ಜಿಲ್ಲೆ

ರಂಗಭೂಮಿ ಮಕ್ಕಳ ವ್ಯಕ್ತಿತ್ವ ವಿಕಸನಕ್ಕೆ ಪೂರಕ ಸಂಪರ್ಕ ಕಲೆ

ವಿಜಯವಾಣಿ ಸುದ್ದಿಜಾಲ ಧಾರವಾಡ

ರಂಗಭೂಮಿಯು ವ್ಯಕ್ತಿತ್ವದ ಎಲ್ಲ ಅವಶ್ಯಕತೆಗಳನ್ನು ಪೂರೈಸುವ ಒಂದು ಪ್ರಮುಖ ಕಲಾ ಪ್ರಕಾರವಾಗಿದೆ. ಬದುಕಿನ ಆಯಾಮ ಮತ್ತು ಶಿಕ್ಷಣದ ಪರಿಣಾಮಕಾರಿ ಬೋಧನೆ ಮತ್ತು ಪರಿಹಾರಾತ್ಮಕ ಸಮಸ್ಯೆ ಪರಿಹರಿಸಲು ರಂಗಭೂಮಿ ಉತ್ತಮ ಮಾಧ್ಯಮವಾಗಿ ಕಾರ್ಯ ಮಾಡುತ್ತದೆ ಎಂದು ಸಾಹಿತಿ ಮಾರ್ತಾಂಡಪ್ಪ ಕತ್ತಿ ಹೇಳಿದರು.

ನಗರದ ಸಿದ್ದರಾಮೇಶ್ವರ ಶಿಕ್ಷಣ ಕಾಲೇಜಿನಲ್ಲಿ ಏರ್ಪಡಿಸಿದ್ದ ಬಿಎಡ್​ ಪ್ರಶಿಕ್ಷಣಾರ್ಥಿಗಳ ಪಠ್ಯಾಧಾರಿತ ಕಲೆ ಮತ್ತು ನಾಟಕೋತ್ಸವ ಉದ್ಘಾಟಿಸಿ ಅವರು ಮಾತನಾಡಿದರು.

ರಂಗಭೂಮಿಯು ಮಕ್ಕಳ ವ್ಯಕ್ತಿತ್ವದ ವಿಕಸನಕ್ಕೆ ಪೂರಕ ಸಂಪರ್ಕ ಕಲೆಯಾಗಿದೆ. ರಂಗಭೂಮಿ ಹಿನ್ನೆಲೆ ಪ್ರತಿ ಹೆಜ್ಜೆಗೆ ಆಧಾರಸ್ತಂಭವಾಗಿ ನಿಲ್ಲುತ್ತದೆ. ಹಾಗಾಗಿ ಶಿಕ್ಷಕರಾಗುವವರು ರಂಗಭೂಮಿ ಜ್ಞಾನದಿಂದ ಉತ್ತಮ ಶಿಕ್ಷಕರಾಗಬಹುದು ಎಂದರು.

ಅಧ್ಯಕ್ಷತೆ ವಹಿಸಿದ್ದ ಕಾಲೇಜಿನ ಪ್ರಾಚಾರ್ಯೆ ಡಾ. ಗಿರಿಜಾ ಹಿರೇಮಠ ಮಾತನಾಡಿ, ಉತ್ತಮ ಭೋದನೆ ಮಾಡಲು ಪಠ್ಯ ಮತ್ತು ನಾಟಕದ ಪರಿಕಲ್ಪನೆ ಜ್ಞಾನ ಆಳವಾಗಿ ಇದ್ದಾಗ ಮಾತ್ರ ಸಮರ್ಥವಾಗಿ ಮಕ್ಕಳ ಆಳಕ್ಕೆ ಪಾಠ ಮಾಡಲು ಸಹಾಯಕವಾಗುತ್ತದೆ ಎಂದರು.

ಗಾಯಕ ಪ್ರೇಮಾನಂದ ಶಿಂಧೆ ರಂಗಗೀತಗಳನ್ನು ಪ್ರಸ್ತುತಪಡಿಸಿದರು.

ಡಾ. ಕೆ.ಆರ್​ ಹಿರೇಮಠ, ಎಸ್​.ಎಂ. ಕೊಟಬಾಗಿ, ಗಿರಿಜಾ ಸುಂಕದ, ಉಮಾ ಮಠ, ಇತರರು ಇದ್ದರು.

ಜಯಶೀಲಾ ಜೆ.ಎಚ್​ ಸ್ವಾಗತಿಸಿದರು. ಮಧು ಪೂಜಾರಿ ನಿರೂಪಿಸಿದರು. ಸಿದ್ದಮ್ಮ ದೊಡಮನಿ ವಂದಿಸಿದರು.