ಕೊಳ್ಳೇಗಾಲ: ಪಟ್ಟಣದ ಆದರ್ಶ ನಗರದಲ್ಲಿರುವ ಮಾಜಿ ಸಚಿವ ಎನ್.ಮಹೇಶ್ ಅವರ ಮನೆಯಲ್ಲಿ ಶುಕ್ರವಾರ ರಾತ್ರಿ ಕಳ್ಳತನ ನಡೆದಿರುವ ಸಂಬಂಧ ಕೊಳ್ಳೇಗಾಲ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಎನ್.ಮಹೇಶ್ ಅವರ ಮನೆ ಕೆಲಸ ನಿರ್ವಹಿಸುವ ಕಾಳಿ ಪ್ರಸಾದ್ ಪಟ್ಟಣ ಪೊಲೀಸ್ ಠಾಣೆಗೆ ದೂರು ನೀಡಿದ್ದಾರೆ. ಆ.23 ರಂದು ಸಂಜೆ 4.30ರ ಸಮಯದಲ್ಲಿ ಕಾರ್ಯಕರ್ತರ ಜತೆ ಮಾತುಕತೆ ಮುಗಿಸಿ ಎನ್.ಮಹೇಶ್ ಅವರು ಬೆಂಗಳೂರಿಗೆ ತೆರಳಿದರು. 4.45ರ ವೇಳೆಗೆ ಎಂದಿನಂತೆ ಮನೆಗೆ ಬೀಗ ಹಾಕಿಕೊಂಡು ನಾನು ತೆರಳಿದೆ. ಮರುದಿನ ಬೆಳಗ್ಗೆ 11 ಗಂಟೆ ಸಮಯಕ್ಕೆ ಮನೆಗೆ ಬಂದು ನೋಡುವಾಗ ಬಾಗಿಲ ಸ್ಕ್ರೂಗಳನ್ನು ಬಿಚ್ಚಿರುವಂತೆ ಗೋಚರಿಸಿತು. ಒಳ ಹೋಗಿ ನೋಡಿದಾಗ ಬೀರುನಲ್ಲಿದ್ದ ವಸ್ತುಗಳು ಚೆಲ್ಲಾಪಿಲ್ಲಿಯಾಗಿದ್ದವು. ತಕ್ಷಣ ವಿಷಯವನ್ನು ಎನ್.ಮಹೇಶ್ ಅವರಿಗೆ ತಿಳಿಸಲಾಗಿ ಅವರು ಬಂದು ನೋಡುವಾಗ 50 ಸಾವಿರ ರೂ. ಕಳ್ಳತನವಾಗಿದೆ ಎಂದು ತಿಳಿಸಿದ್ದಾರೆ ಎಂದು ಕಾಳಿ ಪ್ರಸಾದ್ ದೂರಿನಲ್ಲಿ ತಿಳಿಸಿದ್ದಾರೆ.
ಕೊಳ್ಳೇಗಾಲ ವೃತ್ತ ನಿರೀಕ್ಷಕ ಕೃಷ್ಣಪ್ಪ, ಪಿಎಸ್‌ಐ ಬಿ.ವಿ.ವರ್ಷ ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ. ಶ್ವಾನದಳ ಹಾಗೂ ಬೆರಳಚ್ಚು ತಜ್ಞರ ತಂಡ ಕಾರ್ಯಾಚರಣೆ ನಡೆಸಿದ್ದು, ಮುಂದಿನ ಕ್ರಮ ಕೈಗೊಂಡಿದ್ದಾರೆ.