ಜಿಲ್ಲೆ

ಕೋಟೆ ಮಾರಿಯಮ್ಮ ದೇವಾಲಯದಲ್ಲಿ ಕಳ್ಳತನ

ಮಡಿಕೇರಿ:

ಮಡಿಕೇರಿಯ ಶಕ್ತಿದೇವತೆಗಳಲ್ಲಿ ಒಂದಾಗಿರುವ ಕೋಟೆ ಶ್ರೀ ಮಾರಿಯಮ್ಮ ದೇವಾಲಯದಲ್ಲಿ ಶುಕ್ರವಾರ ರಾತ್ರಿ ಕಳ್ಳತನ ನಡೆದಿದೆ. ಕೋಟೆ ಶ್ರೀ ಮಾರಿಯಮ್ಮ ದೇವಾಲಯ ನಗರದ ನಾಲ್ಕು ಕರಗ ದೇವತೆಗಳ ಪೈಕಿ ಒಂದಾಗಿದ್ದು, ದೇವಿಯ ಚಿನ್ನಾಭರಣ ಸೇರಿದಂತೆ ದೇವಿಯ ಸಂಗ್ರಹದಲ್ಲಿ ಇದ್ದ ಆಭರಣಗಳು ಕಳುವಾಗಿರುವುದಾಗಿ ದೇವಾಲಯದ ಮೂಲಗಳು ತಿಳಿಸಿವೆ. ದೇವಾಲಯದಲ್ಲಿದ್ದ ಸಿಸಿ ಕ್ಯಾಮೆರಾವನ್ನು ತಿರುಗಿಸಿ ಕಳ್ಳತನ ನಡೆಸಲಾಗಿದೆ ಎಂದು ಹೇಳಲಾಗಿದೆ.

ದೇವಾಲಯದ ಮುಖ್ಯದ್ವಾರದ ಮೂಲಕ ಒಳನುಗ್ಗಿರುವ ಕಳ್ಳರು, ಹುಂಡಿಯಲ್ಲಿದ್ದ ಹಣ ದೋಚಿದ್ದಾರೆ. ಗರ್ಭಗುಡಿ ಪ್ರವೇಶಿಸಿ ಬೆಳ್ಳಿ ಕಿರೀಟ, ಚಿನ್ನದ ದೃಷ್ಟಿ, ಆಭರಣಗಳನ್ನು ಕದ್ದಿದ್ದಾರೆ. ಹುಂಡಿಯಲ್ಲಿ ಸುಮಾರು 2.5 ಲಕ್ಷ ರೂ. ಹಣ ಇದ್ದಿರಬಹುದು ಎಂದು ದೇವಾಲಯ ಸಮಿತಿಯವರು ಮಾಹಿತಿ ನೀಡಿದ್ದಾರೆ. ಶನಿವಾರ ಬೆಳಗ್ಗೆ ದೇವಾಲಯದ ಸಿಬ್ಬಂದಿ ದೇವಾಲಯಕ್ಕೆ ಆಗಮಿಸಿದ ವೇಳೆ ಕಳ್ಳತನ ನಡೆದಿರುವುದು ಗೊತ್ತಾಗಿದೆ.

ಮಡಿಕೇರಿ ನಗರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ವಿವಿಧ ಆಯಾಮಗಳಲ್ಲಿ ಪೊಲೀಸರು ತನಿಖೆ ನಡೆಸುತ್ತಿದ್ದಾರೆ. ಬೆರಳಚ್ಚು ತಜ್ಞರು ಮತ್ತು ಶ್ವಾನ ದಳ ಸ್ಥಳಕ್ಕೆ ಭೇಟಿ ನೀಡಿದ್ದರು.