ಜಿಲ್ಲೆ

ಚಾಕು ತೋರಿಸಿ ಚಿನ್ನಾಭರಣ ದೋಚಿದ ಕಳ್ಳರು: ಹಳೇಬೂದನೂರು ಗ್ರಾಮದ ಸಮೀಪ ಘಟನೆ

ಮಂಡ್ಯ: ತಾಲೂಕಿನ ಹಳೇಬೂದನೂರು ಗ್ರಾಮದ ಬಳಿ ಭಾನುವಾರ ಮುಂಜಾನೆ ರಸ್ತೆ ಬದಿ ಕಾರು ನಿಲ್ಲಿಸಿ ನಿದ್ರೆಗೆ ಜಾರಿದ್ದವರಿಗೆ ಚಾಕು ತೋರಿಸಿ ಅಪರಿಚಿತ ದುಷ್ಕರ್ಮಿಗಳು ಲಕ್ಷಾಂತರ ರೂ. ಮೌಲ್ಯದ ಚಿನ್ನಾಭರಣ, ನಗದು ಹಣ ದೋಚಿದ್ದಾರೆ.
ತುಮಕೂರಿನ ರೋಹಿತ್ ಮತ್ತು ಆತನ ಸಹೋದರ, ಹಾಗೂ ಕುಟುಂಬದವರು ಚಿನ್ನಾಭರಣ, ಹಣ ಮತ್ತು ಮೊಬೈಲ್ ಕಳೆದುಕೊಂಡಿದ್ದಾರೆ. ಒಟ್ಟು ಏಳು ಜನರು ಮಾರುತಿ ಶಿಫ್ಟ್ ಡಿಸೈರ್ ಕಾರಿನಲ್ಲಿ  ಮೈಸೂರಿಗೆ ತೆರಳಿದ್ದರು. ದಸರಾ ಉತ್ಸವ ನೋಡಿಕೊಂಡು ರಾತ್ರಿ ಮೈಸೂರಿನಲ್ಲೇ ಊಟ ಮಾಡಿ ತುಮಕೂರಿನತ್ತ ಪ್ರಯಾಣ ಬೆಳೆಸಿದ್ದರು.
ಕಾರು ಚಾಲನೆ ಮಾಡುತ್ತಿದ್ದ ರೋಹಿತ್‌ಗೆ ಆಯಾಸವಾಗಿ ನಿದ್ರೆ ಬಂದಿತ್ತೆನ್ನಲಾಗಿದೆ. ಕಾರಿನಲ್ಲಿ ಪ್ರಯಾಣಿಸುತ್ತಿದ್ದ ಎಲ್ಲರೂ ನಿದ್ರೆಗೆ ಜಾರಿದ್ದರು. ಈ ಹಿನ್ನೆಲೆಯಲ್ಲಿ  ತಾಲೂಕಿನ ಹಳೇ ಬೂದನೂರು ಗ್ರಾಮದಿಂದ ಸ್ವಲ್ಪ ಮುಂದೆ ಬೆಂಗಳೂರು-ಮೈಸೂರು ಎಕ್ಸ್ ಪ್ರೆಸ್ ಹೆದ್ದಾರಿಯಲ್ಲಿ  ಕಾರನ್ನು ರಸ್ತೆ ಬದಿಗೆ ನಿಲ್ಲಿಸಿ ರೋಹಿತ್ ಸಹ ನಿದ್ರೆಗೆ ಜಾರಿದ್ದರು. ಹೆದ್ದಾರಿಯ ನಿರ್ಜನ ಪ್ರದೇಶದಲ್ಲಿ ರಾತ್ರಿ ವೇಳೆ ಕಾರು ನಿಲ್ಲಿಸಿರುವುದನ್ನು ಕಂಡ ಮೂವರು ದುಷ್ಕರ್ಮಿಗಳು ಚಾಕು ತೋರಿಸಿ ಬೆದರಿಸಿ, ಅವರ ಬಳಿ ಇದ್ದ ೧೬ ಗ್ರಾಂ ತೂಕದ ಚಿನ್ನದ ಸರ, ಮೊಬೈಲ್ ಮತ್ತು ಅವರ ಬಳಿ ನಗದು ದೋಚಿ ಪರಾರಿಯಾಗಿದ್ದಾರೆ. ಸ್ಥಳಕ್ಕೆ ಮಂಡ್ಯ ಗ್ರಾಮಾಂತರ ಠಾಣೆ ಪೊಲೀಸರು ಆಗಮಿಸಿ ಪರಿಶೀಲನೆ ನಡೆಸಿದರು. ಘಟನೆ ಸಂಬಂಧ ಪ್ರಕರಣ ದಾಖಲಿಸಿಕೊಂಡಿದ್ದು, ಮುಂದಿನ ಕ್ರಮ ಕೈಗೊಂಡಿದ್ದಾರೆ.