ಹಗರಿಬೊಮ್ಮನಹಳ್ಳಿಯಲ್ಲಿ ಏರ್ಪಡಿಸಿದ್ದ ಶ್ರೀ ಹೇಮರೆಡ್ಡಿ ಮಲ್ಲಮ್ಮ ನಾಟಕ ಪ್ರದರ್ಶನಕ್ಕೆ ಹಿರಿಯ ರಂಗಭೂಮಿ ಕಲಾವಿದೆ ಕೆ.ನಾಗರತ್ನಮ್ಮ ದೀಪ ಬೆಳಗಿಸಿ ಚಾಲನೆ ನೀಡಿದರು. ಪ್ರಮುಖರಾದ ಹಂಚಿನಮನಿ ರಮೇಶ್, ಇ.ಕೃಷ್ಣಮೂರ್ತಿ, ಸಂಚಿ ಶಿವಕುಮಾರ ಇದ್ದರು. 
ಜಿಲ್ಲೆ

ರಂಗಕಲೆ ಜೀವಂತಿಕೆಗೆ ವೇದಿಕೆಗಳ ಸೃಷ್ಟಿ ಅಗತ್ಯ

Kopala - Desk - Eraveni

ಹಗರಿಬೊಮ್ಮನಹಳ್ಳಿ: ಆಧುನಿಕ ಯುಗದಲ್ಲಿ ಕಲಾವಿದರ ನೂತನ ಪ್ರಯೋಗಗಳಿಂದಾಗಿ ರಂಗಭೂಮಿ ಮತ್ತು ರಂಗಕಲೆ ಜೀವಂತವಾಗಿದೆ ಎಂದು ಹಿರಿಯ ರಂಗಭೂಮಿ ಕಲಾವಿದೆ ಕೆ.ನಾಗರತ್ನಮ್ಮ ಅಭಿಪ್ರಾಯಪಟ್ಟರು.

ಪಟ್ಟಣದ ಪಾಂಡುರಂಗ ಕಲ್ಯಾಣ ಮಂಟಪದಲ್ಲಿ ವಿಶ್ವರಂಜನ ಸಂಗೀತ ನಾಟಕ ಕಲಾ ಟ್ರಸ್ಟ್, ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಏರ್ಪಡಿಸಿದ್ದ ಸಮೂಹ ನೃತ್ಯ ಮತ್ತು ಶ್ರೀ ಹೇಮರೆಡ್ಡಿ ಮಲ್ಲಮ್ಮ ನಾಟಕ ಪ್ರದರ್ಶನದಲ್ಲಿ ಮಾತನಾಡಿದರು. ರಂಗಕಲೆ ನಶಿಸದ ಸಂಪತ್ತು.

ಹೊಸ ಪ್ರತಿಭೆಗಳ ಅನಾವರಣದೊಂದಿಗೆ ರಂಗಭೂಮಿ ಶಾಶ್ವತವಾಗಿ ಜನಪ್ರಿಯತೆ ಗಳಿಸಲಿದೆ. ಟಿವಿ, ಮೊಬೈಲ್‌ಗಳು ಎಷ್ಟೇ ಪ್ರಭಾವ ಬೀರಿದರೂ ರಂಗಕಲೆ ಜೀವಂತಿಕೆಗೆ ವೇದಿಕೆಗಳು ಸೃಷ್ಟಿಯಾಗಬೇಕಿದೆ. ರಂಗಾಸಕ್ತರು ಕಲಾ ಪರಂಪರೆಯನ್ನು ಉಳಿಸಲು ಮುಂದಾಗಬೇಕು ಎಂದರು.

ಕಲಾ ಪೋಷಕ ಇ.ಕೃಷ್ಣಮೂರ್ತಿ ಮಾತನಾಡಿ, ಸಂಗೀತ ಯುವಪೀಳಿಗೆಯನ್ನು ಕೈಬೀಸಿ ಕರೆಯುವ ಕ್ಷೇತ್ರವಾಗಿದೆ. ಟಿವಿ ವಾಹಿನಿಗಳಲ್ಲಿ ನಡೆಯುವ ರಿಯಾಲಿಟಿ ಶೋಗಳು ಸ್ಫೂರ್ತಿಯಾಗಬಹುದು. ಪ್ರತಿಭೆಗಳನ್ನು ಗುರುತಿಸಿ ಅವಕಾಶ ನೀಡುವ ಸಂಘಟನೆಗಳು ಹೆಚ್ಚಾಗಬೇಕಿದೆ ಎಂದರು.

ಟ್ರಸ್ಟ್ ಕಾರ್ಯದರ್ಶಿ ತಬಲ ವಾದಕ ವಿರೂಪಾಕ್ಷರಾವ್ ಮೋರಿಗೇರಿ ಮತ್ತು ಭಾಗ್ಯಶ್ರೀ ತಂಡದಿಂದ ಸಮೂಹ ನೃತ್ಯ ಗಮನ ಸೆಳೆಯಿತು. ಎಚ್.ರಾಮಚಂದ್ರರಾವ್ ತಂಡ ಪ್ರದರ್ಶಿಸಿದ ಶ್ರೀಹೇಮರೆಡ್ಡಿ ಮಲ್ಲಮ್ಮ ನಾಟಕ ಜನರ ಮನರಂಜಿಸಿತು. ರಾಜ್ಯೋತ್ಸವ ಪ್ರಶಸ್ತಿ ಪುರಸ್ಕೃತ ಹುಬ್ಬಳ್ಳಿ ಎಚ್.ಬಿ.ಸರೋಜಮ್ಮ, ಕೂಡ್ಲಿಗಿ ಸಿದ್ದಪ್ಪ ದಳವಾಯಿರನ್ನು ಸನ್ಮಾನಿಸಲಾಯಿತು.

ರಂಗಭೂಮಿ ಕಲಾವಿದ ಹಂಚಿನಮನಿ ರಮೇಶ್, ತಾಲೂಕು ಕಲಾವಿದರ ಸಂಘದ ಅಧ್ಯಕ್ಷ ಹಿ.ಮ.ಕೊಟ್ರಯ್ಯ, ಹರೇಗೊಂಡೆನಹಳ್ಳಿ ಉಮಾಶಂಕರ, ಬೆಳ್ಳಕ್ಕಿ ರಾಮಣ್ಣ, ಮುಖಂಡರಾದ ಸಿನಿಮಾ ಮಂಜಣ್ಣ, ಕೆ.ಎಸ್.ಉಡುಚಪ್ಪ, ಹನಸಿ ದೇವರಾಜ, ಜೆ.ಯೋಗಾನಂದ, ಸೆರೆಗಾರ ಹುಚ್ಚಪ್ಪ, ಮಾಜಿ ಸೈನಿಕರ ಸಂಘದ ತಾಲೂಕು ಅಧ್ಯಕ್ಷ ರಾಮರೆಡ್ಡಿ, ಭಾವಸಾರ ಕ್ಷತ್ರಿಯ ಸಮಾಜದ ಅಧ್ಯಕ್ಷ ಪಟಿಗಿ ವೆಂಕಟೇಶ್, ಕನ್ನಡ ಯುವಶಕ್ತಿ ವೇದಿಕೆ ಅಧ್ಯಕ್ಷ ಸಂಚಿ ಶಿವಕುಮಾರ ಇದ್ದರು.