ಮೈಸೂರು: ಮಕ್ಕಳ ಮನಸ್ಸು ವಿಕಸಗೊಳ್ಳಲು ರಂಗಭೂಮಿಯ ಅವಶ್ಯಕತೆ ಇರುವ ಹಿನ್ನೆಲೆಯಲ್ಲಿ ಸ್ವೀಡನ್‌ನಲ್ಲಿ ಶೈಕ್ಷಣಿಕ ರಂಗಭೂಮಿ ಚಟು ವಟಿಕೆಗೆ ಹೆಚ್ಚಿನ ಒತ್ತು ನೀಡಲಾಗುತ್ತಿದ್ದು, ಅಂತಹ ಒಂದು ವಾತಾವರಣ ನಮ್ಮ ದೇಶದಲ್ಲಿ ನಿರ್ಮಾಣ ಮಾಡಬೇಕು ಎಂದು ಭಾರತೀಯ ಶೈಕ್ಷಣಿಕ ರಂಗಭೂಮಿ ಸಂಸ್ಥೆ ನಿರ್ದೇಶಕ ಪ್ರಸನ್ನ ಹೇಳಿದರು.
ನಗರದ ಹಾರ್ಡ್ವಿಕ್ ಸ್ವತಂತ್ರ ಪದವಿ ಪೂರ್ವ ಕಾಲೇಜಿನಲ್ಲಿ ಗುರುವಾರ ಹಮ್ಮಿಕೊಂಡಿದ್ದ ಹಾರ್ಡ್ವಿಕ್ ಶಿಕ್ಷಣ ಸಂಸ್ಥೆಗಳ ಶೈಕ್ಷಣಿಕ ರಂಗಭೂಮಿ ಚಟುವಟಿಕೆಯ ಉದ್ಘಾಟನಾ ಸಮಾರಂಭದಲ್ಲಿ ಮಾತನಾಡಿ, ಸ್ವೀಡನ್ ದೇಶ ಶೈಕ್ಷಣಿಕ ರಂಗಭೂಮಿಗೆ ಹೆಚ್ಚಿನ ಒತ್ತು ನೀಡಿದೆ. ಆ ದೇಶದಲ್ಲಿ ನಡೆಯುವ ಯಾವುದೇ ಸಾಂಸ್ಕೃತಿಕ ಕಾರ್ಯಕ್ರಮಕ್ಕೆ ಸರ್ಕಾರದ ಅನುದಾನ ಬಯಿಸಿದರೆ ಅಂತಹ ಸಂಸ್ಥೆ ಶೈಕ್ಷಣಿಕ ರಂಗಭೂಮಿ ಚಟುವಟಿಕೆಯನ್ನು ಕಡ್ಡಾಯವಾಗಿ ನಡೆಸುತ್ತಿರಬೇಕು. ಶೈಕ್ಷಣಿಕ ರಂಗಭೂಮಿ ಚಟುವಟಿಕೆ ಕೈಗೊಳ್ಳುವ ಸಂಸ್ಥೆಗೆ ಮಾತ್ರ ಅನುದಾನ ದೊರೆಯುತ್ತದೆ. ಆದರೆ, ನಮ್ಮ ದೇಶದಲ್ಲಿ ಶಿಕ್ಷಣ ಎಂಬುದು ಕೇವಲ ಬೌದ್ಧಿಕ ಕಲಿಕೆಗೆ ಮಾತ್ರ ಸೀಮಿತವಾಗಿದ್ದು, ಮಕ್ಕಳಲ್ಲಿ ಖಿನ್ನತೆಗೆ ಕಾರಣವಾಗುತ್ತಿದೆ. ಈ ಹಿಂದೆ ನಮ್ಮ ಶಾಲೆಗಳಲ್ಲಿ ಸಾಂಸ್ಕೃತಿಕ ಚಟುವಟಿಕೆ ತುಂಬಾ ಉತ್ತಮವಾಗಿತ್ತು. ಆದರೆ, ಇದೀಗ ಬೌದ್ಧಿಕ ಕಲಿಕೆಗೆ ಮಾತ್ರ ಒತ್ತು ನೀಡುತ್ತಿರುವುದು ಬೇಸರದ ಸಂಗತಿ ಎಂದರು.
ಮಂಗಳೂರಿನ ಸಿಎಸ್‌ಐ ಕೆಎಸ್‌ಡಿ ಬಲ್ಮಠದ ಬಿಷಪ್ ರೆವರೆಂಡ್ ಹೇಮಚಂದ್ರ ಅಯ್ಯ, ರಂಗಕರ್ಮಿ ಡಾ.ಎಚ್.ಎಸ್. ಉಮೇಶ್, ಹಾರ್ಡ್ವಿಕ್ ಸ್ವತಂತ್ರ ಪದವಿ ಪೂರ್ವ ಕಾಲೇಜು ಪ್ರಾಂಶುಪಾಲ ಸುಂದರೇಶ್ ದೇವಪ್ರಿಯಂ, ಹಾರ್ಡ್ವಿಕ್ ಪ್ರೌಢ ಶಾಲೆಯ ಮುಖ್ಯೋಪಾಧ್ಯಾಯ ಗುರುಭಕ್ತಯ್ಯ ಹಾಗೂ ಇತರರು ಇದ್ದರು.