ಸಿರಿಗೇರಿ: ರಂಗ ತರಬೇತಿ ಶಿಬಿರಗಳಿಂದ ಹಳ್ಳಿ ಮಕ್ಕಳಲ್ಲಿ ಗ್ರಾಮೀಣ ಕಲೆ, ರಂಗಭೂಮಿ ಬಗ್ಗೆ ಆಸಕ್ತಿ ಮೂಡಲು ಸಾಧ್ಯ ಎಂದು ಜೆ.ಎಚ್.ವಿ ಶಾಲೆಯ ಆಡಳಿತಾಧಿಕಾರಿ ಶಿವಲೀಲಾ ಹೇಳಿದರು.
ಗ್ರಾಮದಲ್ಲಿ ಧಾತ್ರಿ ರಂಗ ಸಂಸ್ಥೆ ಮತ್ತು ಕನ್ನಡ ಮತ್ತು ಸಂಸ್ಕೃತಿ ಇಲಾಖೆಯಿಂದ ಆಯೋಜಿಸಿದ್ದ 25 ದಿನಗಳ ಬಯಲು ಸೀಮೆಯ ಮಕ್ಕಳ ರಂಗ ತರಬೇತಿ ಶಿಬಿರದ ಸಮಾರೋಪ ಕಾರ್ಯಕ್ರಮದಲ್ಲಿ ಮಾತನಾಡಿದರು. ಪ್ರತಿಭೆ ಪ್ರದರ್ಶನಕ್ಕೆ ಹಾಗೂ ಕಲಿಯಲು ರಂಗ ತರಬೇತಿ ಶಿಬಿರ ಸೂಕ್ತವಾದ ವೇದಿಕೆಯಾಗಿದೆ. ಗ್ರಾಮೀಣ ಭಾಗದಲ್ಲಿ ಶಿಬಿರ ಆಯೋಜಿಸುತ್ತಿರುವ ಧಾತ್ರಿ ರಂಗ ಸಂಸ್ಥೆ ಕಾರ್ಯ ಶ್ಲಾಘನೀಯ ಎಂದರು.
ತರಬೇತಿ ಪಡೆದ ವಿದ್ಯಾರ್ಥಿಗಳಿಂದ ಡೊಳ್ಳು ಕುಣಿತ, ಕಂಸಾಳೆ, ರಂಗಗೀತೆಗಳು, ತಮಟೆವಾದನ, ನಾಟಕಗಳು ಪ್ರದರ್ಶನಗೊಂಡವು. ಧಾತ್ರಿ ರಂಗ ಸಂಸ್ಥೆ ಅಧ್ಯಕ್ಷ ಎಂ.ಪಂಪನಗೌಡ, ಹಿರಿಯ ಕಲಾವಿದರಾದ ಏಳುಬೆಂಚಿ ತಿಪ್ಪಣ್ಣ, ಎ.ಪಿ.ಹನುಮೇಶ್, ಎಂ.ಮಂಜುನಾಥ್ ಗೌಡ, ರಾಂಪುರದ ವೀರೇಶ್ ಸ್ವಾಮಿ, ಪೇದೆ ರಂಗಪ್ಪ ಇತರರಿದ್ದರು.