ಜಿಲ್ಲೆ

ಐದು ಪಾಲಿಕೆಗಳಲ್ಲಿ ಹೊಸ ಟೆಂಡರ್ ಸದ್ಯಕ್ಕಿಲ್ಲ

ಆರ್​​​.ತುಳಸಿಕುಮಾರ್​​ ಬೆಂಗಳೂರು

ಗ್ರೇಟರ್ ಬೆಂಗಳೂರು ಪ್ರಾಧಿಕಾರ (ಜಿಬಿಎ) ವ್ಯಾಪ್ತಿಯಲ್ಲಿ ರಚನೆಯಾಗಿರುವ ಐದು ನಗರ ಪಾಲಿಕೆಗಳಲ್ಲಿ ಹೊಸದಾಗಿ ಟೆಂಡರ್ ಆಹ್ವಾನಿಸುವ ಪ್ರಕ್ರಿಯೆಗೆ ತಡೆ ಒಡ್ಡಲಾಗಿದೆ. ನೂತನವಾಗಿ ಅಸ್ತಿತ್ವಕ್ಕೆ ಬಂದಿರುವ ಪಾಲಿಕೆಗಳ ಆಡಳಿತಯಂತ್ರ ಒಂದು ಹಂತಕ್ಕೆ ಬರುವವರೆಗೂ ದೊಡ್ಡ ಮೊತ್ತದ ಕಾಮಗಾರಿಗಳನ್ನು ಕೈಗೊಳ್ಳುವ ಅಗತ್ಯವಿಲ್ಲ ಎಂಬ ಫರ್ಮಾನು ಜಿಬಿಎಯಿಂದ ಹೊರಬಿದ್ದಿದೆ.

ಕಾಪೋರೇಷನ್‌ಗಳು ರಚನೆಗೊಂಡು ಇನ್ನೂ ಒಂದು ತಿಂಗಳೂ ಮುಗಿದಿಲ್ಲ. ಈ ಅವಧಿಯಲ್ಲಿ ಆಯಾ ಪಾಲಿಕೆಗಳ ವ್ಯಾಪ್ತಿಯಲ್ಲಿ ತಕ್ಷಣವೇ ಕಾಮಗಾರಿ ಕೈಗೊಳ್ಳಲು ಹಣಕಾಸಿನ ಅಗತ್ಯವಿದೆ. ಜತೆಗೆ ಚುನಾಯಿತ ಆಡಳಿತ ಇಲ್ಲದ ಕಾರಣ ಪ್ರಮುಖ ನಿರ್ಧಾರಗಳನ್ನು ಕೈಗೊಳ್ಳಲು ನಿಯಮಗಳಲ್ಲಿ ಅವಕಾಶ ಇಲ್ಲ. ಮುಖ್ಯವಾಗಿ ಜಿಬಿಎ ಒಪ್ಪಿಗೆ ಪಡೆದೇ ಮುಂದಡಿ ಇಡಬೇಕಿರುವ ಕಾರಣ ಅನುಮೋದನೆ ಸಿಗುವುದು ಕಷ್ಟ. ಹಾಗಾಗಿ ಹೊಸ ಟೆಂಡರ್ ಸಿದ್ಧಪಡಿಸುವ ಕಡತ ಸೃಷ್ಟಿಸಿದಂತೆ ಹಣಕಾಸು ವಿಭಾಗದಿಂದ ಸೂಚನೆ ನೀಡಲಾಗಿದೆ.

ಕಳೆದ ಮಾ.29ರಂದು ಹಿಂದಿನ ಬಿಬಿಎಂಪಿ ಬಜೆಟ್ ಮಂಡನೆಯಾಗಿತ್ತು. ಆಯವ್ಯಯದಲ್ಲಿ ವಿವಿಧ ವಿಭಾಗಗಳಿಂದ ಕಾರ್ಯಕ್ರಮಗಳನ್ನು ಕೈಗೊಳ್ಳಲು ಹಣ ನಿಗದಿ ಮಾಡಲಾಗಿತ್ತು. ಜತೆಗೆ ಈ ಹಿಂದೆ ನಿಗದಿ ಮಾಡಿದ್ದ ಅನುದಾನ ಬಳಸಿಕೊಂಡು ಹೊಸ ಪ್ರಾಜೆಕ್ಟ್‌ಗಳ ಹೆಸರಿನಲ್ಲಿ ಕೆಲಸ ಆರಂಭಿಸಲು ಸಿದ್ಧತೆ ನಡೆದಿತ್ತು. ಆದರೆ, ಜಿಬಿಎ ರಚನೆಯಾದ ಬಳಿಕ ಸದ್ಯಕ್ಕೆ ಯಾವುದೇ ಹೊಸ ಯೋಜನೆಗಳನ್ನು ರೂಪಿಸಿ ಅನುಷ್ಠಾನಕ್ಕೆ ತರಲು ತಾತ್ಕಾಲಿಕ ತಡೆ ನೀಡಲಾಗಿದೆ. ತುರ್ತು ಕೆಲಸಗಳಾದ ಪ್ರವಾಹ ತಡೆ, ಪರಿಹಾರ ವಿತರಣೆ ಸಹಿತ ಕೆಲ ಬಾಬ್ತುಗಳಿಗೆ ಮಾತ್ರ ವಿನಾಯಿತಿ ನೀಡಲಾಗಿದೆ.

ಅನುಮತಿ ನೀಡಲು ಸಮಿತಿ ರಚನೆ:

ಬಿಬಿಎಂಪಿ ಅವಧಿಯಲ್ಲಿ ಆಹ್ವಾನಿಸಿದ್ದ ಟೆಂಡರ್‌ಗಳಿಗೆ ಈಗಾಗಲೇ ಕಾರ್ಯಾದೇಶ ನೀಡಿದ್ದಲ್ಲಿ ಕಾಮಗಾರಿ ಮುಂದುವರಿಸಬಹುದು. ಕಾರ್ಯಾದೇಶ ನೀಡದ ಪ್ರಕರಣಗಳಲ್ಲಿ ಜಿಬಿಎ ಒಪ್ಪಿಗೆ ಅತ್ಯಗತ್ಯ. ಇತ್ತೀಚಿಗಷ್ಟೇ ನಗರಾಭಿವೃದ್ಧಿ ಆದೇಶ ಹೊರಡಿಸಿ, ಪ್ರಮುಖ ಕಾಮಗಾರಿಗಳನ್ನು ಮುಂದುವರಿಸುವ ಕುರಿತು ಜಿಬಿಎ ಮುಖ್ಯ ಆಯುಕ್ತರ ಅಧ್ಯಕ್ಷತೆಯಲ್ಲಿ ನಾಲ್ವರು ಅಧಿಕಾರಿಗಳ ಸಮಿತಿ ರಚಿಸಿದೆ. ಈ ಸಮಿತಿಗೆ ಟೆಂಡರ್ ಮುಂದುವರಿಸು ಅಥವಾ ರದ್ದುಪಡಿಸುವ ಅಧಿಕಾರ ನೀಡಲಾಗಿದೆ. ಅಲ್ಲದೆ ಕಾಮಗಾರಿಗಳಲ್ಲಿ ಕೆಲ ಅಂಶಗಳನ್ನು ಬದಲಾವಣೆ ಮಾಡಿ ಮುಂದುವರಿಸಬಹುದಾಗಿದ್ದು, ಅನುದಾನ ಲಭ್ಯತೆ ಆಧರಿಸಿ ಕಾಮಗಾರಿ ಮುಂದುವರಿಸಲಷ್ಟೇ ಅವಕಾಶ ಕಲ್ಪಿಸಲಾಗಿದೆ.

ಬೃಹತ್ ಯೋಜನೆಗಳು ಬಿ-ಸ್ಮೈಲ್ ಹೆಗಲಿಗೆ:

ಬಿಬಿಎಂಪಿಯ ಕೊನೆಯ ದಿನಗಳಲ್ಲಿ ಬೃಹತ್ ಕಾಮಗಾರಿಗಳನ್ನು ಕೈಗೊಳ್ಳಲು ಬಿ-ಸ್ಮೈಲ್ ಸಂಸ್ಥೆಯನ್ನು ಅಸ್ತಿತ್ವಕ್ಕೆ ತರಲಾಗಿದೆ. ಈ ಸಂಸ್ಥೆ ಹೆಗಲಿಗೆ ಈಗಾಗಲೇ ದೊಡ್ಡ ಮೊತ್ತದ ಪ್ರಾಜೆಕ್ಟ್‌ಗಳನ್ನು ವಹಿಸಲಾಗಿದೆ. ಟನಲ್ ರಸ್ತೆ, ಸ್ಕೈ ಡೆಕ್, ಫ್ಲೈಓವರ್, ವೈಟ್ ಟಾಪಿಂಗ್, ಎಲಿವೇಟೆಡ್ ಪ್ರಾಜೆಕ್ಟ್‌ಗಳನ್ನು ಜಾರಿ ಮಾಡುವ ಹೊಣೆಗಾರಿಕೆ ವಹಿಸಲಾಗಿದೆ. ಕೆಲ ದಿನಗಳ ಹಿಂದಷ್ಟೇ ಪ್ರಗತಿಯಲ್ಲಿರುವ ಈಜಿಪುರ ಮೇಲ್ಸೇತುವೆ ಕಾಮಗಾರಿ ಸಹಿತ 5 ಪ್ರಮುಖ ಯೋಜನೆಗಳನ್ನು (2,660 ಕೋಟಿ ರೂ. ಮೊತ್ತ) ಬಿ-ಸ್ಮೈಲ್‌ಗೆ ವರ್ಗಾಯಿಸಲಾಗಿದೆ. ಪ್ರಮುಖ ಮೂಲಸೌಕರ್ಯ ಯೋಜನೆಗಳನ್ನು ಪಾಲಿಕೆಗಳು ಕೈಗೊಳ್ಳಲು ಅಗತ್ಯವಿಲ್ಲದ ಕಾರಣ ಹೊಸ ಟೆಂಡರ್ ಆಹ್ವಾನಿಸುವ ಪ್ರಮೇಯ ಬಾರದು ಎಂದು ಜಿಬಿಎ ಅಧಿಕಾರಿಗಳು ಪ್ರತಿಕ್ರಿಯಿಸಿದ್ದಾರೆ.

ಕಲ್ಯಾಣ ಕಾರ್ಯಕ್ರಮಗಳಿಗೂ ಕೊಕ್:

ಬಿಬಿಎಂಪಿಯಿಂದ ಪ್ರತಿವರ್ಷ 500 ಕೋಟಿ ರೂ.ಗೂ ಹೆಚ್ಚಿನ ಮೊತ್ತದ ಕಲ್ಯಾಣ ಕಾರ್ಯಕ್ರಮಗಳನ್ನು ಕೈಗೊಳ್ಳಲಾಗುತ್ತಿತ್ತು. ಇವುಗಳಲ್ಲಿ ಪರಿಶಿಷ್ಟರು ಸೇರಿ ಬಡವರಿಗೆ ಹಲವು ಯೋಜನೆಗಳನ್ನು ತಲುಪಿಸಲಾಗುತ್ತಿತ್ತು. ಈಗ ಐದು ಪಾಲಿಕೆಗಳು ರಚನೆಯಾಗಿರುವ ಕಾರಣ ತಮ್ಮ ವ್ಯಾಪ್ತಿಯಲ್ಲಿ ಹಿಂದಿನ ಕಾರ್ಯಕ್ರಮಗಳನ್ನು ಜಾರಿಗೊಳಿಸಲು ಫಲಾನುಭವಿಗಳ ಆಯ್ಕೆ ಕಗ್ಗಂಟಾಗಿದೆ. ಹಿಂದಿನ ಪಟ್ಟಿಯಂತೆ ವಿತರಿಸಲು ಸಾಧ್ಯವಾಗದ ಕಾರಣ ಹೊಸ ಪಟ್ಟಿ ಸಿದ್ಧಪಡಿಸುವ ಕೆಲಸ ಇನ್ನಷ್ಟೇ ಆಗಬೇಕಿದೆ. ಈ ಪ್ರಕ್ರಿಯೆ ಪೂರ್ಣಕ್ಕೆ ಒಂದೆರಡು ತಿಂಗಳು ಹಿಡಿಯುವುದರಿಂದ ಈ ವರ್ಷಾಂತ್ಯದವರೆಗೂ ಕಲ್ಯಾಣ ಕಾರ್ಯಕ್ರಮಗಳು ಜನರಿಗೆ ಸಿಗುವುದಿಲ್ಲ.

ಗುಂಡಿ ಮುಚ್ಚುವ ಕೆಲಸಕ್ಕಿಲ್ಲ ತಡೆ:

ಪ್ರಸ್ತುತ ನಗರದೆಲ್ಲೆಡೆ ರಸ್ತೆಗುಂಡಿ ಸಮಸ್ಯೆ ಬಿಗಡಾಯಿಸಿದೆ. ಎಲ್ಲ ಐದೂ ಪಾಲಿಕೆ ವ್ಯಾಪ್ತಿಗಳಲ್ಲೂ ಗುಂಡಿಗಳು ಉಂಟಾಗಿದ್ದು, ಅವುಗಳನ್ನು ಮುಚ್ಚಲು ಕ್ರಮ ಕೈಗೊಳ್ಳಲಾಗಿದೆ. ಬಿಬಿಎಂಪಿ ಬಜೆಟ್‌ನಲ್ಲಿ ಮೀಸಲಿಟ್ಟಿದ್ದ ಅನುದಾನ ಬಳಕೆ ಮಾಡಲಾಗುತ್ತಿದೆ. ಸರ್ಕಾರದಿಂದಲೂ ಹೆಚ್ಚುವರಿ ಅನುದಾನ ಲಭ್ಯವಾಗಲಿದೆ. ತುರ್ತು ನಿಧಿ ಸಹಿತ ಇನ್ನಿತರ ಬಾಬ್ತಿನಿಂದ ಹಣ ಪಡೆದು ಗುಂಡಿ ಮುಚ್ಚಲು ಅವಕಾಶ ಇರುವುದರಿಂದ ಈ ಕಾರ್ಯಕ್ಕೆ ಯಾವುದೇ ತಡೆ ನೀಡಿಲ್ಲ ಎಂದು ಜಿಬಿಎ ಮುಖ್ಯ ಆಯುಕ್ತರು ಪ್ರಕ್ರಿಯಿಸಿದ್ದಾರೆ.