ವಿಜಯಪುರದ ಅಕ್ಕಮಹಾದೇವಿ ಮಹಿಳಾ ವಿಶ್ವ ವಿದ್ಯಾಲಯದಲ್ಲಿ ಆಯೋಜಿಸಿದ್ದ 22ನೇ ಸಂಸ್ಥಾಪನಾ ದಿನಾಚರಣೆಯಲ್ಲಿ ಸೇನಾ ನಿವೃತ್ತ ಉಪ ಮುಖ್ಯಸ್ಥ ರಮೇಶ ಹಲಗಲಿ ಮಾತನಾಡಿದರು.  
ಜಿಲ್ಲೆ

ಸೈನ್ಯದಲ್ಲಿ ಮಹಿಳೆಯರಿಗೆ ವಿಪುಲ ಅವಕಾಶ; ಸೇನಾ ನಿವೃತ್ತ ಉಪ ಮುಖ್ಯಸ್ಥ ರಮೇಶ ಹಲಗಲಿ

ವಿಜಯಪುರ: ಸೈನ್ಯದಲ್ಲಿ ಮಹಿಳೆಯರಿಗೆ ವಿಪುಲ ಅವಕಾಶಗಳಿವೆ. ಹಲವಾರು ಮಹಿಳಾ ಸೈನ್ಯಾಧಿಕಾರಿಗಳು ಪರಾಕ್ರಮ ತೋರಿಸಿದ್ದು, ಅವರ ಪರಿಶ್ರಮ-ಪರಾಕ್ರಮ ಪ್ರೇರಣಾದಾಯಿ ಎಂದು ಸೇನಾ ನಿವೃತ್ತ ಉಪ ಮುಖ್ಯಸ್ಥ ರಮೇಶ ಹಲಗಲಿ ಹೇಳಿದರು.

ಇಲ್ಲಿನ ಅಕ್ಕಮಹಾದೇವಿ ಮಹಿಳಾ ವಿಶ್ವ ವಿದ್ಯಾಲಯದಲ್ಲಿ ಶನಿವಾರ ಆಯೋಜಿಸಿದ್ದ 22ನೇ ಸಂಸ್ಥಾಪನಾ ದಿನಾಚರಣೆಯಲ್ಲಿ ಮಾತನಾಡಿದ ಅವರು, ಪ್ರಾಮಾಣಿಕತೆ, ಕಾರ್ಯಶೀಲತೆ ಮತ್ತು ಸಾಧನೆ ಮುಂತಾದ ಮೌಲ್ಯಗಳನ್ನು ಪಾಲನೆ ಮಾಡಿದಾಗ ಜೀವನದಲ್ಲಿ ಯಶಸ್ಸು ಸಾಧಿಸಲು ಸಾಧ್ಯ. ಇಂದಿನ ಯುವ ಜನಾಂಗವಾಗಿರುವ ನೀವುಗಳೇ ಮಾದರಿ ಭಾರತದ ನಿರ್ಮಾತೃಗಳು. ನಿಮ್ಮ ಶಕ್ತಿ ಸಾಮರ್ಥ್ಯ ಹಾಗೂ ಪ್ರತಿಭೆಯ ಮೂಲಕ ಗುರಿ ಸಾಧಿಸಲು ಶ್ರಮಿಸಬೇಕು ಎಂದು ವಿದ್ಯಾರ್ಥಿನಿಯರಿಗೆ ಪ್ರೇರಣೆ ನೀಡಿದರು.

ನಿಮಗೆ ಸೈನ್ಯದಲ್ಲಿ ಮಾನ ಸನ್ಮಾನಗಳು ಸಿಗುತ್ತವೆ. ಉತ್ತಮ ವೇತನವಿದೆ. ನಿಮಗೆ ಸೇನಾ ತರಬೇತಿ ಕೂಡಾ ನೀಡುತ್ತೇವೆ. ನೀವೆಲ್ಲಾ ಸೈನ್ಯ ಸೇರಲು ಸಿದ್ಧರಾಗಿ ಎಂದು ವಿದ್ಯಾರ್ಥಿನಿಯರಿಗೆ ಸಲಹೆ ನೀಡಿದರು.

ನಾವೆಲ್ಲರೂ ಭಾರತೀಯರು. ನಮ್ಮ ಸೈನ್ಯದ ಬಗೆಗೆ ನಾವು ಹೆಮ್ಮೆ ಪಡಬೇಕು. ಸೈನ್ಯದಲ್ಲಿನ ಶಿಸ್ತು, ಕಠಿಣ ಪರಿಶ್ರಮ ದೇಶ ಪ್ರೇಮದಿಂದ ಸೈನಿಕರು ತಮ್ಮ ಜೀವನದ ಹಂಗು ತೊರೆದು ವೈರಿ ರಾಷ್ಟ್ರಗಳ ಗಡಿ ಪ್ರವೇಶಿಸಿ ವೈರಿಗಳನ್ನು ಬಗ್ಗುಬಡಿದು ದೇಶದ ಗಡಿ ಕಾಯುತ್ತಾರೆ. ಅವರ ಶ್ರಮಕ್ಕೆ ನಾವು ಹೆಮ್ಮೆ ಪಡಬೇಕು. ಹಿಂದೂ, ಮುಸ್ಲಿಂ ಯಾವುದೇ ಜಾತಿ, ಧರ್ಮ ಭೇದ ಭಾವವಿಲ್ಲದೇ ನಾವೆಲ್ಲರೂ ಒಂದು. ನಮ್ಮ ದೇಶಕ್ಕೆ ಸಾವಿರಾರು ವರ್ಷಗಳ ಇತಿಹಾಸ, ಪರಂಪರೆ, ಸಂಸ್ಕೃತಿಯ ಹೆಮ್ಮೆ ಇದೆ. ನಾವು ಯಾವ ಜಾತಿ, ಧರ್ಮ, ಪ್ರದೇಶರವರು ಎಂಬುದು ಮುಖ್ಯವಲ್ಲ; ನಾವೆಲ್ಲರೂ ದೇಶಕ್ಕಾಗಿ ಒಂದಾಗಿ ದುಡಿಯಬೇಕು ಎಂದರು.

ಕುಲಸಚಿವ ಶಂಕರಗೌಡ ಸೋಮನಾಳ ಪ್ರಾಸ್ತಾವಿಕವಾಗಿ ಮಾತನಾಡುತ್ತಾ, ಮಹಿಳಾ ವಿವಿ ಮೂಲಕ ಮಹಿಳಾ ಸಬಲೀಕರಣಕ್ಕಾಗಿ ಹಿಂದಿನ ಕುಲಪತಿಗಳು, ಕುಲಸಚಿವರು, ಕುಲಸಚಿವರು ಮೌಲ್ಯಮಾಪನ, ಆರ್ಥಿಕ ಅಧಿಕಾರಿಗಳು, ಬೋಧಕ-ಬೋಧಕೇತರ ಸಿಬ್ಬಂದಿ ಹಾಗೂ ಹಲವು ಮಹನೀಯರು ಶ್ರಮಿಸಿದ್ದಾರೆ. ಅವರೆಲ್ಲರನ್ನು ಸ್ಮರಿಸುವುದು ನಮ್ಮ ಕರ್ತವ್ಯವಾಗಿದೆ ಎಂದರು.

ಮಹಿಳಾ ವಿವಿಯ ಮೌಲ್ಯಮಾಪನ ಕುಲಸಚಿವ ಪ್ರೊ.ಎಚ್.ಎಂ. ಚಂದ್ರಶೇಖರ ಮಾತನಾಡಿ, ಒಂದೊಳ್ಳೆ ವಿಶ್ವ ವಿದ್ಯಾನಿಲಯದ ಯಶಸ್ಸು ಅಂದರೆ ಅದು ಸರ್ವರ ಸಾಮೂಹಿಕ ಶ್ರಮದ ಫಲವಾಗಿದೆ. ಈ ವಿಶ್ವವಿದ್ಯಾಲಯದ ಯಶಸ್ಸಿಗೆ ಎಲ್ಲಾ ಪ್ರಾಧ್ಯಾಪಕರು, ವಿದ್ಯಾರ್ಥಿಗಳು, ಬೋಧಕ ಹಾಗೂ ಬೋಧಕೇತರ ಸಿಬ್ಬಂದಿ ಅಚಲ ಶ್ರಮ ಹಾಗೂ ಬದ್ಧತೆ ಅತ್ಯಂತ ಮಹತ್ವಪೂರ್ಣವಾಗಿದೆ. ವಿವಿಧ ಕ್ಷೇತ್ರಗಳಲ್ಲಿ ನಮ್ಮ ವಿದ್ಯಾರ್ಥಿಗಳು ಹಾಗೂ ಪ್ರಾಧ್ಯಾಪಕರು ತಾವು ತೋರಿಸಿರುವ ಸಾಧನೆ, ಶ್ರದ್ಧೆ ಮತ್ತು ಸಮರ್ಪಣೆಯಿಂದ ವಿಶ್ವ ವಿದ್ಯಾಲಯದ ಹೆಸರಿಗೆ ಕೀರ್ತಿಯನ್ನು ತಂದುಕೊಟ್ಟಿದ್ದಾರೆ ಎಂದರು.

ಅಧ್ಯಕ್ಷತೆ ವಹಿಸಿದ್ದ ಹಂಗಾಮಿ ಕುಲಪತಿ ಪ್ರೊ. ಶಾಂತಾದೇವಿ. ಟಿ ಮಾತನಾಡಿ, ಈ ಭಾಗದ ಮಹಿಳೆಯರಿಗೆ ಉನ್ನತ ಶಿಕ್ಷಣ ನೀಡುವ ಮಹತ್ತ್ವಾಕಾಂಕ್ಷೆ ಹೊಂದಿ ಸ್ಥಾಪಿತವಾದ ಈ ವಿಶ್ವ ವಿದ್ಯಾಲಯ, ಇಂದು ತನ್ನ 22 ವರ್ಷದ ಶ್ರೇಷ್ಠ ಶೈಕ್ಷಣಿಕ ಪ್ರಯಾಣವನ್ನು ಹೆಮ್ಮೆಯಿಂದ ನೆರವೇರಿಸುತ್ತಿದೆ. ಆರಂಭದಲ್ಲಿ ಕೇವಲ 260 ವಿದ್ಯಾರ್ಥಿನಿಯರೊಂದಿಗೆ ಪ್ರಾರಂಭವಾದ ಈ ಸಂಸ್ಥೆ, ನೇರ ನಿಷ್ಠೆ, ಗುಣಮಟ್ಟದ ಶಿಕ್ಷಣ ಹಾಗೂ ಸಾಮಾಜಿಕ ಬದ್ಧತೆಯ ಮೂಲಕ ಇಂದು 4,000 ರಿಂದ 5,000 ವಿದ್ಯಾರ್ಥಿಗಳಿಗೆ ಉನ್ನತ ಶಿಕ್ಷಣ ನೀಡುವಲ್ಲಿ ಯಶಸ್ವಿಯಾಗಿದೆ ಎಂದರು.

ನಿವೃತ್ತ ಬೋಧಕೇತರ ಸಿಬ್ಬಂದಿ ಶ್ರೀದೇವಿ ಬಂಡಗಾರ ಅವರನ್ನು ಸನ್ಮಾನಿಸಲಾಯಿತು. ಕುಲಸಚಿವ ಶಂಕರಗೌಡ ಸೋಮನಾಳ ಸ್ವಾಗತಿಸಿದರು. ಪ್ರೊ.ವಿಷ್ಣು ಎಂ. ಶಿಂದೆ ಪರಿಚಯಿಸಿದರು. ಪ್ರೊ.ಜ್ಯೋತಿ ಉಪಾಧ್ಯೆ ನಿರೂಪಿಸಿದರು. ಡಾ. ಕಲಾವತಿ ಕಾಂಬಳೆ ವಂದಿಸಿದರು.