ಸವಣೂರ: ಸರ್ವ ಸಂಘ ಪರಿತ್ಯಾಗ ಮಾಡಿರುವ ದಾರ್ಶನಿಕರನ್ನು ಪೂಜ್ಯನೀಯ ಭಾವದಿಂದ ನೋಡುವ ರಾಷ್ಟ್ರದಲ್ಲಿರುವ ನಾವೇ ಧನ್ಯರು ಎಂದು ಕೇಂದ್ರ ಸಚಿವ ಪ್ರಲ್ಹಾದ ಜೋಶಿ ಹೇಳಿದರು.
ಪಟ್ಣಣದ ಕಲ್ಮಠದ ಲಲಾಟೇಶ್ವರ ಮಂಗಲ ಭವನದಲ್ಲಿ ಭಾನುವಾರ ಏರ್ಪಡಿಸಿದ್ದ ಶ್ರೀ ಲಿಂ. ಸಿದ್ಧಲಿಂಗ ಸ್ವಾಮೀಜಿ ಹಾಗೂ ಲಿಂ. ಸಂಗನಬಸವ ಸ್ವಾಮೀಜಿ ಅವರ ಸಂಸ್ಮರಣ ಮಹೋತ್ಸವ, 201ನೇ ಮಾಸಿಕ ಶಿವಾನುಭವ, ಅತಿಥಿ ಗೃಹ, ಶಾಲಾ ನೂತನ ಕಟ್ಟಡ ಉದ್ಘಾಟನೆ, ಕಾರ್ತಿಕ ಮಹೋತ್ಸವ ಹಾಗೂ ಸಾಂಸ್ಕೃತಿಕ ಕಾರ್ಯಕ್ರಮದಲ್ಲಿ ಸನ್ಮಾನ ಸ್ವೀಕರಿಸಿ ಅವರು ಮಾತನಾಡಿದರು.
ದಾರ್ಶನಿಕರು, ಸಂತರು ಹಾಗೂ ಶರಣರ ನಡೆ, ನುಡಿ, ಆಚಾರ-ವಿಚಾರಗಳನ್ನು ಮೈಗೂಡಿಸಿಕೊಂಡು ರಾಷ್ಟ್ರ ಅಭಿವೃದ್ಧಿಯತ್ತ ಸಾಗುತ್ತಿರುವ ಹಿನ್ನೆಲೆಯಲ್ಲಿ ಜಗತ್ತು ಇಂದು ಭಾರತದತ್ತ ತಿರುಗಿ ನೋಡುವಂತಾಗಿದೆ. ಕಳೆದ ಹತ್ತು ವರ್ಷಗಳಲ್ಲಿ ಜಗತ್ತು ಬದಲಾದ ಭಾರತವನ್ನು ಬೆರಗುಗಣ್ಣಿನಿಂದ ನೋಡುತ್ತಿದೆ ಎಂದರು.
ಮಾಜಿ ಮುಖ್ಯಮಂತ್ರಿ, ಶಾಸಕ ಬಸವರಾಜ ಬೊಮ್ಮಾಯಿ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿ, ಬಸವಣ್ಣನವರ ವಚನಗಳಲ್ಲಿ ಆಧುನಿಕ ಸಮಸ್ಯೆಗಳಿಗೆ ಪರಿಹಾರ ಕಾಣಲು ಸಾಧ್ಯವಿದೆ. ಬದುಕುವ ರೀತಿಯನ್ನು ಶರಣರು ವಚನಗಳಲ್ಲಿ ತಿಳಿಸಿದ್ದಾರೆ. ಅಂತಹ ವಿಚಾರಗಳನ್ನು ಶಿವಾನುಭವ ಕಾರ್ಯಕ್ರಮಗಳು ತಿಳಿಸುತ್ತಿವೆ. ಇದರಿಂದ ಸಮಾಜದಲ್ಲಿ ಸಾಮಾಜಿಕ ನ್ಯಾಯ ಕಾಣಲು ಸಾಧ್ಯವಾಗುತ್ತಿದೆ ಎಂದರು.
ಪ್ರತಿಯೊಬ್ಬರೂ ಆತ್ಮಸಾಕ್ಷಿಯಿಂದ ಬದುಕಬೇಕು. ದ್ವೇಷ, ಅಸೂಯೆ ಮರೆತು ಜೀವನ ನಡೆಸಲು ಶರಣರ ಜೀವನವನ್ನು ಅರ್ಥೈಸಿಕೊಳ್ಳಬೇಕು. ಸಾವು, ಮರೆವು, ಅರಿವು ದೇವರು ಕೊಟ್ಟಿರುವ ವರವಾದರೆ, ಹಸಿವು ಬದುಕಿನ ಬೆಳವಣಿಗೆಯ ಆಸರೆಯಾಗಿದೆ ಎಂದರು.
ಹುಬ್ಬಳ್ಳಿ ಬೃಹನ್ಮಠದ ಡಾ. ಚಂದ್ರಶೇಖರ ಶಿವಯೋಗಿ ರಾಜೇಂದ್ರ ಸ್ವಾಮೀಜಿ ಸಾನ್ನಿಧ್ಯ ವಹಿಸಿ ಆಶೀರ್ವಚನ ನೀಡಿದರು. ಧಾರವಾಡ ಮುರುಘಾಮಠದ ಡಾ. ಮಲ್ಲಿಕಾರ್ಜುನ ಸ್ವಾಮೀಜಿ ಅವರು ಅಥಣಿ ಗಚ್ಚಿನಮಠದ ಲಿಂ. ಮುರುಘೇಂದ್ರ ಶಿವಯೋಗಿಗಳ ಜೀವನ ದರ್ಶನ ಕುರಿತು ಪ್ರವಚನ ನೀಡಿದರು. ಅಡವಿಸ್ವಾಮಿಮಠದ ಕುಮಾರ ಸ್ವಾಮೀಜಿ, ಹಾವೇರಿ ಹುಕ್ಕೇರಿಮಠದ ಸದಾಶಿವ ಸ್ವಾಮೀಜಿ, ದೊಡ್ಡಹುಣಸೆಕಲ್ಮಠದ ಚನ್ನಬಸವ ಸ್ವಾಮೀಜಿ ಹಾಗೂ ಸದಾಶಿವಪೇಟೆಯ ಶ್ರೀ ಗದಿಗೇಶ್ವರ ಸ್ವಾಮೀಜಿ ನೇತೃತ್ವ ವಹಿಸಿ ಆಶೀರ್ವಚನ ನೀಡಿದರು.
ಧಾರವಾಡ ಕೆಸಿಸಿ ಬ್ಯಾಂಕ್ ನಿರ್ದೇಶಕ ಎಸ್.ಎಂ. ಗಡೆಪ್ಪನವರ, ಬಿಜೆಪಿ ಸವಣೂರ ಮಂಡಳ ಅಧ್ಯಕ್ಷ ಗಂಗಾಧರ ಬಾಣದ, ಶಿಗ್ಗಾಂವಿ ಮಂಡಳ ಅಧ್ಯಕ್ಷ ಶಿವಾನಂದ ಮ್ಯಾಗೇರಿ, ಗಣ್ಯ ವರ್ತಕರಾದ ಈರಣ್ಣ ಮೆಣಸಿನಕಾಯಿ, ಸಿ.ಸಿ. ಅಂಗಡಿ, ಪಿಎಲ್ಡಿ ಬ್ಯಾಂಕ್ ಅಧ್ಯಕ್ಷ ಬಿ.ಎಂ. ಪಾಟೀಲ, ವಿದ್ಯಾಭಾರತಿ ಶಿಕ್ಷಣ ಸಂಸ್ಥೆ ಅಧ್ಯಕ್ಷ ಡಾ. ಡಿ.ಎನ್. ಗುಂಜಳ, ಡಾ. ಪ್ರವೀಣಕುಮಾರ ಸಿಂಧೂರ, ಇತರರಿದ್ದರು.
ಹುಬ್ಬಳ್ಳಿ ಡಾ. ಗಾಯತ್ರಿ ದೇಶಪಾಂಡೆ ಅವರಿಂದ ಸಂಗೀತ, ಬ್ಯಾಡಗಿ ಶಾರ್ವರೀಸ್ ನಾಟ್ಯ ಕೇಂದ್ರದ ವಿದ್ಯಾರ್ಥಿಗಳಿಂದ ಭರತನಾಟ್ಯ ಪ್ರದರ್ಶನ ಜರುಗಿತು. ಶಿಕ್ಷಕ ಬಸವರಾಜ ಚಳ್ಳಾಳ ಹಾಗೂ ಡಿ.ಎಫ್. ಬಿಂದಲಗಿ ಕಾರ್ಯಕ್ರಮ ನಿರ್ವಹಿಸಿದರು.