ವಿಜಯವಾಣಿ ಸುದ್ದಿಜಾಲ ಉಡುಪಿ
ನಗರದ ಚಿತ್ತರಂಜನ್ ಸರ್ಕಲ್ ಸಮೀಪದಲ್ಲಿರುವ ಜ್ಯುವೆಲರಿ ವರ್ಕ್ಶಾಪ್ನಲ್ಲಿ ಸೆ.8ರಂದು ತಡರಾತ್ರಿ ಕಳ್ಳತನ ನಡೆದಿದ್ದು, ಅಂದಾಜು 95 ಲಕ್ಷ ರೂ.ಗೂ ಅಧಿಕ ಮೌಲ್ಯದ ಸೊತ್ತು ದೋಚಿದ ಕಳ್ಳರು ಪರಾರಿಯಾಗಿದ್ದಾರೆ.
ಚಿನ್ನ-ಬೆಳ್ಳಿಗಳನ್ನು ರಿಫೈನ್ ಮಾಡುವ ಅಂಗಡಿಯಲ್ಲಿ ಕಳ್ಳತನ ನಡೆದಿದ್ದು, ನಕಲಿ ಬೀಗದ ಸಹಾಯದಿಂದ ಶೆಟರ್ ಓಪನ್ ಮಾಡಿದ ಕಳ್ಳರು ಒಳನುಗ್ಗಿದ್ದಾರೆ. ಡ್ರಾವರ್ನ ಬೀಗ ಮುರಿದು ಸುಮಾರು 600 ಗ್ರಾಂ ತೂಕದ ಚಿನ್ನದ ಗಟ್ಟಿ, ಗೋಲ್ಡ್ ಲಿಕ್ವಿಡ್ ಕಳವು ಮಾಡಿದ್ದಾರೆ. ಈ ಹಿಂದೆ ಅಂಗಡಿಯಲ್ಲಿ ಕೆಲಸ ಮಾಡುತ್ತಿದ್ದ ಕಾರ್ಮಿಕರೇ ಈ ಕೃತ್ಯ ನಡೆಸಿರಬಹುದು ಎಂಬ ಶಂಕೆಯೂ ವ್ಯಕ್ತವಾಗಿದೆ. ಪೊಲೀಸರು ತನಿಖೆ ಕೈಗೊಂಡಿದ್ದಾರೆ.
ಘಟನಾ ಸ್ಥಳಕ್ಕೆ ಉಡುಪಿ ಡಿವೈಎಸ್ಪಿ ಪ್ರಭು ಡಿ.ಟಿ., ಉಡುಪಿ ನಗರ ಪೊಲೀಸ್ ಠಾಣಾ ನಿರೀಕ್ಷಕ ಮಂಜುನಾಥ ಬಡಿಗೇರ ಭೇಟಿ ನೀಡಿ ಪರಿಶೀಲಿಸಿದ್ದಾರೆ. ಉಡುಪಿ ನಗರ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಮಹಾರಾಷ್ಟ್ರದ ಸಾಂಗ್ಲಿ ಜಿಲ್ಲೆಯ ತಾಸಗಾಂವ್ ತಾಲೂಕಿನ ಕುಮಟೆ ಗ್ರಾಮದ ವೈಭವ್ ಮೋಹನ ಘಾಟಗೆ (30) ಎಂಬವರ ವೈಭವ ಗೋಲ್ಡ್-ಸಿಲ್ವರ್ ಮೆಲ್ಟಿಂಗ್ ರಿಫೈನರಿ ಶಾಪ್ ಎಂಬ ಅಂಗಡಿಯಲ್ಲಿ ಕಳ್ಳತನ ನಡೆದಿದೆ. ರಿಫೈನರಿ ಮಷಿನ್ನಲ್ಲಿದ್ದ ಅಂದಾಜು 65.96 ಲಕ್ಷ ರೂ. ಬೆಲೆಯ 680 ಗ್ರಾಂ ಚಿನ್ನ, ಅಂಗಡಿಯ ಚಿನ್ನ ಇಡುವ ಡ್ರಾವರ್ನಲ್ಲಿದ್ದ ರಿಫೈನ್ ಮಾಡಿದ್ದ ಸುಮಾರು ಅಂದಾಜು 22 ಲಕ್ಷ ರೂ.ವಿನ 200 ಗ್ರಾಂ ಚಿನ್ನ, 6.25 ಲಕ್ಷ ರೂ. ಬೆಲೆಯ ರಿಫೈನ್ ಮಾಡಿದ್ದ 5 ಕೆಜಿ ತೂಕದ ಬೆಳ್ಳಿಯ ಸಣ್ಣ ಸಣ್ಣ ಗಟ್ಟಿಗಳು, 1.50 ಲಕ್ಷ ರೂ. ನಗದು ಸೇರಿ ಒಟ್ಟು 95.71 ಲಕ್ಷ ರೂ. ಮೌಲ್ಯದ ಸೊತ್ತುಗಳು ಕಳವಾಗಿದೆ ಎಂದು ಅಂಗಡಿಯ ಮಾಲೀಕ ಪೊಲೀಸರಿಗೆ ದೂರು ನೀಡಿದ್ದಾರೆ.