ಕಾಸರಗೋಡು: ಕುಂಬಳೆ ಪೊಲೀಸ್ ಠಾಣೆ ವ್ಯಾಪ್ತಿಯ ಬಂಬ್ರಾಣ ದಿನೇಶ್ ಬೀಡಿ ಬ್ರಾಂಚ್ ಸನಿಹದ ನಿವಾಸಿ ಹಮೀದ್ ಅಬ್ದುಲ್ಲ ಎಂಬುವರ ಮನೆ ಬಾಗಿಲು ಒಡೆದು 9 ಪವನ್ ಚಿನ್ನ ಹಾಗೂ 85 ಸಾವಿರ ರೂ. ನಗದು ಕಳವುಗೈಯಲಾಗಿದೆ. ಮೇ 25ರಂದು ಮಧ್ಯಾಹ್ನ ಹಮೀದ್ ಅಬ್ದುಲ್ಲ ಅವರ ಪತ್ನಿ ಹಾಗೂ ಮಕ್ಕಳು ವಿವಾಹ ಸಮಾರಂಭಕ್ಕೆ ತೆರಳಿದ್ದು, ಹಮೀದ್ ಅಬ್ದುಲ್ಲ ಮಾತ್ರ ಮನೆಯಲ್ಲಿದ್ದರು. ಅವರು ಸಂಜೆ 7.30ಕ್ಕೆ ಮನೆ ಸನಿಹದ ಅಂಗಡಿಗೆ ತೆರಳಿದ್ದು, 8.30ಕ್ಕೆ ಮನೆಗೆ ವಾಪಸಾಗಿದ್ದರು. ಈ ವೇಳೆ ಮನೆ ಬಾಗಿಲು ಒಡೆದು ನುಗ್ಗಿ ಕಪಾಟಿನಲ್ಲಿರಿಸಿದ್ದ ನಗ ಹಾಗೂ ನಗದು ದೋಚಲಾಗಿದೆ. ಕುಂಬಳೆ ಠಾಣಾ ಪೊಲೀಸರು ಸ್ಥಳಕ್ಕಾಗಮಿಸಿ ಮಾಹಿತಿ ಸಂಗ್ರಹಿಸಿದ್ದಾರೆ.