ವಿಜಯವಾಣಿ ಸುದ್ದಿಜಾಲ ಧಾರವಾಡ
ಚಿತ್ರಕಲೆಗೆ ಬಹು ದೊಡ್ಡ ಅವಕಾಶವಿದೆ. ಜಗತ್ತೇ ಅದಕ್ಕೆ ಮಾರುಕಟ್ಟೆಯಾಗಿದೆ ಎಂದು ಹಿರಿಯ ಕಲಾವಿದ ಬಿ. ಮಾರುತಿ ಹೇಳಿದರು.
ನಗರದ ಕರ್ನಾಟಕ ವಿದ್ಯಾವರ್ಧಕ ಸಂಘವು ಏರ್ಪಡಿಸಿದ್ದ ಎಂಬಿಬಿಎಸ್ 2ನೇ ವರ್ಷದ ವಿದ್ಯಾರ್ಥಿ ನಿಶಾಂತ ಬಳಿಗಾರ ಅವರ ಚಿತ್ರ ಕಲೆಯ ಮೂರು ದಿನದ ಪ್ರದರ್ಶನಕ್ಕೆ ಚಾಲನೆ ನೀಡಿ ಅವರು ಮಾತನಾಡಿದರು.
ಚಿತ್ರಕಲೆಗೆ ವಿಶೇಷವಾದ ಗೌರವ ಇದೆ. ವೈದ್ಯಕಿಯ ಕ್ಷೇತ್ರದಲ್ಲಿ ಪರಿಣಿತಿ ಇರುವಂತೆ ಚಿತ್ರಕಲೆಯಲ್ಲೂ ಪರಿಣಿತಿಗಳಿವೆ. ಚಿತ್ರಕಲೆ ಯಾವಾಗಲೂ ಶ್ರದ್ಧೆ ಮತ್ತು ನಿರಂತರ ಶ್ರಮ ಬಯಸುತ್ತದೆ. ಕಲೆ ಎನ್ನುವುದು ಧ್ಯಾನ ಇದ್ದಂತೆ. ಧ್ಯಾನ ಸ್ಥಿತಿಗೆ ಹೋದಾಗ ಮಾತ್ರ ಉತ್ಕೃಷ್ಟ ಕಲೆ ರೂಪ ತಾಳಲು ಸಾಧ್ಯ. ನಿಶಾಂತ ಬಳಿಗಾರ ಅವರಿಗೆ ಕಲೆ ಒಲಿದಿದೆ ಎಂದರು.
ಕಲಾವಿದ ಎಫ್ .ವಿ. ಚಿಕ್ಕಮಠ ಮಾತನಾಡಿ, ನಿರಂತರ ಶ್ರಮ ಇದ್ದಾಗ ಮಾತ್ರ ಚಿತ್ರಕಲೆ ಕೈ ಹಿಡಿಯಲಿದೆ. ರೋಗಿಗಳಿಗೆ ಚಿತ್ರಕಲೆ ಒಂದು ಚಿಕಿತ್ಸೆಯಾಗಿಯೂ ನೋಡಬಹುದು. ತನ್ನದೇ ಆದ ಶೈಲಿ ಪ್ರತಿ ಕಲಾವಿದ ರೂಪಿಸಿಕೊಳ್ಳಬೇಕು. ಚಿತ್ರಕಲೆ ಪ್ರದರ್ಶನ ಮಾಡುವುದೆಂದರೆ ತನ್ನ ಅಭಿವ್ಯಕ್ತಿಯನ್ನು ವ್ಯಕ್ತಪಡಿಸುವುದಾಗಿದೆ. ಕಲಾವಿದನಲ್ಲಿ ಸೃಜನಶೀಲತೆ ಮತ್ತು ಸೌಜನ್ಯ ಮುಖ್ಯ ಎಂದರು.
ನಿಶಾಂತ ಬಳಿಗಾರ ಮಾತನಾಡಿದರು. ಡಾ. ಮಹೇಶ ಹೊರಕೇರಿ ಅಧ್ಯಕ್ಷತೆ ವಹಿಸಿದ್ದರು. ಶಂಕರ ಹಲಗತ್ತಿ, ಡಾ. ಉಮಾ ಬಳಿಗಾರ, ಡಾ. ವಿಜಯಕುಮಾರ ಬಳಿಗಾರ, ಡಾ. ಸುರೇಶ ಮನಗುತ್ತಿ, ಡಾ ರಾವೇಂದ್ರ, ಚಂದ್ರು ಬಳಿಗಾರ, ದೀಪಕ ಬಾಣದ, ಶ್ರೀಶೈಲಗೌಡ ಕಮತರ, ಮೀನಾ ಹುರಕಡ್ಲಿ, ಇತರರು ಇದ್ದರು.