ಡಿಎಚ್‌ಒ ಡಾ. ಕೆ.ಎಸ್.ನಟರಾಜ್  
ಜಿಲ್ಲೆ

ಜಿಲ್ಲೆಯಲ್ಲಿ ಪ್ರಸ್ತುತ 64 ಕೆಎಫ್‌ಡಿ ಪ್ರಕರಣ

ನವೀನ ಬಿ.ಎಂ

ಶಿವಮೊಗ್ಗ: ಜಿಲ್ಲೆಯಲ್ಲಿ ಪ್ರಸ್ತುತ 64 ಕೆಎಫ್‌ಡಿ ಪ್ರಕರಣಗಳಿದ್ದು ಇದುವರೆಗೆ ಸೋಂಕಿನಿಂದ ಇಬ್ಬರು ಮೃತಪಟ್ಟಿದ್ದಾರೆ. ತೀರ್ಥಹಳ್ಳಿ ತಾಲೂಕಿನ ಕೋಣಂದೂರು ಸಮೀಪದ ಎಂಟು ವರ್ಷದ ಬಾಲಕನ ಸಾವಿನ ಸಂಬಂಧ ಒಂದು ವಾರದಲ್ಲಿ ಜಿಲ್ಲಾಧಿಕಾರಿಗಳಿಗೆ ವರದಿ ಸಲ್ಲಿಸಲಾಗುವುದು ಡಿಎಚ್‌ಒ ಡಾ. ಕೆ.ಎಸ್.ನಟರಾಜ್ ತಿಳಿಸಿದರು.

ನಗರದಲ್ಲಿ ಶನಿವಾರ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಬಾಲಕ ಕೆಎಫ್‌ಡಿ ವೈರಾಣುವಿನಿಂದ ಮೃತಪಟ್ಟಿದ್ದು, ಜ್ವರ ಕಾಣಿಸಿಕೊಂಡರೆ ನಿರ್ಲಕ್ಷೃ ಮಾಡದೇ ಸಮೀಪದ ಆಸ್ಪತ್ರೆಗಳಿಗೆ ತೆರಳಿ ರಕ್ತ ಪರೀಕ್ಷೆ ಮಾಡಿಸಿಕೊಳ್ಳಬೇಕು ಎಂದು ಸೂಚಿಸಿದರು.

ಮೃತ ಬಾಲಕ ಮತ್ತು ಆತನ ಸಹೋದರಿ ಇಬ್ಬರಿಗೂ ಜ್ವರ ಕಾಣಿಸಿಕೊಂಡಿತ್ತು. ತೀರ್ಥಹಳ್ಳಿ ಆಸ್ಪತ್ರೆಯಲ್ಲಿ ಚಿಕಿತ್ಸೆ ನೀಡಿ ಬಳಿಕ ಮಣಿಪಾಲ್ ಆಸ್ಪತ್ರೆಗೆ ದಾಖಲಿಸಲಾಗಿತ್ತು. ಅದರಲ್ಲಿ ಸಹೋದರಿ ಚೇತರಿಸಿಕೊಂಡಿದ್ದಳು. ಆದರೆ ಉತ್ತಮ ಚಿಕಿತ್ಸೆ ಹೊರತಾಗಿಯೂ ಬಾಲಕ ಮೃತಪಟ್ಟಿದ್ದಾನೆ ಎಂದು ಬೇಸರ ವ್ಯಕ್ತಪಡಿಸಿದರು.

ಜಿಲ್ಲೆಯಲ್ಲಿ ಒಟ್ಟು ನಾಲ್ಕು ಮಂದಿ ಆಸ್ಪತ್ರೆಗೆ ದಾಖಲಾಗಿದ್ದಾರೆ. ಇಬ್ಬರು ಶಿವಮೊಗ್ಗ ಹಾಗೂ ಇಬ್ಬರು ಮಣಿಪಾಲ್ ಆಸ್ಪತ್ರೆಯಲ್ಲಿದ್ದಾರೆ. ಚೇತರಿಸಿಕೊಳ್ಳುತ್ತಿದ್ದು ಈಗಾಗಲೇ ಕೆಎಫ್‌ಡಿ ಕಂಡುಬಂದಿರುವ ಪ್ರದೇಶಗಳಲ್ಲಿ ಡಿಪಿ ಆಯಿಲ್ ವಿತರಣೆ ಮಾಡಲಾಗಿದೆ. ಎಲ್ಲ ಮುಂಜಾಗ್ರತಾ ಕ್ರಮಗಳನ್ನು ನಾಗರೀಕರು ಕೈಗೊಳ್ಳಬೇಕು. ಎಪಿಎಲ್ ಮತ್ತು ಬಿಪಿಎಲ್ ಕಾರ್ಡ್‌ದಾರರು ಉಚಿತ ಚಿಕಿತ್ಸೆ ನೀಡಲಾಗುತ್ತಿದೆ ಎಂದು ಹೇಳಿದರು.