ಜಿಲ್ಲೆ

ತೆಂಕನಿಡಿಯೂರು ಗ್ರಾಪಂ ಬಿಜೆಪಿ-ಕಾಂಗ್ರೆಸ್​ ಸದಸ್ಯರ ಜಟಾಪಟಿ

ಉಡುಪಿ: ತೆಂಕನಿಡಿಯೂರು ಗ್ರಾಮದಲ್ಲಿ ತ್ಯಾಜ್ಯವನ್ನು ಹೊಂಡ ತೋಡಿ ಹೂತಿರುವ ವಿಚಾರ ಕಾಂಗ್ರೆಸ್​ ಮತ್ತು ಬಿಜೆಪಿ ಸದಸ್ಯರ ನಡುವೆ ಜಟಾಪಟಿ ಕಾರಣವಾಗಿದ್ದು, ಸಾಮಾನ್ಯ ಸಭೆಯಲ್ಲಿ ಬಿಜೆಪಿ ಸದಸ್ಯರು ಕಲಾಪಕ್ಕೆ ಅಡ್ಡಿಪಡಿಸಿ, ಹಾಜರಾತಿ ನೋಂದಣಿಗೆ ಸಹಿ ಹಾಕಲು ನಿರಾಕರಿಸಿ ಪ್ರತಿಭಟನೆ ನಡೆಸಿದ್ದಾರೆ. ಈ ಮಧ್ಯೆ ಗ್ರಾಪಂ ಮುಂಭಾಗ ಪಂಚಾಯಿತಿ ಅಧ್ಯಕ್ಷೆ ಶೋಭಾ ನಾಯ್ಕ್​ ಸುಮಾರು 50 ಲೋಡ್​ ತ್ಯಾಜ್ಯ ಹೂತು ಹಾಕಿರುವ ಹಿನ್ನೆಲೆಯಲ್ಲಿ ಬಾವಿ ನೀರು ಕಲುಷಿತಗೊಳ್ಳುತ್ತಿದೆ. ಅದನ್ನು ಕೂಡಲೇ ವಿಲೇವಾರಿ ಮಾಡುವಂತೆ ಗ್ರಾಮಸ್ಥರು ಪ್ರತಿಭಟನೆ ನಡೆಸಿದ್ದಾರೆ.

ಪ್ರತಿಭಟನಾಕಾರರನ್ನು ಬೆಂಬಲಿಸಿದ ಕೆಲವು ಪಂಚಾಯಿತಿ ಸದಸ್ಯರು ಹಾಜರಾತಿ ನೋಂದಣಿಗೆ ಸಹಿ ಹಾಕಲು ನಿರಾಕರಿಸಿದರು. ಪ್ರತಿಭಟನಾಕಾರರು ಮತ್ತು ಪಂಚಾಯಿತಿ ಆಡಳಿತ ಸದಸ್ಯರ ನಡುವೆ ಘರ್ಷಣೆ ಉಲ್ಬಣಗೊಂಡಿತು. ಸಭಾಂಗಣದಿಂದ ಬಿಜೆಪಿ ಸದಸ್ಯರನ್ನು ಕಾಂಗ್ರೆಸ್​ ಸದಸ್ಯರು ಹೊರಗೆಳೆದಿದ್ದರಿಂದ ಪರಿಸ್ಥಿತಿ ಮತ್ತಷ್ಟು ಬಿಗಡಾಯಿಸಿತು. ತಾಪಂ ಇಒ ವಿಜಯಾ ಸಭೆಗೆ ಆಗಮಿಸಿದ ನಂತರ ಸಭೆ ಮುಂದುವರಿಯಿತು. ಹಾಜರಾತಿ ದಾಖಲಾತಿಗೆ ಸಹಿ ಹಾಕದ ಎಲ್ಲ ಸದಸ್ಯರನ್ನು ಸಭಾ ಭವನದಿಂದ ಹೊರಗೆ ಕಳುಹಿಸಲಾಯಿತು. ಆ ವೇಳೆ ಮಾತಿಗೆ ಮಾತು ಬೆಳೆದು ಇಒ, ಪೊಲೀಸರ ಎದುರೇ ಪರಸ್ಪರ ಎಳೆದಾಡಿಕೊಂಡರು. ಈ ಸಂದರ್ಭದಲ್ಲಿ ಗ್ರಾ.ಪಂ. ಮಹಿಳಾ ಸದಸ್ಯೆಯೊಬ್ಬರಿಗೆ ಗಾಯವಾಯಿತು. ಸುಮಾರು ಅರ್ಧ ಗಂಟೆ ಬಿಗುವಿನ ವಾತಾವರಣ ಉಂಟಾಗಿತ್ತು. ಪೊಲೀಸರು ಮಧ್ಯೆ ಪ್ರವೇಶಿಸಿ ಪರಿಸ್ಥಿತಿ ನಿಯಂತ್ರಿಸಿದರು. ಬಿಜೆಪಿ ಸದಸ್ಯರು ಸಭೆಯಿಂದ ಹೊರನಡೆದು ಕಾಂಗ್ರೆಸ್​ ಸದಸ್ಯರ ವಿರುದ್ಧ ಠಾಣೆಗೆ ದೂರು ನೀಡಲು ನಿರ್ಧರಿಸಿದರು.

ಪ್ರತಿಭಟನೆ ವೇಳೆ ಸ್ಥಳಕ್ಕೆ ಆಗಮಿಸಿದ ಯಶಪಾಲ್​ ಸುವರ್ಣ, ತ್ಯಾಜ್ಯ ವಿಲೇವಾರಿಗೆ ವ್ಯವಸ್ಥೆ ಮಾಡುವಂತೆ ಐದು ದಿನಗಳ ಹಿಂದೆ ನಗರಸಭೆಯ ಪಂಚಾಯಿತಿ ಅಧಿಕಾರಿಗಳಿಗೆ ತಿಳಿಸಿದ್ದೆ. ತ್ಯಾಜ್ಯವನ್ನು ಭೂಮಿಯೊಳಗೆ ಸುರಿಯುವುದು ಸ್ವೀಕಾರಾರ್ಹವಲ್ಲ. ತ್ಯಾಜ್ಯ ಸ್ವಚ್ಛಗೊಳಿಸಲು ಶಾಸಕರ ನಿಧಿ ನೀಡುತ್ತೇನೆ. ಪ್ರಸ್ತುತ ಸ್ಥಳದಿಂದ ತ್ಯಾಜ್ಯ ವಿಲೇವಾರಿ ಮಾಡುವ ಮೂಲಕ ನಿವಾಸಿಗಳ ಸಮಸ್ಯೆಗಳನ್ನು ಪರಿಹರಿಸಬೇಕು ಎಂದು ಪಿಡಿಒ ಅವರಿಗೆ ಸೂಚಿಸಿದರು.