ಗುಂಡ್ಲುಪೇಟೆ: ತಾಲೂಕಿನ ಬಾಚಹಳ್ಳಿ ಗ್ರಾಮದಲ್ಲಿ ಒಂದೇ ರಾತ್ರಿ ಸುಮಾರು 30ಕ್ಕೂ ಹೆಚ್ಚಿನ ಜಮೀನುಗಳಲ್ಲಿ ಕೇಬಲ್ ಕಳ್ಳತನ ಮಾಡಿರುವ ಘಟನೆ ನಡೆದಿದೆ.
ಮಂಗಳವಾರ ರಾತ್ರಿ ಕೈಚಳಕ ತೋರಿಸಿರುವ ಕಳ್ಳರು ಗ್ರಾಮದ ಮಾಲಾಪುರ ರಸ್ತೆಯಲ್ಲಿರುವ ಸುಮಾರು 30ಕ್ಕೂ ಹೆಚ್ಚಿನ ರೈತರ ಜಮೀನುಗಳ ಪಂಪ್‌ಸೆಟ್‌ಗಳಲ್ಲಿ ಅಳವಡಿಸಿದ್ದ ಕೇಬಲ್ ಕಳ್ಳತನ ಮಾಡಿದ್ದಾರೆ. ಬುಧವಾರ ಬೆಳಗ್ಗೆ ಜಮೀನುಗಳಿಗೆ ಹೋದ ರೈತರು ಮೋಟಾರುಗಳನ್ನು ಸ್ಟಾರ್ಟ್ ಮಾಡಲು ಹೋದಾಗ ಕೇಬಲ್ ಕಳ್ಳತನವಾಗಿರುವುದು ಗೊತ್ತಾಗಿದೆ.
ಈ ಬಗ್ಗೆ ಪಟ್ಟಣದ ಪೊಲೀಸ್ ಠಾಣೆಗೆ ಮಾಹಿತಿ ನೀಡಿದರು. ಕೂಡಲೇ ಗ್ರಾಮಕ್ಕೆ ತೆರಳಿದ ಪೊಲೀಸರು ಜಮೀನುಗಳಲ್ಲಿ ಕಳ್ಳತನ ನಡೆದಿರುವ ಸ್ಥಳದಲ್ಲಿ ಪರಿಶೀಲಿಸಿದ್ದಾರೆ. ರೈತರಿಂದ ದೂರು ಸ್ವೀಕರಿಸಿದ ಪೊಲೀಸರು ಕಳ್ಳರ ಪತ್ತೆಗೆ ಕ್ರಮಕೈಗೊಳ್ಳುವುದಾಗಿ ತಿಳಿಸಿದ್ದಾರೆ.
ಕೇಬಲ್ ಕದಿಯುತ್ತಿದ್ದ ಕಳ್ಳರು ಕೆಲವು ದಿನಗಳಿಂದ ತಾಲೂಕಿನಲ್ಲಿ ಸಕ್ರಿಯರಾಗಿದ್ದು, ರೈತರ ಜಮೀನುಗಳನ್ನು ಗುರಿಯಾಗಿಸಿ ಕಳ್ಳತನ ಮಾಡುತ್ತಿದ್ದಾರೆ. ಆರು ತಿಂಗಳಿನಿಂದ ಬೇಗೂರು ಹಾಗೂ ಪಟ್ಟಣದ ಸುತ್ತಮುತ್ತಲಿನ ಗ್ರಾಮಗಳನ್ನು ಗುರಿಯಾಗಿಸಿ ಕೃತ್ಯ ನಡೆಸುತ್ತಿದ್ದ ಕಳ್ಳರು ಕಳೆದ ತಿಂಗಳು ತಾಲೂಕಿನ ಬೆರಟಹಳ್ಳಿ ಸುತ್ತಮುತ್ತಲಿನ ಜಮೀನುಗಳಲ್ಲಿ ಕೇಬಲ್ ಕಳ್ಳತನ ಮಾಡಿದ್ದರು. ಈ ಭಾಗದಲ್ಲಿ ಪೊಲೀಸರು ಗಮನಹರಿಸುತ್ತಿದ್ದಂತೆ, ಇದೀಗ ಕಾಡಂಚಿನ ಗ್ರಾಮಗಳ ಜಮೀನುಗಳಲ್ಲಿ ಕೈಚಳಕ ತೋರಿಸುತ್ತಿದ್ದಾರೆ.