ಲಿ ಗುಂಡಿ ಬಿದ್ದ ಮಾರ್ಗಗಳಲ್ಲೇ ಜನ ಹಾಗೂ ವಾಹನಗಳು ಸಂಚರಿಸಬೇಕಾಯಿತು. ಅಧಿಕ ಮಳೆಯಿಂದ ಗುಂಡಿಗಳು ಉಂಟಾಗಿ ಸಮಸ್ಯೆಯಾದಾಗ ಡಿಸಿಎಂ ಅವರು ಅಧಿಕಾರಿಗಳಿಗೆ ಎಚ್ಚರಿಕೆ ನೀಡಿ ರಸ್ತೆಗುಂಡಿ ಮುಚ್ಚಿಸಿದರು. ಆದರೆ, ಮತ್ತೆ ಮತ್ತೆ ಗುಂಡಿಗಳು ಉಂಟಾಗಿ ರಸ್ತೆಗಳು ಹಾಳಾಗಿವೆ ಎಂಬ ಆಕ್ಷೇಪ ನಾಗರಿಕರು ವ್ಯಕ್ತಪಡಿಸುವಂತಾಯಿತು.
ಸೈಟ್ ಹಂಚಿಕೆ ವಿಳಂಬ
ಉದ್ದೇಶಿತ ಡಾ. ಶಿವರಾಂ ಕಾರಂತ ಬಡಾವಣೆಯಲ್ಲಿ ಮೊದಲ ಹಂತದಲ್ಲಿ ಸಾರ್ವಜನಿಕರಿಗೆ ಸೈಟ್ ಹಂಚಿಕೆ ಘೋಷಣೆ ಮಾಡಲಾಯಿತು. ಆದರೆ, ರೈತರಿಗೆ ಮೊದಲು ಪರಿಹಾರ ಸೈಟ್‌ಗಳನ್ನು ವಿತರಿಸಬೇಕು ಹಾಗೂ ಹಂಚಿಕೆ ವಿಧಾನ ಸಮರ್ಪಕವಾಗಿ ಕೈಗೆತ್ತಿಕೊಂಡಿಲ್ಲ ಎಂದು ಆಕ್ಷೇಪಿಸಿ ಕೆಲ ವ್ಯಕ್ತಿಗಳು ಹೈಕೋರ್ಟ್ ಮೊರೆಹೋದ ಕಾರಣ ಹಂಚಿಕೆ ಪ್ರಕ್ರಿಯೆಗೆ ತಡೆಯಾಜ್ಞೆ ನೀಡಲಾಗಿದೆ.
ವಿಲ್ಲಾ ವಿಲೇವಾರಿಗೆ ಚಾಲನೆ
ಬಿಡಿಎ ತನ್ನ 2ನೇ ವಿಲ್ಲಾ ಯೋಜನೆಯನ್ನು ಹುಣ್ಣಿಗೆರೆಯಲ್ಲಿ ನಿರ್ಮಿಸಿದ್ದು, ಸಾರ್ವಜನಿಕ ಹಂಚಿಕೆಗೆ ಚಾಲನೆ ನೀಡಿದೆ. 352 ಘಟಕಗಳನ್ನು ಹೊಂದಿರುವ ಡಾ.ಪುನೀತ್ ರಾಜ್‌ಕುಮಾರ್ ವಸತಿ ಸಮುಚ್ಛಯದಲ್ಲಿನ ಪ್ರತಿಯೊಂದು ಘಟಕವು ವಿಸ್ತೀರ್ಣ ಆಧರಿಸಿ ವಿಲೇವಾರಿ ಮಾಡಲಾಗುತ್ತಿದೆ. ಮೊದಲ ಹಂತದಲ್ಲಿ 25 ವಿಲ್ಲಾಗಳ ವಿಲೇಗೆ ಇ-ಹರಾಜು ಮಾದರಿ ಅಳವಡಿಸಿಕೊಳ್ಳಲಾಗಿದೆ. ಜತೆಗೆ ಇ-ಹರಾಜು ಮೂಲಕ ಮೂಲೆ ನಿವೇಶನಗಳನ್ನು ಮಾರಾಟ ಮಾಡುವಲ್ಲಿ ಬಿಡಿಎ ಈ ವರ್ಷವೂ ಹೆಚ್ಚಿನ ಆದಾಯ ಕಂಡುಕೊಳ್ಳುವಲ್ಲಿ ಸಫಲವಾಗಿದೆ.
ಬಿಬಿಸಿಗೆ ನಬಾರ್ಡ್ ಸಾಲ
ದಶಕದಿಂದ ನೆನೆಗುದಿಗೆ ಬಿದ್ದಿರುವ ಪೆರಿಫೆರಲ್ ರಿಂಗ್ ರಸ್ತೆ (ಪಿಆರ್‌ಆರ್) ಯೋಜನೆಯ ಜಾರಿಗೆ ಸರ್ಕಾರ ಒಪ್ಪಿಗೆ ನೀಡಿದೆ. ಯೋಜನೆ ಜಾರಿಗೆ 26 ಸಾವಿರ ಕೋಟಿ ರೂ. ಬೇಕಿರುವುದರಿಂದ ಬೆಂಗಳೂರು ಬಿಸಿನೆಸ್ ಕಾರಿಡಾರ್ (ಬಿಬಿಸಿ) ಆಗಿ ಹೆಸರು ಬದಲಿಸಿದ್ದು, ನಬಾರ್ಡ್‌ನಿಂದ ಸಾಲ ಪಡೆದು ಕಾಮಗಾರಿ ಆರಂಭಿಸಲು ಸಿದ್ಧತೆ ನಡೆಸಲಾಗಿದೆ.
ನಗದುರಹಿತ ಬಸ್ ಟಿಕೆಟ್
ಬಿಎಂಟಿಸಿಯಿಂದ ಕೆಲ ಹೊಸ ಮಾರ್ಗಗಳಲ್ಲಿ ಇಲೆಕ್ಟ್ರಿಕ್ ಬಸ್‌ಗಳನ್ನು ರಸ್ತೆಗಿಳಿಸಲಾಯಿತು. ಕೆಐಎ ಏರ್‌ಪೋರ್ಟ್‌ಗೂ ಎಸಿ ಮಾದರಿಯ ಹೆಚ್ಚುವರಿ ವಾಹನಗಳಿಗೆ ಹಸಿರು ನಿಶಾನೆ ದೊರೆತಿದೆ. ಇದೇ ಮೊದಲ ಬಾರಿಗೆ ಆಯ್ದ ಮಾರ್ಗಗಗಳಲ್ಲಿ ನಗದು ರಹಿತ ಟಿಕೆಟ್ ವಿತರಣೆಗೆ ಡಿಜಿಟಲ್ ಪೇಮೆಂಟ್‌ಗಾಗಿ ಕ್ಯೂಆರ್ ಕೋಡ್ ಬಳಸಲು ಅವಕಾಶ ಮಾಡಿಕೊಡಲಾಗಿದೆ. ಮೆಟ್ರೋ ನಿಲ್ದಾಣಗಳಿಂದ ಲಾಸ್ಟ್ ಮೈಲ್ ಕನ್ಟೆವಿಟಿಗಾಗಿ ಫೀಡರ್ ಬಸ್‌ಗಳನ್ನು ಪ್ರಯಾಣಿಕರ ಅನುಕೂಲಕ್ಕಾಗಿ ಪರಿಚಯಿಸಲಾಗಿದೆ.