ಜಿಲ್ಲೆ

ಮಠದಲ್ಲಿ ಕಳ್ಳತನಕ್ಕೆ ಯತ್ನ- ತಡೆಯಲು ಯತ್ನಿಸಿದ ಗಂಗಾಧರ ಸ್ವಾಮೀಜಿ ಮೇಲೆ ತೀವ್ರ ಹಲ್ಲೆ: ಆಸ್ಪತ್ರೆಗೆ ದಾಖಲು

ಬೆಳಗಾವಿ: ಬೆಳಗಾವಿ ಜಿಲ್ಲೆಯ ಬೈಲಹೊಂಗಲ ಸಮೀಪದ ಹೊಸೂರ ಗ್ರಾಮದ ಶಾಖಾ ಮೂರುಸಾವಿರಮಠದಲ್ಲಿ ನಿನ್ನೆ ರಾತ್ರಿ ಕಳ್ಳತನಕ್ಕೆ ಯತ್ನ ನಡೆದಿದೆ. ಈ ಸಂದರ್ಭದಲ್ಲಿ ಎಚ್ಚರಗೊಂಡ ಮಠದ ಗಂಗಾಧರ ಸ್ವಾಮೀಜಿ ಅವರ ಮೇಲೆ ಕಳ್ಳ ತೀವ್ರತರದಲ್ಲಿ ಹಲ್ಲೆ ನಡೆಸಿದ್ದು, ಸ್ವಾಮೀಜಿ ಅವರಿಗೆ ಗಂಭೀರ ಗಾಯಗಳಾಗಿವೆ.

ನಿನ್ನೆ ಮಧ್ಯರಾತ್ರಿ ಈ ಘಟನೆ ನಡೆದಿದೆ. ಆರೋಪಿಯನ್ನು ಮಲ್ಲಿಕಾರ್ಜುನ ಬುಡಶೆಟ್ಟಿ ಎಂದು ಗುರುತಿಸಲಾಗಿದೆ. ಈತ ಸಮೀಪದ ಹೊಸೂರು ಗ್ರಾಮದ ನಿವಾಸಿ ಎನ್ನಲಾಗಿದೆ.

ಕಳ್ಳತನ ಮಾಡುವ ಸಮಯದಲ್ಲಿ ಶ್ರೀಗಳು ಪ್ರತಿರೋಧ ತೋರಿದ್ದಕ್ಕೆ, ಹಲ್ಲೆ ನಡೆಸಲಾಗಿದ್ದು, ಈ ಸಂದರ್ಭದಲ್ಲಿ ಕೊಲೆಗೂ ಯತ್ನಿಸಲಾಗಿದೆ ಎಂದು ಹೇಳಲಾಗುತ್ತಿದ್ದು, ಪೊಲೀಸರಿಂದ‌ ಸತ್ಯ ಇನ್ನಷ್ಟೇ ತಿಳಿಯಬೇಕಿದೆ.

ತಲೆಗೆ ಹಾಗೂ ಕೈಗೆ ಬಲವಾದ ಪೆಟ್ಟು ಬಿದ್ದಿದೆ.‌ ಸ್ವಾಮೀಜಿ ಅವರನ್ನು ಚಿಕಿತ್ಸೆಗಾಗಿ ಬೆಳಗಾವಿ ಜಿಲ್ಲಾಸ್ಪತ್ರೆಗೆ ದಾಖಲಿಸಲಾಗಿದೆ. ‌ಸದ್ಯ ಆರೋಗ್ಯ ಸ್ಥಿರವಾಗಿದೆ ಎಂದು ಮೂಲಗಳು ಹೇಳಿವೆ.

ಈ ಕುರಿತು ಮುರಗೋಡ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ಕಳ್ಳನನ್ನು ಬಂಧಿಸಿರುವ ಪೊಲೀಸರು ವಿಚಾರಣೆ ನಡೆಸಿದ್ದಾರೆ. ಈತನ ವಿರುದ್ಧ ಈ ಹಿಂದೆ ಅನೇಕ‌ ಪ್ರಕರಣಗಳು ಇವೆ ಎಂದು ಪೊಲೀಸರು ತಿಳಿಸಿದ್ದಾರೆ.