ಶಿವಮೊಗ್ಗ: ಭದ್ರಾವತಿ ತಾಲೂಕಿನ ಎರೆಹಳ್ಳಿ ಗ್ರಾಪಂ ವ್ಯಾಪ್ತಿಯ ಉಕ್ಕುಂದ ಗ್ರಾಮದ ಭದ್ರಾ ಬಲದಂಡೆ ನಾಲೆಗೆ ಹಾರಿ ಪ್ರೇಮಿಗಳಿಬ್ಬರು ಆತ್ಮಹತ್ಯೆಗೆ ಯತ್ನಿಸಿದ್ದ ಪ್ರಕರಣದಲ್ಲಿ ಯುವತಿ ಮೃತದೇಹ ಪತ್ತೆಯಾಗಿದೆ. ಈ ನಡುವೆ ಇದು ಆತ್ಮಹತ್ಯೆಯಲ್ಲ. ನೆರೆಮನೆಯ ಯುವಕನೇ ತನ್ನ ಪುತ್ರಿಯನ್ನು ನಾಲೆಗೆ ತಳ್ಳಿ ಕೊಲೆ ಮಾಡಿದ್ದಾನೆಂದು ಯುವತಿ ಪಾಲಕರು ಪೊಲೀಸರಿಗೆ ದೂರು ನೀಡಿದ್ದಾರೆ.
ಉಕ್ಕುಂದ ಗ್ರಾಮದ ನಿವಾಸಿ 19 ವರ್ಷದ ಮಹಾಲಕ್ಷ್ಮೀ (ಸ್ವಾತಿ) ಮೃತ ಯುವತಿ. ಪ್ರಕರಣಕ್ಕೆ ಸಂಬಂಧಿಸಿದಂತೆ ನೆರೆಮನೆಯ ಯುವಕ ಸೂರ್ಯ (20) ಎಂಬಾತನನ್ನು ಭದ್ರಾವತಿ ಗ್ರಾಮಾಂತರ ಠಾಣೆ ಪೊಲೀಸರು ಬಂಧಿಸಿದ್ದಾರೆ. ಮಹಾಲಕ್ಷ್ಮೀ ಸಹ್ಯಾದ್ರಿ ಕಲಾ ಕಾಲೇಜಿನಲ್ಲಿ ಎರಡನೇ ವರ್ಷದ ಬಿಎ ಓದುತ್ತಿದ್ದಳು. ಸೂರ್ಯ ಎರೆಹಳ್ಳಿ ಗ್ರಾಮದಲ್ಲಿದ್ದರೂ ಬೆಂಗಳೂರಿನಲ್ಲಿ ತಂದೆಯ ವ್ಯವಹಾರ ನೋಡಿಕೊಳ್ಳುತ್ತಿದ್ದ. ಶಿವಮೊಗ್ಗದಲ್ಲಿದ್ದ ಮಹಾಲಕ್ಷ್ಮೀ ಗೌರಿ ಹಬ್ಬಕ್ಕೆಂದು ಮತ್ತು ಬೆಂಗಳೂರಿನಲ್ಲಿದ್ದ ಸೂರ್ಯ ಪಿತೃಪಕ್ಷದ ಪೂಜೆ ನಿಮಿತ್ತ ಅಂತರಗಂಗೆ ಗ್ರಾಮಕ್ಕೆ ಮರಳಿದ್ದರು. ಭಾನುವಾರ ಇಬ್ಬರೂ ಬೈಕ್‌ನಲ್ಲಿ ಭದ್ರಾ ಬಲದಂಡೆ ನಾಲಾ ಬಳಿ ತೆರಳಿ ನೀರಿಗೆ ಹಾರಿದ್ದರು ಎನ್ನಲಾಗಿದ್ದು, ಸೂರ್ಯ ದಡ ಸೇರಿ ಪ್ರಾಣಾಪಾಯದಿಂದ ಪಾರಾಗಿದ್ದ. ಆದರೆ ಮಹಾಲಕ್ಷ್ಮೀ ಮಾತ್ರ ನೀರುಪಾಲಾಗಿದ್ದಳು. ಅಗ್ನಿಶಾಮಕ ದಳದ ಸಿಬ್ಬಂದಿ ಮತ್ತು ಪೊಲೀಸರು ತೀವ್ರ ಹುಡುಕಾಟ ನಡೆಸಿದ್ದು, ಮಂಗಳವಾರ ರಾತ್ರಿ ಕೆಂಚಮ್ಮನಹಳ್ಳಿ ತೊರೆ ಸೇತುವೆಯ ನಾಲೆಯಲ್ಲಿ ಮಹಾಲಕ್ಷ್ಮೀ ಮೃತದೇಹ ಪತ್ತೆಯಾಗಿದೆ. ಬಲವಂತವಾಗಿ ಮಹಾಲಕ್ಷ್ಮೀಯನ್ನು ಬೈಕ್‌ನಲ್ಲಿ ಕರೆದೊಯ್ದು ಮದುವೆಗೆ ಒಪ್ಪದ ಕಾರಣ ಆಕೆಯನ್ನು ಭದ್ರ ನಾಲೆಗೆ ತಳ್ಳಿ ಸೂರ್ಯ ಕೊಲೆ ಮಾಡಿದ್ದಾನೆಂದು ಮಹಾಲಕ್ಷ್ಮೀ ತಾಯಿ ಭದ್ರಾವತಿ ಗ್ರಾಮಾಂತರ ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿದ್ದಾರೆ. ಆಸ್ಪತ್ರೆಗೆ ದಾಖಲಾಗಿದ್ದ ಸೂರ್ಯನನ್ನು ಡಿಸ್ಚಾರ್ಜ್ ಮಾಡಿ ಬುಧವಾರ ಬೆಳಗಿನಜಾವ ಪೊಲೀಸರು ಬಂಧಿಸಿದ್ದಾರೆ.
ಮಹಾಲಕ್ಷ್ಮೀ ಪಾಲಕರು ನೀಡಿದ ದೂರಿನನ್ವಯ ಸೂರ್ಯ ಎಂಬಾತನ ವಿರುದ್ಧ ಕೊಲೆ ಆರೋಪದಡಿ ಕೇಸ್ ದಾಖಲಾಗಿದೆ. ಇರುವೆ ಪುಡಿ ಸೇವಿಸಿ ಆನಂತರ ಆಕೆಯನ್ನು ಬಲವಂತವಾಗಿ ಚಾನಲ್ಗೆ ದೂಡಿದ್ದಾನೆ ಎಂದು ಪಾಲಕರು ದೂರು ಕೊಟ್ಟಿದ್ದಾರೆ. ಪ್ರಕರಣ ಸಂಬಂಧ ಆರೋಪಿ ಸೂರ್ಯನನ್ನು ಬಂಧಿಸಲಾಗಿದೆ. ಆರೋಪಿ ತಂದೆ ಪಾತ್ರವೂ ಇದೆ ಎಂದು ಹೇಳಲಾಗುತ್ತಿದ್ದು, ಈ ಬಗ್ಗೆಯೂ ತನಿಖೆ ಮಾಡಲಾಗುತ್ತಿದೆ. ಹೆಚ್ಚಿನ ಮಾಹಿತಿ ತನಿಖೆ ನಂತರ ಸ್ಪಷ್ಟಗೊಳ್ಳಲಿದೆ. - ಜಿ.ಕೆ.ಮಿಥುನ್‌ಕುಮಾರ್, ಎಸ್‌ಪಿ