ಕಾಸರಗೋಡು: ನೀಲೇಶ್ವರ ರಾಜಾಸ್ ಹೈಯರ್ ಸೆಕೆಂಡರಿ ಶಾಲೆ ಮುಖ್ಯಶಿಕ್ಷಕರ ಕಚೇರಿ ಬಾಗಿಲು ಒಡೆದು ಒಳಗೆ ನುಗ್ಗಿದ ಕಳ್ಳರು 12 ಸಾವಿರ ರೂ. ನಗದು ಹಾಗೂ ಕ್ಯಾಮರಾ ಕಳವುಗೈದಿದ್ದಾರೆ. ಆರೋಪಿಗಳ ಚಹರೆ, ಸಿಸಿ ಕ್ಯಾಮರಾ ದೃಶ್ಯಗಳು ಪತ್ತೆಯಾಗಿದ್ದು, ಪೊಲೀಸರು ಆರೋಪಿಗಳ ಪತ್ತೆಗಾಗಿ ಬಲೆ ಬೀಸಿದ್ದಾರೆ.
ಶಾಲೆಯ ಸುತ್ತಮುತ್ತ ಇರುವ ಸಿಸಿ ಕ್ಯಾಮರಾ ದೃಶ್ಯಗಳನ್ನೂ ಪರಿಶೀಲಿಸಲಾಗಿದ್ದು, ಇಬ್ಬರು ಯುವಕರು ಪರಸ್ಪರ ಮಾತನಾಡುತ್ತಿರುವ ಹಾಗೂ ಶಾಲೆ ಕಚೇರಿ ಬಳಿ ಬರುತ್ತಿರುವ ದೃಶ್ಯ ಕಂಡುಬಂದಿದೆ. ಶುಕ್ರವಾರ ಮುಂಜಾನೆ 4 ಗಂಟೆ ವೇಳೆಗೆ ಕಳವು ನಡೆದಿದ್ದು, ನಾಲ್ಕು ಕಪಾಟುಗಳನ್ನು ಒಡೆದು ದಾಖಲೆಗಳನ್ನು ಚೆಲ್ಲಾಪಿಲ್ಲಿಗೊಳಿಸಲಾಗಿದೆ. ನೀಲೇಶ್ವರ ಠಾಣೆ ಇನ್ಸ್‌ಪೆಕ್ಟರ್ ಕೆ.ಪಿ ಉಮೇಶನ್ ನೇತೃತ್ವದ ಪೊಲೀಸರ ತಂಡ ಸ್ಥಳಕ್ಕಾಗಮಿಸಿ ಮಾಹಿತಿ ಸಂಗ್ರಹಿಸಿದೆ.