ವಿಜಯವಾಣಿ ಸುದ್ದಿಜಾಲ ಧಾರವಾಡ
ನಗರದ ಮಾಳಮಡ್ಡಿ ಕಬ್ಬೂರ ರಸ್ತೆಯ ಖ್ಯಾತ ವೈದ್ಯ ಡಾ. ಆನಂದ ಕಬ್ಬೂರ ಮನೆಯಲ್ಲಿ ಶನಿವಾರ ಹಾಡುಹಗಲೇ ನಡೆದಿದ್ದ ಕಳ್ಳತನ ಪ್ರಕರಣಕ್ಕೆ ಸಂಬಂಧಿಸಿ ಮೂವರನ್ನು ಕೆಲ ಗಂಟೆಗಳಲ್ಲೇ ಬಂಧಿಸುವಲ್ಲಿ ವಿದ್ಯಾಗಿರಿ ಠಾಣೆ ಪೊಲೀಸರು ಯಶಸ್ವಿಯಾಗಿದ್ದಾರೆ.
ಈ ಕುರಿತು ಭಾನುವಾರ ಸುದ್ದಿಗೋಷ್ಠಿಯಲ್ಲಿ ಮಾಹಿತಿ ನೀಡಿದ ಪೊಲೀಸ್ ಆಯಕ್ತ ಎನ್. ಶಶಿಕುಮಾರ, ಧಾರವಾಡದ ಅಶೋಕ ಹೊಸಮನಿ (20), ಶಿವುಕುಮಾರ ಕೋಕಾಟಿ (28) ಹಾಗೂ ಶಿವಾನಂದ ಕರಡಿಗುಡ್ಡ (28) ಎಂಬುವವರನ್ನು ಬಂಧಿಸಲಾಗಿದೆ. ಬಂಧಿತರಿಂದ 30 ಗ್ರಾಂ. ಬಂಗಾರದ ಆಭರಣ, 2 ಮೊಬೈಲ್, 3 ಬೈಕ್ ಹಾಗೂ ಆಟೋ ರಿಕ್ಷಾ ಸೇರಿ ಒಟ್ಟು 3.30 ಲಕ್ಷ ರೂ. ಮೌಲ್ಯದ ವಸ್ತುಗಳನ್ನು ವಶಕ್ಕೆ ಪಡೆಯಲಾಗಿದೆ ಎಂದರು.
ಡಾ. ಆನಂದ ಕಬ್ಬೂರ ವೈದ್ಯಕಿಯ ತಪಾಸಣೆಗಾಗಿ ಶನಿವಾರ ಮಧ್ಯಾಹ್ನ ಆಸ್ಪತ್ರೆಗೆ ತೆರಳಿದ್ದರು. ಆಗ ವಿನೋದಿನಿ ಆನಂದ ಕಬ್ಬೂರ ಒಬ್ಬರೇ ಮನೆಯಲ್ಲಿದ್ದದ್ದನ್ನು ಗಮನಿಸಿ ಮನೆಗೆ ನುಗ್ಗಿದ ಕಳ್ಳರು ಚಿನ್ನದ ಮಾಂಗಲ್ಯ ಸರ, ಹಣ ದೋಚಿ ಪರಾರಿಯಾಗಿದ್ದರು. ಅವರನ್ನು ತಡೆಯಲು ಯತ್ನಿಸಿದ ವಿನೋದಿನಿ ಅವರನ್ನು ತಳ್ಳಾಡಿದ್ದರಿಂದ ಗಾಯಗೊಂಡಿದ್ದರು. ಈ ಕುರಿತು ವಿದ್ಯಾಗಿರಿ ಠಾಣೆಯಲ್ಲಿ ಪ್ರಕರಣ ದಾಖಲಾಗಿತ್ತು. ಕೂಡಲೇ ಕಾರ್ಯ ಪ್ರವೃತ್ತರಾಗಿದ್ದರಿಂದ ಕೆಲ ಗಂಟೆಗಳಲ್ಲೇ ಕಳ್ಳರನ್ನು ಬಂಧಿಸಲಾಗಿದೆ ಎಂದರು.
ಸಿಸಿ ಕ್ಯಾಮರಾ ಸಹಾಯದಿಂದ ಕಳ್ಳರ ಗುರುತು ಪತ್ತೆಯಾಗಿತ್ತು. ನಂತರ ವಿಶೇಷ ತಂಡ ರಚನೆ ಮಾಡಿದ ಕಾರ್ಯಾಚರಣೆ ನಡೆಸಿದ ಸಂದರ್ಭದಲ್ಲಿ ರಾಯಾಪುರ ಬಳಿ ಮೂವರೂ ಸಿಕ್ಕಿಬಿದ್ದಿದ್ದಾರೆ. ಬಂಧನ ಮಾಡುವ ಸಮಯದಲ್ಲಿ ಪೊಲೀಸರ ಮೇಲೆ ಹಲ್ಲೆ ಮಾಡಿ ಪರಾರಿಯಾಗಲು ಪ್ರಯತ್ನಿಸಿದ್ದರು. ಆದರೆ ಅವರು ತಪ್ಪಿಸಿಕೊಳ್ಳದಂತೆ ಎಚ್ಚರ ವಹಿಸಿ ಬಂಧಿಸುವಲ್ಲಿ ನಮ್ಮ ತಂಡ ಯಶಸ್ವಿಯಾಗಿದೆ ಎಂದರು.
ಈ ಪ್ರಕರಣದಲ್ಲಿ ಇನ್ನಷ್ಟು ಜನರು ಭಾಗಿಯಾಗಿರುವ ಸಾಧ್ಯತೆ ಇದೆ. ಇದಲ್ಲದೆ ಬಂಧಿತರು ಇನ್ನೂ ಕೆಲ ಪ್ರಕರಣಗಳಲ್ಲಿ ಭಾಗಿಯಾಗಿರುವ ಸಂಶಯವಿದೆ. ಹೀಗಾಗಿ ಇನ್ನೂ ಹೆಚ್ಚಿನ ತನಿಖೆ ನಡೆಸಿದ ಬಳಿಕ ಸಮಗ್ರ ಮಾಹಿತಿ ಸಿಗಲಿದೆ. ಪ್ರಕರಣ ನಡೆದ ತಕ್ಷಣ ರಚನೆಯಾದ ವಿಶೇಷ ತಂಡ ನಡೆಸಿದ ಕಾರ್ಯಾಚರಣೆ ಶ್ಲಾಘನೀಯ ಎಂದರು.
ಡಿಸಿಪಿ ರವೀಶ, ಸಹಾಯಕ ಪೊಲೀಸ್ ಆಯುಕ್ತ ಪ್ರಶಾಂತ ಸಿದ್ದನಗೌಡರ, ವಿದ್ಯಾಗಿರಿ ಠಾಣೆ ಇನ್ಸ್ಪೆಕ್ಟರ್ ಸಂಗಮೇಶ ದಿಡಿಗಿನಾಳ, ಶಹರ ಠಾಣೆ ಇನ್ಸ್ಪೆಕ್ಟರ್ ನಾಗೇಶ ಕಾಡದೇವರಮಠ, ಪಿಎಸ್ಐ ಪ್ರಮೋದ ಎಚ್.ಜಿ., ಬಾಬಾ ಎಂ., ಎಂ.ಆರ್. ಮಲ್ಲಿಗವಾಡ, ಇತರರು ಇದ್ದರು.