ಜಿಲ್ಲೆ

ಜೀವನ ಕಲಿಸುವ ಪಾಠಶಾಲೆ ರಂಗಭೂಮಿ

ಮಂಜುನಾಥ ತಿಮ್ಮಯ್ಯ

ಮೈಸೂರು: ರಂಗಭೂಮಿ ಜೀವನವನ್ನು ಕಲಿಸುವ ಅಪರೂಪದ ಪಾಠಶಾಲೆಯಾಗಿದೆ ಎಂದು ರಂಗಕರ್ಮಿ, ಕಲಾವಿದ ಯತೀಶ್ ಎನ್. ಕೊಳ್ಳೇಗಾಲ ಹೇಳಿದರು.


ನಗರದ ಎಸ್.ಬಿ.ಆರ್.ಆರ್. ಮಹಾಜನ ಪ್ರಥಮ ದರ್ಜೆ ಕಾಲೇಜಿನಲ್ಲಿ ಸೋಮವಾರ ಆಯೋಜಿಸಿದ್ದ ‘ರಂಗಭೂಮಿ ಒಳನೋಟ’ ಸಂವಾದ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು.


ನಾಟಕವು ಒಂದು ಕಾರ್ಯಕ್ರಮದಂತೆ. ಅದನ್ನು ಯಶಸ್ವಿಗೊಳಿಸುವಲ್ಲಿ ನಮ್ಮೆಲ್ಲರ ವೈಯಕ್ತಿಕ ಆಸೆ-ಆಕಾಂಕ್ಷೆಗಳನ್ನು ಬದಿಗಿರಿಸಿ ದುಡಿಯಬೇಕು. ಒಂದು ನಾಟಕದ ಯಶಸ್ಸು ಇಡೀ ತಂಡದ ವಿಜಯವಾಗಿ ಕಾಣುತ್ತದೆ ಎಂದು ಹೇಳಿದರು.


ಒಂದು ಗುಂಪಿನೊಂದಿಗೆ ಬೆರೆಯುವ ಕಲೆಯನ್ನು ನಾಟಕ ಕಲಿಸುತ್ತದೆ. ಎಲ್ಲರನ್ನು ಬಿಟ್ಟು ಏಕಾಂಗಿತನದಲ್ಲಿ ಬದುಕುತ್ತಿರುವ ಮನುಷ್ಯನಿಗೆ, ರಂಗಭೂಮಿ ಕೂಡಿ ಬದುಕುವ ಕಲೆಯನ್ನು ಕಲಿಸಿಕೊಡುತ್ತದೆ. ತಂಡ ಎಷ್ಟು ಸದೃಢವಾಗುತ್ತದೆಯೋ, ನಾಟಕವೂ ಅಷ್ಟು ಪರಿಣಾಮಕಾರಿಯಾಗಿ ರಂಗದ ಮೇಲೆ ಪ್ರದರ್ಶಿತವಾಗುತ್ತದೆ ಎಂದು ಅಭಿಪ್ರಾಯಿಸಿದರು.


ರಂಗಭೂಮಿ ನಮಗೆ ಧೈರ್ಯ ಹಾಗೂ ಶಿಸ್ತನ್ನು ಕಲಿಸುತ್ತದೆ. ಜೀವನದಲ್ಲಿ ಎಲ್ಲವನ್ನು ಹಾಗೂ ಎಲ್ಲರನ್ನು ಅರ್ಥ ಮಾಡಿಕೊಳ್ಳುವ ಸಾಮರ್ಥ್ಯವನ್ನು ರಂಗಭೂಮಿ ಕಲಿಸಿಕೊಟ್ಟಿದೆ. ರಂಗಭೂಮಿ ಒಂದು ಸಾಮುದಾಯೀಕ ಕಲೆ. ಅದು ಮನುಷ್ಯನ ಪರಿಶ್ರಮ ಹಾಗೂ ಶಿಸ್ತು ಬಯಸುತ್ತದೆ. ರಂಗಭೂಮಿ ಒಂದು ಅದ್ಭುತ ವ್ಯಕ್ತಿತ್ವವನ್ನು ನಿರ್ಮಾಣ ಮಾಡುವ ವಲಯವಾಗಿದೆ ಎಂದು ಹೇಳಿದರು.


ರಂಗಭೂಮಿ ಬದುಕುವ ಶೈಲಿಯನ್ನು ನಿರ್ಮಾಣ ಮಾಡಿಕೊಡುತ್ತದೆ. ನಾಟಕದ ಚಟುವಟಿಕೆಗಳಲ್ಲಿ ನಮ್ಮನ್ನು ನಾವು ತೊಡಗಿಸಿಕೊಂಡಾಗ ನಾವು ಜೀವನಶೈಲಿಯನ್ನು ರೂಢಿಸಿಕೊಳ್ಳುತ್ತವೆ. ರಂಗಭೂಮಿ ಒಂದು ವ್ಯಕ್ತಿತ್ವ ನಿರ್ಮಾಣದ ಶಿಬಿರವಾಗಿಯೂ ಇಂದು ಬಳಕೆಯಾಗುತ್ತಿದೆ ಎಂದರು.


ನಿರಂತರ ಅಧ್ಯಯನದ ಕ್ರಮವನ್ನು ರಂಗಭೂಮಿ ನಮಗೆ ಕಲಿಸುತ್ತದೆ. ನನಗೆ ಜೀವನದ ಪ್ರೀತಿಯನ್ನು ಕಲಿಸಿಕೊಟ್ಟಿದೆ. ಮನುಷ್ಯನ ಭಾವನೆಗಳನ್ನು ನಿರ್ಧರಿಸಿ ಅವುಗಳಿಗೆ ಸ್ಪಂದಿಸುವ ಅಭಿವ್ಯಕ್ತಿಯನ್ನು ನಮಗೆ ಕಲಿಸಿಕೊಟ್ಟಿದೆ. ರಂಗಭೂಮಿ ಭಾವನೆಗಳಿಗೆ ಸ್ಪಂದಿಸುವ ಸುಂದರ ವಲಯ ಎಂದು ಅಭಿಪ್ರಾಯಪಟ್ಟರು.
ಜಗತ್ತಿನಲ್ಲಿ ಜನಿಸಿದ ಪ್ರತಿಯೊಂದು ಜೀವಿಗೂ ಭಾವನೆ, ಅಭಿವ್ಯಕ್ತಿಸುವ ಹಾಗೂ ಅರ್ಥ ಮಾಡಿಸುವ ಸಾಮರ್ಥ್ಯ ಇರುತ್ತದೆ. ಮನುಷ್ಯ ಎಲ್ಲ ಪ್ರಾಣಿಗಳಿಗಿಂತಲೂ ಭಿನ್ನವಾಗಿದ್ದಾನೆ. ಭಾವನೆಗಳನ್ನು ಅಭಿವ್ಯಕ್ತಿಸುವಲ್ಲಿ ಹಾಗೂ ಅದನ್ನು ಅರ್ಥ ಮಾಡಿಕೊಳ್ಳುವಲ್ಲಿ ಉನ್ನತ ಸ್ಥಾನದಲ್ಲಿ ನಿಲ್ಲುತ್ತಾನೆ ಎಂದು ಹೇಳಿದರು.


ರಂಗಭೂಮಿ ಒಂದು ಅನುಕರಣ ಮಾಧ್ಯಮ, ಮತ್ತೊಂದು ಸಾಮಾಜಿಕ ಅಂತರ್ಯದ ಅಭಿವ್ಯಕ್ತಿ . ನಟನೆ ಎಂಬುದು ಒಂದು ಅದ್ಭುತ ಕಲೆ. ಎಲ್ಲರಿಗೂ ಅದು ಒಲಿಯುವುದಿಲ್ಲ. ಪಾತ್ರದ ನೈಜತೆಯನ್ನು ಅರಿತುಕೊಂಡವರು, ಅದ್ಭುತವಾದ ನಟನೆಯನ್ನು ಮಾಡಲು ಸಾಧ್ಯ ಎಂದರು.


ಕಾರ್ಯಕ್ರಮದಲ್ಲಿ ಪ್ರಾಂಶುಪಾಲೆ ಡಾ.ಬಿ.ಆರ್. ಜಯಕುಮಾರಿ, ಕನ್ನಡ ವಿಭಾಗದ ಮುಖ್ಯಸ್ಥ ಡಾ.ಎಚ್.ಆರ್. ತಿಮ್ಮೇಗೌಡ, ಸಹಾಯಕ ಪ್ರಾಧ್ಯಾಪಕರಾದ ಜೆ.ಮನೋಜ್ ಕುಮಾರ್, ಸಿ.ಎಂ.ಕಿರಣ್‌ಕುಮಾರ್, ಪ್ರತಿಭಾ ವೇದಿಕೆ ಸಂಚಾಲಕ ಎಂ. ನಾಗೇಶ್, ಕಾಲೇಜಿನ ಸಾರಂತ ತಂಡದ ಸಂಚಾಲಕ ರಾಧೇಶ್ ಉಪಸ್ಥಿತರಿದ್ದರು.