ಮಂಡ್ಯ: ಇಲ್ಲಿನ ಅನ್ನಪೂರ್ಣೇಶ್ವರಿನಗರದಲ್ಲಿ ದುಷ್ಕರ್ಮಿಗಳು ಮನೆಯ ಬಾಗಿಲು ಮುರಿದು ನಗದು ಹಾಗೂ ಚಿನ್ನಾಭರಣ ದೋಚಿದ್ದಾರೆ.
ಅನ್ನಪೂರ್ಣೇಶ್ವರಿನಗರ ನಿವಾಸಿ ಲಕ್ಷ್ಮಮ್ಮ ಎಂಬುವರ ಮನೆಯಲ್ಲಿ ಕಳ್ಳತನ ನಡೆದಿದೆ. ಇವರು ರೈಲ್ವೆ ಇಲಾಖೆಯ ಕೆಂಗೇರಿ ಶಾಖೆಯಲ್ಲಿ ಟಿಕೆಟ್ ಆಪರೇಟರ್ ಆಗಿ ಕೆಲಸ ಮಾಡುತ್ತಿದ್ದು, ಕುಟುಂಬ ಸಮೇತ ಕೆಂಗೇರಿಯಲ್ಲಿ ವಾಸವಿದ್ದಾರೆ. ಅಂತೆಯೇ ಮಂಡ್ಯದ ನಿವಾಸಕ್ಕೆ ಆಗಾಗೆ ಬಂದು ಹೋಗುತ್ತಿರುತ್ತಾರೆ. ಶುಕ್ರವಾರ ಸಂಜೆ ಮನೆಗೆ ಬಂದು ಕೆಲಸ ನಿಮಿತ್ತ ಹೊರಗೆ ಹೋಗಿದ್ದಾರೆ. ಕೆಲವೊತ್ತಿನ ನಂತರ ಬಂದು ನೋಡಿದಾಗ ಕಳ್ಳರು ಮನೆ ಬಾಗಿಲು ಮುರಿದು ಬೀರುವಿನಲ್ಲಿದ್ದ ಒಂದು ಲಕ್ಷ ರೂ ನಗದು ಹಾಗೂ 8 ಗ್ರಾಂನ ಬಳೆ, ಉಂಗುರು ದೋಚಿ ಪರಾರಿಯಾಗಿರುವುದು ಬೆಳಕಿಗೆ ಬಂದಿದೆ. ಘಟನೆ ಸಂಬಂಧ ಮಂಡ್ಯ ಗ್ರಾಮಾಂತರ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.