ಜಿಲ್ಲೆ

ಪ್ರಪಂಚದ ಅತ್ಯಂತ ಶಕ್ತಿಯುತ ಭಾಷೆ ಕನ್ನಡ - ಪ್ರೊ.ಕೃಷ್ಣೇಗೌಡ

ಧರ್ಮರಾಜ ರಾಮನಗೌಡ ಪಾಟೀಲ

ಬೆಳಗಾವಿ: ಪ್ರಪಂಚದ ಅತ್ಯಂತ ಶಕ್ತಿಯುತ ಹಾಗೂ ಅದ್ಭುತ್ ಅರಿವಿನ ಭಾಷೆ ಎಂದರೆ ಅದು ಕನ್ನಡ ಎಂದು ಪ್ರೊ.ಕೃಷ್ಣೇಗೌಡ ಹೇಳಿದರು.

ನಗರದ ತೇಜೋಮಯ ಮತ್ತು ಹಾಸ್ಯಕೂಟ ಸಂಘಟನೆಯಿಂದ ಕೋನವಾಳ ಬೀದಿಯಲ್ಲಿರುವ ಲೋಕಮಾನ್ಯ ರಂಗಮಂದಿರದಲ್ಲಿ ಶನಿವಾರ ಹಾಸ್ಯಸಂಜೆ ಮತ್ತು ಅನಂತ ದೇಶಪಾಂಡೆ ಅವರ ಬೇಂದ್ರೆ ದರ್ಶನ ಕಾರ್ಯಕ್ರಮದಲ್ಲಿ ಅವರು ಮಾತನಾಡಿ, ಬದುಕಿಗಾಗಿ ಶಿಕ್ಷಣ ಪಡೆಯಬೇಕೆ ಹೊರತು, ಉದ್ಯೋಗ ಅಥವಾ ಹಣಗಳಿಕೆಗಾಗಿ ಅಲ್ಲ. ಎಲ್ಲವನ್ನು ಹಣದಿಂದ ಕೊಂಡುಕೊಳ್ಳಲಾಗುವುದಿಲ್ಲ.

ದೊಡ್ಡ ಬಂಗಲೆಯಲ್ಲಿರುವ ಶ್ರೀಮಂತನಿಗಿಂತ ಮನೆ ಹೊರಗೆ ಮಲಗಿರುವ ಭಿಕ್ಷುಕ ತುಂಬ ನೆಮ್ಮದಿಯಿಂದ ಇರುತ್ತಾನೆ. ಸಂತೋಷ-ಸಂಭ್ರಮ ಕೊಂಡುಕೊಳ್ಳುವ ವಸ್ತುಗಳಲ್ಲ. ಅವುಗಳನ್ನು ಅನುಭವಿಸಬೇಕಾಗುತ್ತದೆ ಎಂದರು.

ದೂರದರ್ಶನ ಕಲಾವಿದ ಧಾರವಾಡದ ಅನಂತ ದೇಶಪಾಂಡೆ ತಮ್ಮ ಅಭಿನಯದೊಂದಿಗೆ ದ.ರಾ ಬೇಂದ್ರೆಯವರೇ ಕಣ್ಮುಂದೆ ತಂದು ನಿಲ್ಲಿಸಿ, ಬೇಂದ್ರೆ ಜೀವನ ದರ್ಶನ ಮಾಡಿಸಿದರು.

ಹಾಸ್ಯಕೂಟ ಸಂಚಾಲಕ ಗುಂಡೇನಟ್ಟಿ ಮಧುಕರ ಪ್ರಾಸ್ತಾವಿಕವಾಗಿ ಮಾತನಾಡಿದರು. ಉಮೇಶ ಬಡಿಗೇರ ನಿರೂಪಿಸಿದರು. ತೇಜೋಮಯ ಹಾಗೂ ಹಾಸ್ಯಕೂಟ ಪದಾಧಿಕಾರಿ ಪ್ರೊ. ಜಿ.ಕೆ. ಕುಲಕರ್ಣಿ, ಜಿ.ಎಸ್.ಸೋನಾರ, ಎಂ.ಬಿ.ಹೊಸಳ್ಳಿ, ಅರವಿಂದ ಹುನಗುಂದ, ಚಿದಂಬರ ಮುನವಳ್ಳಿ, ವಿನೋದ ಸಪ್ಪಣ್ಣವರ, ಬಸವರಾಜ ತಳವಾರ, ಪತ್ರಕರ್ತ ಮುರುಗೇಶ ಶಿವಪೂಜಿ, ಹಾಸ್ಯ ಕಲಾವಿದ ರವಿ ಭಜಂತ್ರಿ, ಬೆಳಗಾವಿಯ ಡಿಡಿಪಿಐ ಲೀಲಾವತಿ ಹಿರೇಮಠ, ಪ್ರೊ. ಎಂ.ಎಸ್. ಇಂಚಲ, ಡಾ.ಎಚ್.ಬಿ. ರಾಜಶೇಖರ, ಡಾ.ಅರವಿಂದ ಕುಲಕರ್ಣಿ, ಪದ್ಮಾ ಕುಲಕರ್ಣಿ, ಶಿರೀಷ ಜೋಶಿ, ಡಾ.ರಾಮಕೃಷ್ಣ ಮರಾಠಿ, ಬಿ.ಕೆ.ಕುಲಕರ್ಣಿ, ಶರಣಗೌಡ ಪಾಟೀಲ, ಶಾಂತಾ ಆಚಾರ್ಯ, ದೀಪಿಕಾ ಚಾಟೆ ಇತರರಿದ್ದರು.