ಮೈಸೂರು: ರಂಗಭೂಮಿ ಮೂಲಕ ಬದುಕನ್ನು ನೋಡುವ ಹಾಗೂ ಗ್ರಹಿಸುವ ಕಲೆಯನ್ನು ಕಲಿಸುವ ಅವಶ್ಯಕತೆ ಇದೆ ಎಂದು ನಿರಂತರ ಫೌಂಡೇಷನ್‌ನ ರಂಗ ನಿರ್ದೇಶಕ ಪ್ರಸಾದ್ ಕುಂದೂರು ಅಭಿಪ್ರಾಯಪಟ್ಟರು.
ನಿರಂತರ ಫೌಂಡೇಷನ್ ವತಿಯಿಂದ ಮಾನಸಗಂಗೋತ್ರಿಯ ಗಾಂಧಿಭವನದಲ್ಲಿ ಕಾಲೇಜು ವಿದ್ಯಾರ್ಥಿಗಳಿಗೆ ಭಾನುವಾರ ಹಮ್ಮಿಕೊ ಂಡಿದ್ದ ರಂಗ ತರಬೇತಿ ಶಿಬಿರದ ಉದ್ಘಾಟನಾ ಸಮಾರಂಭದಲ್ಲಿ ಮಾತನಾಡಿ, ಅತ್ಯುತ್ತಮ ನಟನಾಗಿ ರೂಪುಗೊಳ್ಳಬಹುದು, ಅತ್ಯುತ್ತಮ ಸಂಗೀತಕಾರ, ಅತ್ಯುತ್ತಮ ಲೇಖಕನಾಗಬಹುದು. ಆದರೆ, ಅತ್ಯುತ್ತಮ ಮನುಷ್ಯನಾಗುವುದು ಬಹಳ ಕಷ್ಟ. ಅದೇ ರೀತಿ ಶ್ರೇಷ್ಠ ಸಾಧನೆ ಮಾಡಬಹುದು. ಆದರೆ, ಶ್ರೇಷ್ಠ ವ್ಯಕ್ತಿಯಾಗುವುದು ಬಹಳ ಮುಖ್ಯ. ಹಾಗಾಗಿ ಬದುಕನ್ನು ನೋಡುವ ಹಾಗೂ ಗ್ರಹಿಸುವ ಕಲೆಯನ್ನು ತಿಳಿದುಕೊಳ್ಳುವುದು ಅವಶ್ಯಕ ಎಂದು ಅಭಿಪ್ರಾಯಪಟ್ಟರು.
ಬದುಕನ್ನು ನೋಡುವ ಹಾಗೂ ಗ್ರಹಿಸುವ ರೀತಿಯಲ್ಲಿಯೇ ನಾಟಕವನ್ನು ನೋಡುವ ಹಾಗೂ ಗ್ರಹಿಸುವ ಕಲೆಯನ್ನು ಸಹ ಕಲಿಯುವ ಅವಶ್ಯಕತೆ ಇದೆ. ಅನೇಕ ಶ್ರೇಷ್ಠ ನಾಟಕಗಳನ್ನು ಗ್ರಹಿಸುವಲ್ಲಿ ಅನೇಕರು ವಿಫಲರಾಗುತ್ತಾರೆ. ಕೆಲವೇ ಕೆಲವು ಜನರು ಮಾತ್ರ ಸರಿಯಾಗಿ ಗ್ರಹಿಸುತ್ತಾರೆ ಎಂದು ಹೇಳಿದರು.
ಹಿರಿಯ ರಂಗನಿರ್ದೇಶಕ ಪ್ರೊ.ಎಚ್.ಎಸ್. ಉಮೇಶ್ ಮಾತನಾಡಿ, ಗಾಂಧೀಜಿ ಅವರಂತೆ ಸರಳವಾಗಿ ಬದುಕುವುದು ಸುಲಭದ ಮಾತಲ್ಲ. ಸರಳವಾಗುವುದೇ ಸಂಕೀರ್ಣ ವಿಚಾರ. ಸರಳತೆಯ ಕಡೆಗೆ ಸಾಗಲು ರಂಗಭೂಮಿ ಒಂದು ಮಾರ್ಗವಾಗಿದೆ. ನಮ್ಮನ್ನು ನಾವು ಅರ್ಥ ಮಾಡಿಕೊಳ್ಳಲು ರಂಗಭೂಮಿ ಸಹಕಾರಿಯಾಗಿದೆ. ನಮ್ಮನ್ನು ನಾವು ಅರ್ಥ ಮಾಡಿಕೊಳ್ಳಲು ಆಗದೆ ಇದ್ದರೆ ಬೇರೊಬ್ಬರನ್ನು ಹಾಗೂ ಸಮಾಜವನ್ನು ಅರ್ಥ ಮಾಡಿಕೊಳ್ಳಲು ಸಾಧ್ಯವಿಲ್ಲ ಎಂದು ಅಭಿಪ್ರಾಯಪಟ್ಟರು.
ಲೇಖಕ ನಾ. ದಿವಾಕರ್ ಮಾತನಾಡಿ, ಕಾರ್ಪೋರೇಟ್ ಸಂಸ್ಕೃತಿಯ ಯುಗದಲ್ಲಿ ನಾವು ಇಂದು ಇದ್ದೇವೆ. ಕಾರ್ಪೋರೇಟ್ ಪ್ರಾಯೋಜಿತ ನಾಟಕಗಳು ಎಲ್ಲಿ ರಂಗಭೂಮಿಯನ್ನು ಆವರಿಸಿಕೊಂಡು ಬಿಡುತ್ತದೆಯೋ ಎಂಬ ಆತಂಕ ಇದೆ. ಆದರೆ, ಸದ್ಯದ ಪರಿಸ್ಥಿತಿಯಲ್ಲಿ ಅಂತಹ ವಾತಾವರಣ ಇಲ್ಲ, ಮುಂದೆಯೂ ಅಂತಹ ವಾತಾವರಣ ನಿರ್ಮಾಣ ಆಗದೆ ಇರಲಿ. ರಂಗಭೂಮಿ ತನ್ನದೇ ಆದ ಸಾಂಸ್ಕೃತಿಕ ಸ್ವಾಯತತ್ತೆಯನ್ನು ಉಳಿಸಿಕೊಂಡಿದ್ದು, ಆ ಸ್ವಾಯತತ್ತೆ ಮುಂದೆಯೂ ಉಳಿಯಬೇಕಾಗಿದೆ ಎಂದು ಹೇಳಿದರು.