ಜಿಲ್ಲೆ

ತಲಕಾವೇರಿ ತೀಥೋದ್ಭವ ಸಂಭ್ರಮ: ಅವಧಿಗಿಂತ 1 ನಿಮಿಷ ತಡ, ತೀರ್ಥರೂಪಿಣಿಯಾಗಿ ತಾಯಿ ಕಾವೇರಿ ದರ್ಶನ

| ಅಜ್ಜಮಾಡ ರಮೇಶ್ ಕುಟ್ಟಪ್ಪ ತಲಕಾವೇರಿ

ಜೀವನದಿ ಕಾವೇರಿ ಉಗಮ ಸ್ಥಾನ ತಲಕಾವೇರಿಯ ಬ್ರಹ್ಮಕುಂಡಿಕೆಯಲ್ಲಿ ಭಾನುವಾರ ಮಧ್ಯಾಹ್ನ 1.12 ಗಂಟೆಗೆ ತೀರ್ಥರೂಪಿಣಿಯಾಗಿ ತಾಯಿ ಕಾವೇರಿ ಭಕ್ತರಿಗೆ ದರ್ಶನ ನೀಡಿದಳು. ತುಲಾ ಮಾಸದಲ್ಲಿ ಪ್ರತಿವರ್ಷ ಭಕ್ತರ ನಂಬಿಕೆಯಂತೆ ಪವಿತ್ರ ಕಾವೇರಿ ತೀಥೋದ್ಭವ ಘಟಿಸಲಿದೆ. ಈ ವರ್ಷ ನಿಗದಿತ ಅವಧಿಗಿಂತ 1 ನಿಮಿಷ ತಡವಾಯಿತು.

ಕೊಡವ ಭಕ್ತ ಸಮೂಹದ ಜಯಘೊಷ ಮುಗಿಲು ಮುಟ್ಟಿತ್ತು. ತಲಕಾವೇರಿ ಕ್ಷೇತ್ರ ಪ್ರಧಾನ ಅರ್ಚಕ ಪ್ರಶಾಂತ್ ಆಚಾರ್ಯ ನೇತೃತ್ವದಲ್ಲಿ 15 ಅರ್ಚಕ ಸಮೂಹದಿಂದ ಪೂಜಾ ಕೈಂಕರ್ಯ ನಡೆಯಿತು. ಕೋವಿಡ್ ನಡುವೆಯೂ ಸಹಸ್ರಾರು ಭಕ್ತರು ತಾಯಿ ದರ್ಶನಕ್ಕೆ ಶ್ರದ್ಧಾಭಕ್ತಿಯಿಂದ ಆಗಮಿಸಿದ್ದರು. ವಿವಿಧ ಸಂಘಟನೆಯ ನೇತಾರರ ನೇತೃತ್ವದಲ್ಲಿ ಕೊಡವರು ಸಾಂಪ್ರದಾಯಿಕ ಉಡುಗೆ- ತೊಡುಗೆ ತೊಟ್ಟು ಭಾಗಮಂಡಲದ ಭಗಂಡೇಶ್ವರ ಕ್ಷೇತ್ರದಿಂದ ತಲಕಾವೇರಿ ಕ್ಷೇತ್ರದವರೆಗೂ ಪಾದಯಾತ್ರೆಯಲ್ಲಿ ಆಗಮಿಸಿದರು. ಹೆಚ್ಚಿನ ಸಂಖ್ಯೆಯಲ್ಲಿ ಕೊಡವ ಯುವಕ-ಯುವತಿಯರು ಪಾಲ್ಗೊಂಡಿದ್ದು ವಿಶೇಷ.

ಕೋವಿಡ್ ಹಿನ್ನೆಲೆಯಲ್ಲಿ ಭಕ್ತರನ್ನು ನಿರ್ಬಂಧಿಸುವ ಪ್ರಯತ್ನ ಈ ಮೊದಲು ನಡೆದಿತ್ತು. ಇದಕ್ಕೆ ಭಕ್ತ ಸಮೂಹದಿಂದ ತೀವ್ರ ಪ್ರತಿರೋಧ ವ್ಯಕ್ತವಾದ ಹಿನ್ನೆಲೆಯಲ್ಲಿ ಭಕ್ತರ ಪ್ರವೇಶಕ್ಕೆ ಅವಕಾಶ ಕಲ್ಪಿಸಲಾಯಿತು. ಬಹುತೇಕ ಭಕ್ತರು ಹಾಗೂ ಕರ್ತವ್ಯಕ್ಕೆ ನಿಯೋಜನೆಗೊಂಡಿದ್ದವರು ಮಾಸ್ಕ್ ಧರಿಸಿದ್ದರು. ಸಹಸ್ರಾರು ಸಂಖ್ಯೆಯಲ್ಲಿ ಭಕ್ತರು ಸೇರಿದ್ದರಿಂದ ಪರಸ್ಪರ ಅಂತರ ಕಾಯ್ದುಕೊಳ್ಳಲು ಸಾಧ್ಯವಾಗಲಿಲ್ಲ.

ಬ್ರಹ್ಮಕುಂಡಿಕೆ ಸುತ್ತಮುತ್ತಲಿನ ಪ್ರದೇಶದಲ್ಲಿ ಭಕ್ತರ ಪ್ರವೇಶವನ್ನು ಸಂಪೂರ್ಣ ನಿಷೇಧಿಸಲಾಗಿತ್ತು. ಯಾವ ಭಕ್ತರಿಗೂ ಸ್ನಾನಕೊಳ ಪ್ರವೇಶಕ್ಕೆ ಅವಕಾಶ ನೀಡಲಿಲ್ಲ. ಕಬ್ಬಿಣದ ಬ್ಯಾರಿಕೇಡ್​ಗಳನ್ನು ಹಾಕುವುದರ ಮೂಲಕ ಭಕ್ತರು ಪ್ರವೇಶಿಸುವುದನ್ನು ತಡೆ ಹಿಡಿಯಲಾಯಿತು. ಬ್ರಹ್ಮಕುಂಡಿಕೆಯತ್ತ ಪ್ರವೇಶಿಸಲು ಸಾಕಷ್ಟು ಭಕ್ತರು ಹರಸಾಹಸ ಮಾಡುತ್ತಿದ್ದರು. ಪೊಲೀಸರೊಂದಿಗೆ ಭಕ್ತರು ವಾಗ್ವಾದ ನಡೆಸಿದರು. ತೀಥೋದ್ಭವ ಆಗುತ್ತಿದ್ದಂತೆ ಭಕ್ತರು ಬ್ಯಾರಿಕೇಡ್ ತಳ್ಳಿ, ಬ್ರಹ್ಮಕುಂಡಿಕೆಯತ್ತ ಧಾವಿಸಿದರು. ಕೋವಿಡ್ ಹಿನ್ನೆಲೆಯಲ್ಲಿ ಕೊಡಗಿನ ಭಕ್ತರಿಗೆ ಮಾತ್ರ ಅವಕಾಶ ನೀಡಬೇಕೆಂಬ ಒತ್ತಾಯ ಕೇಳಿಬಂದಿತ್ತು. ಆದರೆ, ಭಾನುವಾರ ಕೇರಳ, ತಮಿಳುನಾಡು ರಾಜ್ಯದ ಭಕ್ತರು ಕಾಣಿಸಿಕೊಂಡರು. ಇದರೊಂದಿಗೆ ಪ್ರವಾಸಿಗರೂ ಕ್ಷೇತ್ರಕ್ಕೆ ಆಗಮಿಸಿದ್ದರು. ಕೊಡಗು ಏಕೀಕರಣ ರಂಗದಿಂದ 26ನೇ ವರ್ಷದ ಆನ್ನದಾನ ನಡೆಯಿತು. ತಲಕಾವೇರಿ ಕ್ಷೇತ್ರಕ್ಕೆ ಆಗಮಿಸಿದ ಭಕ್ತರಿಗೆ ಬೆಳಗಿನ ಉಪಾಹಾರ, ಮಧ್ಯಾಹ್ನದ ಊಟದ ವ್ಯವಸ್ಥೆ ಮಾಡಲಾಗಿತ್ತು.

ಮಂಡ್ಯ ಜನತೆ ಪರವಾಗಿ ಕಾವೇರಿ ತೀಥೋದ್ಭವಕ್ಕೆ ಆಗಮಿಸಿದ್ದೇನೆ. ಎಲ್ಲರಿಗೂ ಒಳ್ಳೆಯದಾಗಲಿ ಎಂದು ತಾಯಿ ಕಾವೇರಿಯನ್ನು ಪ್ರಾರ್ಥಿಸಿದ್ದೇನೆ. ಕೋವಿಡ್ ದೂರವಾಗಲಿ. ತಾಯಿ ಆಶೀರ್ವಾದ ಯಾವಾಗಲೂ ಇರಲಿ. ಮಂಡ್ಯದ ಭಕ್ತರಿಗೆ ತೀರ್ಥ ತಲಕಾವೇರಿ ಕ್ಷೇತ್ರದಿಂದ ತೀರ್ಥ ತೆಗೆದುಕೊಂಡು ಹೋಗುತ್ತಿದ್ದೇನೆ. | ಕೆ.ಸಿ. ನಾರಾಯಣಗೌಡ ಮಂಡ್ಯ ಜಿಲ್ಲಾ ಉಸ್ತುವಾರಿ ಸಚಿವ