ರಾಯಚೂರಿನ ಕನ್ನಡ ಭವನದಲ್ಲಿ ಮಂಗಳವಾರ ಜರುಗಿದ ಕಾರ್ಯಕ್ರಮದಲ್ಲಿ ಎಐಸಿಎಸ್‌ಎನ್ ಅಧ್ಯಕ್ಷ ಪ್ರೊ.ಸವ್ಯಸಾಚಿ ಚಟರ್ಜಿ ಮರೆಯದ ಕೆಂಪು ನಕ್ಷತ್ರ ಕೃತಿ ಲೋಕಾರ್ಪಣೆ ಮಾಡಿದರು. ಸಾಹಿತಿಗಳಾದ ಆರ್.ಕೆ.ಹುಡಗಿ, ಕೆ.ನೀಲಾ, ಹೋರಾಟಗಾರರಾದ ಚಂದ್ರಶೇಖರ ಬಾಳೆ, ರಾಘವೇಂದ್ರ ಕುಷ್ಟಗಿ, ಪ್ರಭಾ ಬೆಳವಂಗಲ, ಡಾ.ಮೀನಾಕ್ಷಿ ಬಾಳಿ, ರಮೇಶ ಪೂಜಾರ, ಶ್ಯಾಮಲಾ ಕಲಾಲಬಂಡಿ ಇದ್ದರು. 
ಜಿಲ್ಲೆ

ಸಿದ್ಧಾಂತ ಸಮಕಾಲೀನ ಬದುಕನ್ನು ಕಟ್ಟಿಕೊಡುತ್ತವೆ

ರಾಚಯ್ಯ ಸ್ವಾಮಿ

ರಾಯಚೂರು: ಯಾವುದೇ ಸಿದ್ಧಾಂತ, ಚಿಂತನೆಗಳು ಅವರ ಸಮಕಾಲೀನ ಬದುಕಿನಲ್ಲಿ ಮಿಳಿತವಾಗಿರುವುದರ ಜತೆಗೆ ಇನ್ನೊಬ್ಬರ ಬದುಕನ್ನು ಕಟ್ಟಿಕೊಡುತ್ತವೆ ಎಂದು ಕಲಬುರಗಿಯ ಹಿರಿಯ ಸಾಹಿತಿ ಆರ್.ಕೆ.ಹುಡಗಿ ಹೇಳಿದರು.
ಸ್ಥಳೀಯ ಕನ್ನಡ ಭವನದಲ್ಲಿ ಪುರುಷೋತ್ತಮರ ಒಡನಾಡಿಗಳ ಬಳಗದಿಂದ ಮಂಗಳವಾರ ಏರ್ಪಡಿಸಿದ್ದ ಮರೆಯದ ಕೆಂಪು ನಕ್ಷತ್ರ ಕೃತಿ ಲೋಕಾರ್ಪಣೆ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿ, ಕ್ರಾಂತಿಗೆ ಸಾವಿಲ್ಲದಿರುವಂತೆ ಕ್ರಾಂತಿಕಾರಿಗಳಿಗೂ ಸಾವು ಇರುವುದಿಲ್ಲ. ಅವರು ನಮ್ಮೊಳಗಿರುತ್ತಾರೆ ಎಂದರು.
ಕ್ರಾಂತಿಕಾರಿ ಚಿಂತನೆಗಳು, ಹೋರಾಟಗಳಿಂದ ಮಾಡಿದ್ದನ್ನು ತೋರಿಸಲು ಏನೂ ಇರುವುದಿಲ್ಲ. 80ರ ದಶಕದಲ್ಲಿ ರಾಯಚೂರು ಜಿಲ್ಲೆಯಲ್ಲಿ ಹೋರಾಟಗಳು ಉತ್ತುಂಗದ ಸ್ಥಿತಿಯಲ್ಲಿದ್ದವು. ಹೆಚ್ಚಿನ ಸಂಖ್ಯೆಯಲ್ಲಿ ಯುವ ಜನರು ಹೋರಾಟದಲ್ಲಿದ್ದರು.
ಹೋರಾಟಗಳಿಗೆ ಹೊಸ ದೃಷ್ಟಿಕೋನಗಳನ್ನು ನೀಡುವ ಕೆಲಸವನ್ನು ಚಂದ್ರಶೇಖರ ಬಾಳೆ ಮತ್ತು ಪುರುಷೋತ್ತಮ ಕಲಾಬಂಡಿ ಮಾಡಿದ್ದರು. ಅವರ ಹೋರಾಟದ ಹಾದಿ ಇಂದಿನ ಯುವ ಪೀಳಿಗೆಗೆ ಮಾರ್ಗದರ್ಶಕವಾಗಿದೆ ಎಂದು ಹೇಳಿದರು.
ಬೆಂಗಳೂರಿನ ಎಐಪಿಎಸ್‌ಎನ್ ಅಧ್ಯಕ್ಷ ಪ್ರೊ.ಸವ್ಯಸಾಚಿ ಚಟರ್ಜಿ ಕೃತಿ ಲೋಕಾರ್ಪಣೆ ಮಾಡಿ ಮಾತನಾಡಿ, ಕಲಾಲಬಂಡಿ ಕಲಿಕೆ ಮತ್ತು ಪ್ರಯೋಗಗಳನ್ನು ಮಾಡುವುದರಲ್ಲಿ ಸದಾ ಮುಂದಿರುತ್ತಿದ್ದರು. ಅವರಲ್ಲಿ ಸದಾ ಉತ್ಸಾಹ ಕಂಡು ಬರುತ್ತಿದ್ದು, ಕೊನೆ ದಿನಗಳಲ್ಲಿ ಜನರಲ್ಲಿ ವೈಜ್ಞಾನಿಕ ಮನೋಭಾವ ಮೂಡಿಸಲು ಹೆಚ್ಚಿನ ಪ್ರಯತ್ನ ನಡೆಸಿದ್ದರು ಎಂದರು.
ಕಲಬುರಗಿಯ ಸಾಹಿತಿ ಕೆ.ನೀಲಾ ಮಾತನಾಡಿ, ಇಂದಿನ ಪರಿಸ್ಥಿತಿಯಲ್ಲಿ ಒಂದರ ಜತೆಯಲ್ಲಿ ಮತ್ತೊಂದು ಹೋರಾಟ ಕಟ್ಟಿದಾಗ ಮಾತ್ರ ಬದಲಾವಣೆ ತರಲು ಸಾಧ್ಯವಾಗಲಿದೆ. ರಾಯಚೂರಿನ ನೆಲ ಸಂಸ್ಕೃತಿಯನ್ನು ಕಟ್ಟಿಕೊಡುವ ನೆಲವಾಗಿದ್ದು, 80 ರಿಂದ 95ರ ದಶಕ ಜನರ ಬದುಕು ಬದಲು ಮಾಡಿದ ಸಂಗಾತಿಗಳ ಅವಯಾಗಿದೆ.
ಮರೆಯದ ಕೆಂಪು ನಕ್ಷತ್ರ ಕೇವಲ ಕಲಾಲಬಂಡಿಯವರ ಹೋರಾಟವನ್ನು ನೆನಪಿಸುವ ಕೃತಿಯಾಗಿಲ್ಲ. ಆಕರ ಗ್ರಂಥವಾಗಿದ್ದು, ಯುವ ಹೋರಾಟಗಾರರಿಗೆ ಕೈಪಿಡಿಯಾಗಲಿದೆ. ಹೋರಾಟದಲ್ಲಿ ವೈಜ್ಞಾನಿಕ ಚಿಂತನೆಗಳು ಬಹುಮುಖ್ಯವಾಗಿದ್ದು, ಆ ಅಂಶಗಳು ಕಲಾಲಬಂಡಿಯವರಲ್ಲಿದ್ದವು ಎಂದು ಹೇಳಿದರು.
ಕೃಷಿ ಭಾರತ ಅಧ್ಯಕ್ಷ ಚಂದ್ರಶೇಖರ ಬಾಳೆ ಅಧ್ಯಕ್ಷತೆ ವಹಿಸಿದ್ದರು. ಹೋರಾಟಗಾರರಾದ ರಾಘವೇಂದ್ರ ಕುಷ್ಟಗಿ, ಪ್ರಭಾ ಬೆಳವಂಗಲ, ಡಾ.ಮೀನಾಕ್ಷಿ ಬಾಳಿ, ರಮೇಶ ಪೂಜಾರ, ನವೋದಯ ಶಿಕ್ಷಣ ಸಂಸ್ಥೆ ರಿಜಿಸ್ಟ್ರಾರ್ ಡಾ.ಟಿ.ಶ್ರೀನಿವಾಸ, ಬಳಗದ ಪದಾಕಾರಿಗಳಾದ ಶ್ಯಾಮಲ ಕಲಾಲಬಂಡಿ, ಡಾ.ಬಸವರಾಜ ಕಳಸ, ವೀರ ಹನುಮಾನ, ಕೆ.ಸತ್ಯನಾರಾಯಣ, ಬಿ.ಬಸವರಾಜ ಉಪಸ್ಥಿತರಿದ್ದರು.