ಜಿಲ್ಲೆ

ಕಳ್ಳತನ ಮಾಡಲು ಬಂದು ಗ್ರಾಮಸ್ಥರ ಕೈಗೆ ಸಿಕ್ಕ ಖದೀಮ; ಧರ್ಮದೇಟು ಕೊಟ್ಟು ಪೊಲೀಸರಿಗೆ ಒಪ್ಪಿಸಿದ ಜನ

Haveri - Kariyappa Aralikatti

ಹಾವೇರಿ: ರಾತ್ರೋರಾತ್ರಿ ಮನೆ ಕಳ್ಳತನ ಮಾಡಲು ಬಂದಿದ್ದ ಕಳ್ಳರಲ್ಲಿ ಓರ್ವ ಗ್ರಾಮಸ್ಥರ ಕೈಗೆ ಸಿಕ್ಕು ಧರ್ಮದೇಟು ತಿಂದ ಘಟನೆ ತಾಲೂಕಿನ ಕಬ್ಬೂರ ಗ್ರಾಮದಲ್ಲಿ ಶನಿವಾರ ರಾತ್ರಿ ಸಂಭವಿಸಿದೆ.
ದಾವಣಗೆರೆ ಪಟ್ಟಣದ ರಾಜಾಭಕ್ಷ ಎನ್ನುವ ಆರೋಪಿ ಗ್ರಾಮಸ್ಥರ ಕೈಗೆ ಸಿಕ್ಕವನು.
ಈತ ಹಾಗೂ ಮೂರ್ನಾಲ್ಕು ಜನರು ಸೇರಿ ಗ್ರಾಮದ ಸಿದ್ದಪ್ಪ ಎಂಬುವರ ಮನೆಯಲ್ಲಿ ಯಾರೂ ಇಲ್ಲದಿರುವುದನ್ನು ಗಮನಿಸಿ ಮನೆ ಬೀಗ ಮುರಿದು ಒಳಗೆ ನುಗ್ಗಿ 15 ಗ್ರಾಂ ಚಿನ್ನಾಭರಣ ಹಾಗೂ 40 ಸಾವಿರ ರೂ. ನಗದು ದೋಚಿಕೊಂಡು ಪರಾರಿಯಾಗುತ್ತಿದ್ದ. ಇದನ್ನು ಗಮನಿಸಿದ ರೈತರು ಕೂಡಲೇ ರಾಜಾಭಕ್ಷ ಎಂಬುವನನ್ನು ಹಿಡಿದಿದ್ದಾರೆ.
ಆತನನ್ನು ಗ್ರಾಮದ ಬಸವಣ್ಣನ ದೇವಸ್ಥಾನದ ಎದುರಿನ ಕಂಬಕ್ಕೆ ಕಟ್ಟಿ ಧರ್ಮದೇಟು ನೀಡಿದ್ದಾರೆ. ನಂತರ ಗ್ರಾಮೀಣ ಠಾಣೆ ಪೊಲೀಸರನ್ನು ಕರೆಯಿಸಿ ಒಪ್ಪಿಸಿದ್ದಾರೆ. ಈ ಕುರಿತು ಗ್ರಾಮೀಣ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.