ಹುಬ್ಬಳ್ಳಿ: ಯುವತಿಯರ ಕುರಿತು ಅವಹೇಳನವಾಗಿ ಪೋಸ್ಟ್ ಮಾಡಿದ ಆರೋಪದಡಿ ನಗರದ ಪಿಯು ಕಾಲೇಜ್ವೊಂದರ ಹಳೆಯ ವಿದ್ಯಾರ್ಥಿಯೊಬ್ಬನನ್ನು ಪೊಲೀಸರು ವಶಕ್ಕೆ ಪಡೆದು ವಿಚಾರಣೆ ನಡೆಸಿದ್ದಾರೆ.
ಬಂಧಿತ 21 ವರ್ಷದ ವಿದ್ಯಾರ್ಥಿಯಾಗಿದ್ದು, ಈತನ ಹಿಂದೆ ಇನ್ನೂ ಕೆಲವರು ಇದ್ದಾರೆ ಎಂದು ಪೊಲೀಸರು ಸಂಶಯ ವ್ಯಕ್ತಪಡಿಸಿದ್ದಾರೆ.
ಈಗಾಗಲೇ ಆತನಿಗೆ ವಿವಿಧ ರೀತಿಯಲ್ಲಿ ವಿಚಾರಣೆ ನಡೆಸುತ್ತಿದ್ದು, ಯಾವುದೇ ರೀತಿಯಲ್ಲಿಯೂ ಬಾಯಿಬಿಡುತ್ತಿಲ್ಲ. ತನಿಖೆ ಮತ್ತಷ್ಟು ಚುರುಕುಗೊಳಿಸಲಾಗುವುದು. ನಂತರ ಬಾಯಿಬಿಡಬಹುದು ಎಂದು ಹು-ಧಾ ಪೊಲೀಸ್ ಆಯುಕ್ತ ಕೆ. ಸಂತೋಷಬಾಬು ‘ವಿಜಯವಾಣಿ’ಗೆ ತಿಳಿಸಿದ್ದಾರೆ.
ಏನಾಗಿತ್ತು ಘಟನೆ?: ಯುವತಿಯರ ಕುರಿತು ಅಶ್ಲೀಲವಾಗಿ ಫೋಟೋ ಎಡಿಟ್ ಮಾಡಿ ಪೋಸ್ಟ್ ಮಾಡಿದ್ದ ಯುವಕನೊಬ್ಬ, ದಮ್ ಇದ್ದರೆ ನನ್ನನ್ನು ಹಿಡಿಯಿರಿ ಎಂದು ಪೊಲೀಸರಿಗೆ ಚಾಲೆಂಜ್ ಮಾಡಿದ್ದ.
ಮುಸ್ಲಿಂ ಯುವಕನ ಹೆಸರಿನಲ್ಲಿರುವ ಇನ್ಸ್ಟಾಗ್ರಾಂ ಅಕೌಂಟ್ನಲ್ಲಿ ಇದು ಪೋಸ್ಟ್ ಆಗಿತ್ತು.
ಪೋಸ್ಟ್ ವೈರಲ್ ಆಗುತ್ತಿದ್ದಂತೆ ಪೊಲೀಸರು ಹೈ ಅಲರ್ಟ್ ಆಗಿದ್ದರು. ಈಗ ಪೋಸ್ಟ್ ಮಾಡಿರುವ ಯುವಕನನ್ನು ವಶಕ್ಕೆ ಪಡೆದು ವಿಚಾರಣೆ ನಡೆಸಲಾರಂಭಿಸಿದ್ದಾರೆ.