ಮಂಗಳೂರು: ರೈಲಿನಲ್ಲಿ ಪ್ರಯಾಣಿಕೆಯೊಬ್ಬರ ಚಿನ್ನಾಭರಣ ಹಾಗೂ ದಾಖಲೆಪತ್ರ ಸಹಿತ 2.2 ಲಕ್ಷ ರೂ. ಮೌಲ್ಯದ ಸೊತ್ತುಗಳಿದ್ದ ಬ್ಯಾಗ್ ಕಳವು ಮಾಡಿದ್ದ ಆರೋಪಿಯನ್ನು ಕೊಂಕಣ ರೈಲ್ವೆ ಸುರಕ್ಷತಾ ದಳ ಬಂಧಿಸಿ, ಕಳವು ಮಾಡಿದ ಸೊತ್ತುಗಳನ್ನು ವಶಪಡಿಸಿಕೊಂಡಿದೆ.
ಕೇರಳ ಕಣ್ಣೂರು ನಿವಾಸಿ ನಿಖಿಲ್ ಕುಮಾರ್ ಬಂಧಿತ ಆರೋಪಿ. ಕಳವು ಮಾಡಿದ ಸೊತ್ತುಗಳನ್ನು ವಶಪಡಿಸಿಕೊಳ್ಳಲಾಗಿದೆ. ರೈಲಿನಲ್ಲಿ ಕಳ್ಳತನ ಮಾಡುವುದೇ ಈತನ ವೃತ್ತಿಯಾಗಿದೆ. ಈತ ಧರಿಸಿದ್ದ ಕ್ಯಾಪ್ ಬಂಧನವಾಗುವಂತೆ ಮಾಡಿದೆ.
ವನಿತಾ ದಿವಾಕರ ಶೆಟ್ಟಿ ಅವರು ಶುಕ್ರವಾರ ಉಡುಪಿಯಿಂದ ಮುಂಬೈಗೆ ಮಂಗಳಾ ಎಕ್ಸ್‌ಪ್ರೆಸ್ ರೈಲಿನಲ್ಲಿ ಪ್ರಯಾಣಿಸುತ್ತಿದ್ದರು. ಈ ಸಂದರ್ಭ ಚಿನ್ನದ ಬಳೆ, ಚಿನ್ನದ ಮಂಗಳಸೂತ್ರ, ಒಂದು ಮೊಬೈಲ್, ಕೀ ಗೊಂಚಲು, ಆಧಾರ್ ಕಾರ್ಡ್, ಎಟಿಎಂ ಕಾರ್ಡ್, ಮೆಡಿಕ್ಲೈಮ್ ಕಾರ್ಡ್, ಪರ್ಸ್‌ನಲ್ಲಿ 6 ಸಾವಿರ ರೂ. ಸೇರಿದಂತೆ ಒಟ್ಟು 2.20 ಲಕ್ಷ ರೂ. ಮೌಲ್ಯದ ಸೊತ್ತುಗಳು ಅವರ ಬ್ಯಾಗ್‌ನಲ್ಲಿದ್ದವು. ಕೋಚ್ ನಂ.ಎ1ನಲ್ಲಿ ಪ್ರಯಾಣಿಸುತ್ತಿದ್ದಾಗ ಕಳವು ಕೃತ್ಯ ನಡೆದಿತ್ತು. ತಕ್ಷಣ ಟಿಟಿಇ ಅವರ ಗಮನಕ್ಕೆ ತಂದು ದೂರು ನೀಡಿದರು.
ರೈಲ್ವೆ ಸುರಕ್ಷತಾ ದಳದ ಅಪರಾಧ ವಿಭಾಗದ ಇನ್‌ಸ್ಪೆಕ್ಟರ್ ವಿನೋದ್ ಕುಮಾರ್ ಅವರು ಸಿಸಿಟಿವಿ ಪರಿಶೀಲಿಸಿ ಶಂಕಿತ ವ್ಯಕ್ತಿಯು ವಿನ್ಯಾಸಗೊಳಿಸಿದ ಕ್ಯಾಪ್ ಧರಿಸಿರುವುದು ಕಂಡು ಬಂತು. ಆತನ ಚಿತ್ರವನ್ನು ಆರ್‌ಪಿಎಫ್ ವಾಟ್ಸ್‌ಆ್ಯಪ್ ಗ್ರೂಪ್‌ನಲ್ಲಿ ಹಾಕಿದ್ದಾರೆ. ಮರುದಿನ ಅದೇ ವ್ಯಕ್ತಿ ಕ್ಯಾಪ್ ಧರಿಸಿಕೊಂಡು ನೇತ್ರಾವತಿ ಎಕ್ಸ್‌ಪ್ರೆಸ್ ರೈಲಿನ ಜನರಲ್ ಕೋಚ್‌ನಲ್ಲಿ ಪ್ರಯಾಣಿಸುತ್ತಿರುವಾಗ ಆರ್‌ಪಿಎಫ್ ಕಾರವಾರ ಕಾನ್‌ಸ್ಟೇಬಲ್ ವಿನಾಯಕ ಆರ್.ಡಿ. ಗಮನಕ್ಕೆ ಬಂದು ಆತನನ್ನು ವಶಕ್ಕೆ ಪಡೆದಿದ್ದಾರೆ. ಆರೋಪಿಯನ್ನು ಮುಂದಿನ ತನಿಖೆಗೆ ಕೊಂಕಣ ರೈಲ್ವೆ ಪೊಲೀಸರಿಗೆ ಹಸ್ತಾಂತರಿಸಲಾಗಿದೆ ಎಂದು ಆರ್‌ಪಿಎಫ್ ಪ್ರಕಟಣೆ ತಿಳಿಸಿದೆ.