ವಿಜಯವಾಣಿ ಸುದ್ದಿಜಾಲ ಬೆಂಗಳೂರು ಗ್ರಾಮಾಂತರ
ಜಿಲ್ಲೆಯ ದೇಗುಲಗಳಲ್ಲಿನ ಕಾಣಿಕೆ ಹುಂಡಿಗಳಿಗೆ ಉಳಿಗಾಲವಿಲ್ಲದಂತಾಗಿದೆ, ಗ್ರಾಮಗಳನ್ನು ಕಾಯುವ ಗ್ರಾಮದೇವತೆಗಳ ದೇವಸ್ಥಾನಕ್ಕೆ ಭದ್ರತೆ ಇಲ್ಲದಂತಾಗಿದೆ.
ಹೌದು! ಕಳೆದೆರಡು ವರ್ಷದಿಂದ ಜಿಲ್ಲೆಯ ನಾಲ್ಕೂ ತಾಲೂಕುಗಳ ವಿವಿಧ ದೇಗುಲಗಳಲ್ಲಿ ಸರಣಿಯಾಗಿ ಕಾಣಿಕೆ ಹುಂಡಿ ಕಳವು ಪ್ರಕರಣ ನಡೆಯುತ್ತಿವೆ. ದೇಗುಲದ ಬಾಗಿಲು ಮೀಟಿ ಒಳನುಗ್ಗುವ ಕಳ್ಳರು ಕಾಣಿಕೆ ಹುಂಡಿಯಲ್ಲಿನ ಹಣ ದೋಚುತ್ತಿದ್ದಾರೆ, ದೇವರ ಮೂರ್ತಿ ಮೇಲಿನ ಆಭರಣಗಳನ್ನು ದರೋಡೆ ಮಾಡುತ್ತಿದ್ದಾರೆ. ಕಾಣಿಕೆ ಹುಂಡಿಯೊಂದಿಗೆ ಪರಾರಿಯಾದ ಪ್ರಕರಣಗಳು ಸಾಕಷ್ಟಿವೆ ಆದರೆ ಇದುವರೆಗೆ ನಡೆದ ಅಷ್ಟೂ ಕಳ್ಳತನ ಪ್ರಕರಣಗಳಲ್ಲಿ ಒಬ್ಬ ಕಳ್ಳನೂ ಸೆರೆ ಸಿಕ್ಕಿಲ್ಲ. ಕಾಣಿಕೆ ಹುಂಡಿ ಕಳ್ಳರ ಸೆರೆಗೆಂದೇ ರಚನೆಯಾಗಿದ್ದ ಜಿಲ್ಲಾ ಪೊಲೀಸರ ವಿಶೇಷ ತಂಡ ಕಳ್ಳರ ಜಾಡು ಹಿಡಿಯುವಲ್ಲಿ ಸೋತು ಸೊರಗಿದೆ.
ಮತ್ತೆ ಆಕ್ಟೀವ್: ಕಾಣಿಕೆ ಹುಂಡಿಗಳ ಸರಣಿ ಕಳವು ಪ್ರಕರಣ ಎಚ್ಚುತ್ತಿದ್ದಂತೆ ಎಚ್ಚೆತ್ತುಕೊಂಡ ಜಿಲ್ಲಾ ಪೊಲೀಸರು ಕಳ್ಳರ ಸೆರೆಗೆ ವಿಶೇಷ ತಂಡ ರಚಿಸಿ ಕಾರ್ಯಾಚರಣೆಗಿಳಿದಿದ್ದರು. ಕಾರ್ಯಾಚರಣೆ ವೇಳೆ, ಜೇಬುಕಳ್ಳರು, ದ್ವಿಚಕ್ರವಾಹನ ಕಳ್ಳರು ಮತ್ತಿತರ ಸಣ್ಣಪುಟ್ಟ ಕಳ್ಳತನ ಪ್ರಕರಣಗಳ ಆರೋಪಿಗಳು ಸಿಕ್ಕಿಬಿದ್ದರೂ ಇದುವರೆಗೆ ಕಾಣಿಕೆ ಹುಂಡಿ ಕಳವು ಪ್ರಕರಣದಲ್ಲಿ ಯಾರೊಬ್ಬರೂ ಸಿಕ್ಕಿಬಿದ್ದಿಲ್ಲ. ಆದರೂ ಪೊಲೀಸರ ಕಾರ್ಯಾಚರಣೆಯಿಂದಾಗಿ ಕೆಲವು ತಿಂಗಳಿಂದ ಕಾಣಿಕೆ ಹುಂಡಿ ಕಳವು ಪ್ರಕರಣಗಳು ಕಂಡುಬಂದಿರಲಿಲ್ಲ. ಕೆಲ ತಿಂಗಳಿಂದ ಗಪ್‌ಚುಕ್ ಆಗಿದ್ದ ಕಳ್ಳರು ತ್ಯಾಮಗೊಂಡ್ಲು ಹೋಬಳಿ ಬಿದಲೂರಿನ ಗಂಗಮ್ಮ ದೇಗುಲದಲ್ಲಿ ಕಾಣಿಕೆ ಹುಂಡಿಗೆ ಕನ್ನ ಹಾಕುವ ಮೂಲಕ ಮತ್ತೆ ಆಕ್ಟೀವ್ ಆಗಿದ್ದಾರೆ. ದೇಗುಲದ ಮುಂಭಾಗಿಲು ಮೀಟಿ ಒಳನುಗ್ಗಿರುವ ಕಳ್ಳರು ಕಾಣಿಕೆ ಹುಂಡಿಯಲ್ಲಿದ್ದ ಹಣ ದೋಚಿದ್ದಾರೆ ಜತೆಗೆ ದೇವರ ಮೂರ್ತಿ ಮೇಲಿದ್ದ ಆಭರಣಗಳನ್ನು ದರೋಡೆ ಮಾಡಿ ಪರಾರಿಯಾಗಿದ್ದಾರೆ.
ಕಳ್ಳರ ಜಾಡು ಹಿಡಿಯಲು ವಿಲ: ಬೆಂಗಳೂರು ಗ್ರಾಮಾಂತರ, ಚಿಕ್ಕಬಳ್ಳಾಪುರ, ಕೋಲಾರ ಹಾಗೂ ರಾಮನಗರ ಜಿಲ್ಲೆಗಳಲ್ಲಿ ಕಳೆದ ನಾಲ್ಕೈದು ತಿಂಗಳಿಂದ ನಡೆಯುತ್ತಿರುವ ದೇಗುಲಗಳಲ್ಲಿನ ಕಳವು ಪ್ರಕರಣದ ಬಗ್ಗೆ ಸಾರ್ವಜನಿಕ ವಲಯದಲ್ಲಿಂದ ತೀವ್ರ ದೂರು ವ್ಯಕ್ತವಾದ ಹಿನ್ನೆಲೆಯಲ್ಲಿ ಎಚ್ಚೆತ್ತ ಪೊಲೀಸ್ ಇಲಾಖೆಯ ಐಜಿಪಿ ಐದು ಜಿಲ್ಲೆಗಳ ಪೊಲೀಸ್ ವರಿಷ್ಟಾಧಿಕಾರಿಗಳ ಸಭೆ ನಡೆಸಿ ಶೀಘ್ರ ಕಳ್ಳರ ಸೆರೆಗೆ ಕ್ರಮ ಕೈಗೊಳ್ಳುವಂತೆ ಸೂಚನೆ ನೀಡಿದ್ದರು. ಅದರಂತೆ ಆಯಾ ಜಿಲ್ಲಾ ವ್ಯಾಪ್ತಿಯ ಎಸ್‌ಪಿ ನೇತೃತ್ವದಲ್ಲಿ ವಿಶೇಷ ಪೊಲೀಸರ ತಂಡ ರಚಿಸಿ ಕಳ್ಳರ ಸೆರೆಗೆ ಕಾರ್ಯಾಚರಣೆ ರೂಪಿಸಲಾಗಿತ್ತು. ಆದರೆ ಇದುವರೆಗಿನ ಯಾವುದೇ ಕಾಣಿಕೆ ಹುಂಡಿ ಕಳವು ಪ್ರಕರಣದಲ್ಲಿ ಒಂದೂ ಪ್ರಕರಣ ಬೇಧಿಸಲು ಸಾಧ್ಯವಾಗಿಲ್ಲ.
ದೊಡ್ಡಬಳ್ಳಾಪುರದಲ್ಲಿ ಸರಣಿ ಕಳವು: ದೊಡ್ಡಬಳ್ಳಾಪುರ ತಾಲೂಕು ದೊಡ್ಡಬೆಳವಂಗಲ ಹೋಬಳಿಯ ಚಿಕ್ಕಹೆಜ್ಜಾಜಿಯ ಮಾರಮ್ಮ, ಕೆಂಪಾಜಮ್ಮ ಹಾಗೂ ಬಸವಣ್ಣ ದೇಗುಲಗಳಲ್ಲಿ ಒಂದೇದಿನ ಸರಣಿ ಕಳವು ಪ್ರಕರಣ ನಡೆದಿತ್ತು. ಸರಣಿ ಕಳವು ಪ್ರಕರಣ ಸಂಬಂಧ ದೊಡ್ಡಬಳ್ಳಾಪುರ ಪೊಲೀಸರು ತನಿಖೆ ನಡೆಸುತ್ತಿರುವ ನಡುವೆಯೇ ಅದೇ ಹೋಬಳಿಯ ನೆರೆಯ ಗ್ರಾಮದಲ್ಲಿ ಮತ್ತೊಂದು ಪ್ರಕರಣ ನಡೆದಿರುವುದು ಪೊಲೀಸರ ನಿದ್ರೆಗೆಡಿಸಿತ್ತು. ಇತ್ತ ಕಡೆ ಕಳ್ಳರ ಕಾಟಕ್ಕೆ ಬೇಸತ್ತ ಗ್ರಾಮಸ್ಥರು ದೇಗುಲಗಳ ರಕ್ಷಣೆ ಕೋರಿ ಹಿರಿಯ ಪೊಲೀಸ್ ಅಧಿಕಾರಿಗಳ ಕಚೇರಿಗಳ ಮೆಟ್ಟಿಲೇರಿದ್ದಾರೆ.
ಹಲವು ಸಂಕಷ್ಟಗಳನ್ನು ದೂರ ಮಾಡುವಂತೆ ಪ್ರಾರ್ಥನೆ ಮಾಡಿ ಹುಂಡಿಗಳಲ್ಲಿ ಭಕ್ತರು ಕಾಣಿಕೆ ಸಮರ್ಪಿಸಿರುತ್ತಾರೆ, ಇಂಥ ಹುಂಡಿಗಳನ್ನು ಕಳವು ಮಾಡುವುದರಿಂದ ಭಕ್ತರ ಧಾರ್ಮಿಕ ಭಾವನೆಗೆ ಧಕ್ಕೆಯಾಗುತ್ತದೆ, ಭಕ್ತರು ತುಂಬಾ ಬೇಸರ ಮಾಡಿಕೊಳ್ಳುತ್ತಾರೆ. ಈ ಹಿನ್ನೆಲೆಯಲ್ಲಿ ಕಾಣಿಕೆ ಹುಂಡಿ ಕಳವು ಪ್ರಕರಣಗಳನ್ನು ಪೊಲೀಸರು ಗಂಭೀರವಾಗಿ ಪರಿಗಣಿಸಬೇಕು.
ಅಭಯ್, ತ್ಯಾಮಗೊಂಡ್ಲು ನಿವಾಸಿ
ದೇಗುಲಗಳಲ್ಲಿ ಕಾಣಿಕೆ ಹುಂಡಿ ಕಳವು ಪ್ರಕರಣಗಳನ್ನು ಗಮನಿಸಿದರೆ ಮೇಲ್ನೋಟಕ್ಕೆ ಇದು ಹೊರರಾಜ್ಯದ ಕಳ್ಳರ ತಂಡ ಎನಿಸುತ್ತದೆ. ಸ್ಥಳೀಯರು ಇಂಥ ಕೃತ್ಯ ಎಸಗಲು ಸಾಮಾನ್ಯವಾಗಿ ಹೆದರುತ್ತಾರೆ. ಕೆಲವು ಪ್ರಕರಣಗಳಲ್ಲಿ ಭಾರಿ ತೂಕವಿರುವ ಹುಂಡಿಗಳನ್ನೇ ಹೊತ್ತೊಯ್ದು ಕಳವು ಮಾಡಲಾಗಿದೆ. ಇದರಿಂದ ಈ ಪ್ರಕರಣಗಲ್ಲಿ ಗ್ಯಾಂಗ್ ಸಕ್ರಿಯವಾಗಿದೆ ಎನಿಸುತ್ತದೆ. ಎಲ್ಲ ಆಯಾಮಗಳಲ್ಲಿ ತನಿಖೆ ನಡೆಸಿ ಕಳ್ಳರಿಗೆ ಬಲೆ ಬೀಸಬೇಕಿದೆ.
ಉಮಾಕಾಂತ್, ನೆಲಮಂಗಲ ನಿವಾಸಿ