ವಿಜಯವಾಣಿ ಸುದ್ದಿಜಾಲ ಧಾರವಾಡ
ಕನ್ನಡ ರಂಗಭೂಮಿಗೆ ಶ್ರೀಮಂತ ಪರಂಪರೆ ಇದ್ದು, ಸಮಾಜದ ಆಮೂಲಾಗ್ರ ಬದಲಾವಣೆ ತರುವ ಶಕ್ತಿ ರಂಗಭೂಮಿಗಿದೆ. ರಂಗಭೂಮಿ ಒಂದು ಜೀವಂತ ಕಲೆಯಾಗಿದೆ ಎಂದು ಸಾಹಿತಿ ಪದ್ಮಜಾ ಉಮರ್ಜಿ ಅಭಿಪ್ರಾಯಪಟ್ಟರು.
ನಗರದ ಕರ್ನಾಟಕ ವಿದ್ಯಾವರ್ಧಕ ಸಂಘವು ನಿರ್ಮಲಾ ಶಶಿಧರ ಪಾಟೀಲ ದತ್ತಿ ನಿಮಿತ್ತ ಕಲಾಸ್ಪರ್ಶ ಸಾಂಸ್ಕೃತಿಕ, ಧಾರವಾಡ ಕಲಾವಿದರಿಂದ ಶನಿವಾರ ಆಯೋಜಿಸಿದ್ದ ಏಕಪಾತ್ರಾಭಿನಯ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು.
ನಿರ್ಮಲಾ ಪಾಟೀಲ ಅವರಿಗೆ ಯಾವುದೇ ಪಾತ್ರ ನೀಡಿದರೂ ಅದಕ್ಕೆ ಜೀವ ತುಂಬುವ ಕಲೆ ಕರಗತ ಮಾಡಿಕೊಂಡಿದ್ದರು. ಕುಟುಂಬಸ್ಥರ ಸಹಕಾರದಿಂದ ಶ್ರೇಷ್ಠ ಅಭಿನೇತ್ರಿಯಾಗಲು ಸಾಧ್ಯವಾಯಿತು. ಅವರ ಮನೋ ಅಭಿನಯ ಜನಮಾನಸದಲ್ಲಿ ಇನ್ನೂ ಬೆಳಗಬೇಕಾಗಿತ್ತು. ಸಣ್ಣ ವಯಸ್ಸಿನಲ್ಲೇ ಅಗಲಿದ್ದು ಕಲಾ ಲೋಕಕ್ಕೆ ನಷ್ಟವಾಗಿದೆ ಎಂದರು.
ಅಧ್ಯಕ್ಪತೆ ವಹಿಸಿದ್ದ ಸಂಘದ ಪ್ರಧಾನ ಕಾರ್ಯದರ್ಶಿ ಶಂಕರ ಹಲಗತ್ತಿ ಮಾತನಾಡಿ, ಕನ್ನಡ ರಂಗಭೂಮಿ ಕಲಾವಿದರು ನಮ್ಮ ಸಾಂಸ್ಕೃತಿಕ ಪರಂಪರೆಯ ವಾರಸುದಾರರು. ನಿರ್ಮಲಾ ಪಾಟೀಲ ದಂಪತಿಗೆ ಕಲೆಯೇ ಸರ್ವಸ್ವವಾಗಿತ್ತು. ಕಲಾವಿದರು ಯಾವುದೋ ಒತ್ತಡಕ್ಕೆ ಸಿಲುಕಿ ದುರ್ವೆಸನಕ್ಕೆ ಬಲಿಯಾಗದೆ ಕಲೆಯೊಂದಿಗೆ ತಮ್ಮ ಆರೋಗ್ಯ ಪೋಷಿಸಿಕೊಳ್ಳಬೇಕು ಎಂದರು.
ಕಲಾಸ್ಪರ್ಶ ಸಾಂಸ್ಕೃತಿಕ ಸಂಘದ ದಿಗಂತ ತುಂಬರಗುದ್ದಿ, ತುಳಸಿ ಮೋಖಾಸಿ, ಸುಮಿತ ಭಜಂತ್ರಿ, ನಿರಂಜನ ತೋರಣಗಟ್ಟಿ, ಶ್ರೀವತ್ಸ, ಇತರರು ಸಮಾಜದ ಜ್ವಲಂತ ಸಮಸ್ಯೆಗಳ ಕುರಿತು ಏಕಪಾತ್ರಾಭಿನಯ ಪ್ರದರ್ಶಿಸಿದರು.
ಶಂಕರ ಕುಂಬಿ, ಬಿ.ಐ. ಈಳಿಗೇರ, ಎಸ್.ಕೆ. ಕುಂದರಗಿ, ಕೆ.ಎಂ. ಅಂಗಡಿ, ಮಹಾಂತೇಶ ನರೇಗಲ್, ವಿ.ಬಿ. ಸಂತೋಜಿ, ಮಹಾಂತೇಶ ಪಾಟೀಲ, ಚನ್ನಮ್ಮ ಪಾಟೀಲ, ಎಂ.ಬಿ. ಹೆಗ್ಗಾರ, ಸಿಕಂದರ ದಂಡಿನ, ಇತರರು ಇದ್ದರು.
ವೀರಣ್ಣ ಒಡ್ಡೀನ ಸ್ವಾಗತಿಸಿದರು. ಸತೀಶ ತುರಮರಿ ಪ್ರಾಸ್ತಾವಿಕವಾಗಿ ಮಾತನಾಡಿದರು.