ಮಳವಳ್ಳಿ ಪಟ್ಟಣದ ಅಂಬೇಡ್ಕರ್ ಭವನದಲ್ಲಿ ರಂಗಬಂಡಿ ಟ್ರಸ್ಟ್ ವತಿಯಿಂದ ಸೋಮವಾರ ಮಳವಳ್ಳಿ ಸುಂದರಮ್ಮ ಸ್ಮರಣಾರ್ಥ ಹಮ್ಮಿಕೊಂಡಿದ್ದ ರಂಗೋತ್ಸವ ಕಾರ್ಯಕ್ರಮದಲ್ಲಿ ಸುಂದರಮ್ಮ ಭಾವಚಿತ್ರಕ್ಕೆ ಚಿತ್ರನಟಿ ಉಮಾಶ್ರೀ ಪುಷ್ಪಾರ್ಚನೆ ಮಾಡಿ ಚಾಲನೆ ನೀಡಿದರು. ಬಿ.ಎಸ್. ಶಿವಣ್ಣ, ಶ್ರೀನಿವಾಸ ಜಿ.ಕಪ್ಪಣ್ಣ, ಲೋಕೇಶ್, ಭರತ್ ರಾಜ್, ಹತಾವುಲ್ಲಸಾಬ್ ಇದ್ದರು. 
ಜಿಲ್ಲೆ

ರಂಗಭೂಮಿ ಉಳಿವು ಎಲ್ಲರ ಜವಾಬ್ದಾರಿ

ಲೋಕೇಶ್ ಮನು. ಡಿ

ಮಳವಳ್ಳಿ: ರಂಗಭೂಮಿಯ ನಟನೆಯಿಂದ ಸಿನಿಮಾ ಹಾಗೂ ಟಿವಿ ಮಾಧ್ಯಮದ ಧಾರಾವಾಹಿ ಕ್ಷೇತ್ರಗಳು ಬೆಳೆದು ಬಂದಿದ್ದು, ಕಲೆಯ ಮೂಲವಾಗಿರುವ ರಂಗಭೂಮಿಯನ್ನೂ, ಕಲೆಯನ್ನೂ ಉಳಿಸಿ ಬೆಳೆಸುವ ಜವಾಬ್ದಾರಿ ಕಲಾವಿದರು ಮತ್ತು ಕಲಾ ಪೋಷಕರ ಮೇಲಿದೆ ಎಂದು ಮಾಜಿ ಸಚಿವೆ, ಚಿತ್ರನಟಿ ಉಮಾಶ್ರೀ ಅಭಿಪ್ರಾಯಪಟ್ಟರು.


ಪಟ್ಟಣದ ಅಂಬೇಡ್ಕರ್ ಭವನದಲ್ಲಿ ರಂಗಬಂಡಿ ಟ್ರಸ್ಟ್ ವತಿಯಿಂದ ಹಮ್ಮಿಕೊಂಡಿದ್ದ ಮಳವಳ್ಳಿ ಸುಂದರಮ್ಮ ಸ್ಮರಣಾರ್ಥ ರಂಗೋತ್ಸವ ಕಾರ್ಯಕ್ರಮದಲ್ಲಿ ರಂಗ ಸನ್ಮಾನ ಸ್ವೀಕರಿಸಿ ಮಾತನಾಡಿ, ಮಳವಳ್ಳಿ ಸುಂದರಮ್ಮ ಅವರು ರಂಗಭೂಮಿ ಮತ್ತು ಸಿನಿಮಾಗಳಲ್ಲಿ ಅಭಿನಯಿಸುವ ಮೂಲಕ ರಂಗನಟಿಯಾಗಿ ತಮ್ಮ ಚಾಪು ಮೂಡಿಸಿದ್ದರು. ಇಂತಹ ಕಲಾವಿದೆ ಜನ್ಮತಳೆದು ಮಳವಳ್ಳಿಗೆ ಕಳಸಪ್ರಾಯರಾಗಿದ್ದಾರೆ ಎಂದರು.
ಪವಾಡ ಪುರುಷರಾದ ಮಂಟೇಸ್ವಾಮಿ, ಸಿದ್ದಪ್ಪಾಜಿ, ಮಹದೇಶ್ವರರು ನಡೆದಾಡಿದ ನಾಡಾಗಿದ್ದು, ಇಂತಹ ಮಹಾಪುರುಷರ ಬಹಳಷ್ಟು ಭಕ್ತಸಮೂಹ ರಂಗಕಲೆಯನ್ನು ಗೌರವಿಸುವ ಜತೆಗೆ ಚಿತ್ರರಂಗದಲ್ಲಿ ಕಲಾವಿದರಿದ್ದಾರೆಂದು ತಿಳಿಸಿದರು.


ಡಾ. ರಾಮನೋಹರ ಲೋಹಿಯಾ ವಿಚಾರ ವೇದಿಕೆ ಅಧ್ಯಕ್ಷ ಬಿ.ಎಸ್.ಶಿವಣ್ಣ ಕಾರ್ಯಕ್ರಮದ ಉದ್ಘಾಟನೆ ಮಾಡಿದರು. ರಂಗ ಕರ್ಮಿಗಳಾದ ಶ್ರೀನಿವಾಸ ಜಿ.ಕಪ್ಪಣ್ಣ, ಲೋಕೇಶ್, ರಂಗ ಬಂಡಿಯ ಸಂಚಾಲಕ ಮಧು, ತಾಲೂಕು ಸಂಘಟಕ ಎನ್.ಎಲ್.ಭರತ್ ರಾಜು, ನಿವೃತ್ತ ಪ್ರಾಂಶುಪಾಲ ಹತಾವುಲ್ಲಾ ಸಾಬ್ ಇದ್ದರು.

ವೇದಿಕೆ ಕಾರ್ಯಕ್ರಮದ ನಂತರ ವೈ.ಎಸ್.ಪುಟ್ಟಣ್ಣಯ್ಯ ಮತ್ತು ತಂಡದವರಿಂದ ಸುಂದರಮ್ಮ ಅಭಿನಯದ ರಂಗ ಗೀತೆ ಹಾಗೂ ಅನುರಕ್ತೆ ನಾಟಕದ ಏಕವ್ಯಕ್ತಿ ಪ್ರದರ್ಶನವನ್ನು ಚಿತ್ರನಟಿ ಉಮಾಶ್ರೀ, ಮಧು ನಡೆಸಿಕೊಟ್ಟರು.