ಮಂಗಳೂರು: ಭಾರತ ಸರ್ಕಾರದ ವಸತಿ ಮತ್ತು ನಗರ ವ್ಯವಹಾರಗಳ ಸಚಿವಾಲಯದ ಅಧೀನದ ಪ್ರಧಾನ ಮಂತ್ರಿ ಆವಾಜ್ ಯೋಜನಾ ಇಲಾಖೆ ಏರ್ಪಡಿಸಿದ್ದ ಖುಷಿಯೋಂಕಾ ಆಶಿಯಾನ ಕಿರು ಚಿತ್ರ ಸ್ಪರ್ಧೆಯಲ್ಲಿ ತೇಜಸ್ವಿ ಕಡಪಳ ನಿರ್ಮಿಸಿ, ನಿರ್ದೇಶನ ಮಾಡಿದ್ದ ಚಿತ್ರಕ್ಕೆ ರಾಷ್ಟ್ರ ಮಟ್ಟದಲ್ಲಿ ದ್ವಿತೀಯ ಪ್ರಶಸ್ತಿ ಲಭಿಸಿದೆ.
ಪ್ರಧಾನಮಂತ್ರಿ ಆವಾಜ್ ಯೋಜನೆಯಲ್ಲಿ ನಗರ ಪಂಚಾಯತಿ ವ್ಯಾಪ್ತಿಯ ನಿವಾಸಿಗಳಿಗೆ ಮನೆ ನಿರ್ಮಿಸಲು ಇಲಾಖೆ ಧನ ಸಹಾಯ ನೀಡುತ್ತದೆ.ಈ ಯೋಜನೆಯ ಫಲಾನುಭವಿಗಳ ಜೀವನ ಗಾಥೆಯನ್ನು ಆಧರಿಸಿ 3 ನಿಮಿಷಗಳ ಕಿರುಚಿತ್ರ ನಿರ್ಮಿಸಲು ಕಳೆದ ವರ್ಷ ಸೆಪ್ಟೆಂಬರ್ ನಲ್ಲಿ ರಾಷ್ಟ್ರ ಮಟ್ಟದ ಸ್ಪರ್ಧೆ ಏರ್ಪಡಿಸಲಾಗಿತ್ತು. ಈ ಯೋಜನೆಯ ಮೂಲಕ ಫಲಾನುಭವಿಗಳ ಜೀವನದಲ್ಲಿ ಆದ ಬದಲಾವಣೆಗಳು ಮತ್ತು ಮಹಿಳಾ ಸಬಲೀಕರಣವನ್ನು ಚಿತ್ರ ಪ್ರತಿಬಿಂಬಿಸಬೇಕಿತ್ತು.ಸ್ಪರ್ಧಾಳುಗಳಿಗೆ ತಮ್ಮ ಸಮೀಪದ ನಗರ ವ್ಯಾಪ್ತಿಯ ಫಲಾನುಭವಿಗಳ ಜೀವನದ ಬಗ್ಗೆ ಕಿರುಚಿತ್ರ ನಿರ್ಮಿಸಲು ಸೂಚಿಸಲಾಗಿತ್ತು.
ಸುಳ್ಯ ನಗರ ಪಂಚಾಯತಿ ವ್ಯಾಪ್ತಿಯಲ್ಲಿ ಈ ಯೋಜನೆಯ ಫಲಾನುಭವಿಗಳಲ್ಲೊಬ್ಬರಾದ ಕೇರ್ಪಳದ ವಿಮಲಾ ನಾರಾಯಣ ಅವರ ಜೀವನವನ್ನು ಆಧರಿಸಿ ತೇಜಸ್ವಿಯವರು ಈ ಕಿರುಚಿತ್ರವನ್ನು ನಿರ್ಮಿಸಿದ್ದರು. ವಿಮಲಾ ನಾರಾಯಣ ದಂಪತಿ ಮತ್ತು ಅವರ ಮಕ್ಕಳಾದ ಸಾನ್ವಿ ಹಾಗೂ ತನ್ವಿ ಕಿರುಚಿತ್ರದಲ್ಲಿ ಅಭಿನಯಿಸಿದ್ದರು. ರಾಷ್ಟ್ರಮಟ್ಟದ ಸ್ಪರ್ಧೆಯಲ್ಲಿ ಸುಮಾರು 2,500 ಸ್ಪರ್ಧಾಳುಗಳು ಭಾಗವಹಿಸಿದ್ದರು.ಈ ಪೈಕಿ 573 ಚಿತ್ರಗಳು ದ್ವಿತೀಯ ಹಂತಕ್ಕೆ ಪ್ರವೇಶ ಪಡೆದಿದ್ದವು.ಅಂತಿಮ ಹಂತಕ್ಕೆ ಪ್ರವೇಶ ಪಡೆದ 195 ಕಿರುಚಿತ್ರಗಳಲ್ಲಿ ತೇಜಸ್ವಿ ಕಡಪಳ ನಿರ್ದೇಶನದ ಕಿರುಚಿತ್ರ ದ್ವಿತೀಯ ಪ್ರಶಸ್ತಿ ಗಳಿಸಿದೆ. ಕಿರಣ್ ಮಡಪ್ಪಾಡಿ ಛಾಯಾಗ್ರಾಹಕರಾಗಿ ಸಹಕರಿಸಿದ್ದರು. ಪ್ರಶಸ್ತಿಯು ಪ್ರಶಸ್ತಿ ಪತ್ರ ಮತ್ತು ಸ್ಮರಣಿಕೆ ಹಾಗೂ 15,000 ನಗದು ಬಹುಮಾನವನ್ನು ಒಳಗೊಂಡಿದೆ.